ಮುಂಜಾನೆ 9 ರ ಸುಮಾರಿಗೆ ಎಸ್ಲವತ್ ಬನ್ಯಾ ನಾಯಕ್ ವತ್ವರಪಲ್ಲೆ ಹಳ್ಳಿಯ ಬಳಿಯಿರುವ ಹೈದರಾಬಾದ್-ಶ್ರೀಶೈಲಂ ಹೆದ್ದಾರಿಯಲ್ಲಿ ಸುಮಾರು 150 ಹಸುಗಳ ಹಿಂಡನ್ನು ನಿಭಾಯಿಸುತ್ತಿದ್ದಾನೆ. ಈ ಹಿಂಡು ಪೂರ್ವಘಟ್ಟದ ನಲ್ಲಮಲ ಶ್ರೇಣಿಯ ಕೇಂದ್ರಭಾಗದಲ್ಲಿರುವ ಅಮ್ರಾಬಾದ್ ಹುಲಿ ಮೀಸಲು ಪ್ರದೇಶಕ್ಕೆ ನಿಧಾನವಾಗಿ ಪ್ರವೇಶಿಸುತ್ತಿವೆ. ಕೆಲವು ಜಾನುವಾರುಗಳು ಹುಲ್ಲು ಮೇಯುತ್ತಿದ್ದರೆ ಇನ್ನುಳಿದವುಗಳು ನವಿರಾದ ಎಲೆಗಳನ್ನು ಹೊಂದಿರುವ ಮರದ ಗೆಲ್ಲುಗಳನ್ನು ಎಟಕಿಸಿಕೊಳ್ಳುವುದರಲ್ಲಿ ಮಗ್ನವಾಗಿವೆ.
75 ರ ಪ್ರಾಯದ ನಾಯಕ ಲಂಬಾಡಿ ಸಮುದಾಯಕ್ಕೆ ಸೇರಿದವನು. ಇಲ್ಲಿರುವ ಬಹುತೇಕ ಜಾನುವಾರು ತಳಿಗಾರರಂತೆ ಈತನ ಬಳಿಯೂ ತುರುಪು ಜಾತಿಯ ಜಾನುವಾರುಗಳೇ ಇವೆ. ಲಂಬಾಡಿ (ಒಂದು ಬಗೆಯ ಪರಿಶಿಷ್ಟ ಜಾತಿ), ಯಾದವ (ಗೊಲ್ಲ) (ಓ.ಬಿ.ಸಿ) ಮತ್ತು ಚೆಂಚು (ಹೆಸರಿಸಲೇಬೇಕಾಗಿರುವ ಒಂದು ದುರ್ಬಲ ಬುಡಕಟ್ಟು ಗುಂಪು) ಸಮುದಾಯಗಳು ಸಾಂಪ್ರದಾಯಿಕವಾಗಿ ತುರುಪು ತಳಿಯನ್ನು ನೋಡಿಕೊಳ್ಳುವ ತಳಿಗಾರರು. ಈ ತಳಿಯ ಜಾನುವಾರುಗಳಿಗೆ ಚಿಕ್ಕ ಮತ್ತು ಹರಿತವಾದ ಕೊಂಬುಗಳಿದ್ದರೆ, ಕಠಿಣವಾದ ಮತ್ತು ಸದೃಢವಾದ ಕಾಲುಗಳಿವೆ. ಒದ್ದೆಯಾದ, ಒಣಗಿದ, ಕಲ್ಲುಗಳಿಂದ ತುಂಬಿರುವ ಪ್ರದೇಶಗಳೆಂಬ ಭೇದವಿಲ್ಲದೆ ತರಹೇವಾರಿ ಪ್ರದೇಶಗಳಲ್ಲಿ ಇವುಗಳು ಸರಾಗವಾಗಿ ಸಾಗಬಲ್ಲವು. ಜೊತೆಗೇ ಹೆಚ್ಚಿನ ಭಾರವನ್ನೂ ಕೂಡ ಹೊರಬಲ್ಲವು. ಈ ಪ್ರದೇಶಗಳಲ್ಲಿರುವ ಭಾರೀ ಉಷ್ಣತೆಯನ್ನೂ ಕೂಡ ಇವುಗಳು ಕಿಂಚಿತ್ತು ನೀರಿನ ಸಹಾಯದಿಂದಷ್ಟೇ ದೀರ್ಘಕಾಲದವರೆಗೆ ಸಹಿಸಿಕೊಳ್ಳಬಲ್ಲಷ್ಟು ಸಾಮಥ್ರ್ಯವುಳ್ಳವು.
ಅಮ್ರಾಬಾದ್ ಉಪಜಿಲ್ಲೆಯು ತೆಲಂಗಾಣ-ಕರ್ನಾಟಕ ಗಡಿಭಾಗದ ಪೂರ್ವಭಾಗಕ್ಕಿರುವ ಹಳ್ಳಿಗಳ ಕಡೆಗಿದೆ. ಈ ಭಾಗಗಳಿಂದ ಜಾನುವಾರುಗಳನ್ನು ಕೊಳ್ಳಲೆಂದೇ ಬಹಳಷ್ಟು ಮಂದಿ ಬರುತ್ತಾರೆ. ಇನ್ನು ಜಾನುವಾರುಗಳ ಮೈ ಮೇಲೆ ಕಲೆಗಳಿರುವುದರಿಂದ ಇವುಗಳನ್ನು 'ಪೋಡಾ ತುರುಪು' ಎಂದೂ ಕರೆಯಲಾಗುತ್ತದೆ. ತೆಲುಗು ಭಾಷೆಯಲ್ಲಿ 'ಪೋಡಾ' ಎಂದರೆ ಕಲೆಗಳು ಮತ್ತು 'ತುರುಪು' ಎಂದರೆ ಪೂರ್ವದಿಕ್ಕು. ಟ್ರ್ಯಾಕ್ಟರ್ ಮತ್ತು ಇತರ ಕೃಷಿಸಂಬಂಧಿ ಯಂತ್ರೋಪಕರಣಗಳನ್ನು ಕೊಳ್ಳುವಷ್ಟು ಸ್ಥಿತಿವಂತರಾಗಿಲ್ಲದ ಅದೆಷ್ಟೋ ಮಂದಿ ಚಿಕ್ಕಪುಟ್ಟ ರೈತರಿಗೆ ಪೋಡಾ ತುರುಪು ಬಹಳ ಉಪಯುಕ್ತ ಜಾನುವಾರೆಂಬುದರಲ್ಲಿ ಸಂಶಯವಿಲ್ಲ.















