ಭಾನ್ವರಿದೇವಿಯ 13 ರ ಪ್ರಾಯದ ಮಗಳು ಹಳ್ಳಿಯ ಕೆಲ ಮೇಲ್ಜಾತಿಯ ಪುಂಡ ಯುವಕರಿಂದ ಸಜ್ಜೆಯ ಹೊಲದಲ್ಲಿ ಅತ್ಯಾಚಾರಕ್ಕೊಳಗಾದಾಗ ಭಾನ್ವರಿದೇವಿ ಆ ಅತ್ಯಾಚಾರಿಗಳನ್ನು ಬೆಂಡೆತ್ತಲು ಸ್ವತಃ ಲಾಠಿ ಹಿಡಿದು ಹೊರಟಿದ್ದಳು. ಪೋಲೀಸ್ ಅಥವಾ ನ್ಯಾಯಾಲಯದ ಬಗ್ಗೆ ಆಕೆಗೆ ಯಾವ ನಂಬಿಕೆಯೂ ಇರಲಿಲ್ಲ. ಅಷ್ಟಕ್ಕೂ ಅಹಿರೋಂಕಾ ರಾಂಪುರ ಎಂಬ ಮೇಲ್ಜಾತಿಯ ಶಕ್ತಿಗಳಿಂದಾಗಿ ಆಕೆಗೆ ಈ ಎರಡು ಮೂಲಗಳಿಂದಲೂ ಯಾವುದೇ ಬಗೆಯ ಪರಿಹಾರವು ದೊರಕುವ ನಿರೀಕ್ಷೆಗಳಿರಲಿಲ್ಲ. "ಜಿಲ್ಲೆಯ ಜಾತಿ ಪಂಚಾಯತ್ ನನಗೆ ನ್ಯಾಯ ಕೊಡಿಸುವ ಭರವಸೆಯನ್ನು ನೀಡಿತ್ತು. ಆದರೆ ಅವರು ನನ್ನನ್ನೂ, ನನ್ನ ಕುಟುಂಬವನ್ನೂ ರಾಂಪುರದಿಂದಲೇ ಹೊರಗಟ್ಟಿದರು," ಎನ್ನುತ್ತಿದ್ದಾಳೆ ಭಾನ್ವರಿದೇವಿ. ಈ ಅತ್ಯಾಚಾರವು ನಡೆದು ಬರೋಬ್ಬರಿ ಒಂದು ದಶಕವೇ ಕಳೆದಿದ್ದರೂ ಅಜ್ಮೇರ್ ಜಿಲ್ಲೆಯಲ್ಲಿ ಯಾರಿಗೂ ಶಿಕ್ಷೆಯಾಗಿರಲಿಲ್ಲ.
ರಾಜಸ್ಥಾನದಲ್ಲಿ ಇದು ಅಂಥಾ ದೊಡ್ಡ ಸಂಗತಿಯೇನಲ್ಲ. ಈ ರಾಜ್ಯದಲ್ಲಿ ಒಂದು ಸರಾಸರಿಯ ಪ್ರಕಾರ ಪ್ರತೀ 60 ತಾಸಿನಲ್ಲಿ ಓರ್ವ ದಲಿತ ಮಹಿಳೆಯ ಅತ್ಯಾಚಾರವಾಗಿರುತ್ತದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ವರದಿಯಲ್ಲಿರುವ ಒಂದು ಮಾಹಿತಿಯ ಪ್ರಕಾರ 1991 ರಿಂದ 1996 ರ ಅವಧಿಯಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯರ ಮೇಲೆ ನಡೆದ ದೈಹಿಕ ದೌರ್ಜನ್ಯಗಳ ಸುಮಾರು 900 ಪ್ರಕರಣಗಳು ದಾಖಲಾಗಿವೆ. ಅಂದರೆ ವರ್ಷವೊಂದಕ್ಕೆ 150 ಪ್ರಕರಣಗಳು – ಪ್ರತೀ 60 ತಾಸಿಗೆ ಒಂದು ಪ್ರಕರಣ (ರಾಷ್ಟ್ರಪತಿ ಆಳ್ವಿಕೆಯು ಜಾರಿಯಲ್ಲಿದ್ದ ಕೆಲ ತಿಂಗಳುಗಳನ್ನು ಹೊರತುಪಡಿಸಿದರೆ ಈ ಅವಧಿಯಲ್ಲಿ ರಾಜ್ಯದ ಆಡಳಿತಾಧಿಕಾರವು ಸಂಪೂರ್ಣವಾಗಿ ಭಾರತೀಯ ಜನತಾ ಪಕ್ಷದ ಹಿಡಿತದಲ್ಲಿತ್ತು). ಅಷ್ಟಕ್ಕೂ ಈ ಅಂಕಿಅಂಶಗಳು ಇಲ್ಲಿಯ ನೈಜಪರಿಸ್ಥಿತಿಯನ್ನೇನೂ ಹೇಳುತ್ತಿಲ್ಲ. ದಾಖಲಾಗದೆ ಉಳಿದಿರುವ ಪ್ರಕರಣಗಳನ್ನು ಪರಿಗಣಿಸಿದರೆ ಈ ರಾಜ್ಯದಲ್ಲಾಗುತ್ತಿರುವ ಪ್ರಕರಣಗಳ ಸಂಖ್ಯೆಯು ಇಡೀ ದೇಶದಲ್ಲೇ ಅತ್ಯಂತ ಕೆಟ್ಟದ್ದೇನೋ.
ಧೋಲಪುರ್ ಜಿಲ್ಲೆಯ ನಸ್ಕೋಡಾದಲ್ಲಿ ಇಂಥಾ ದೌರ್ಜನ್ಯಕ್ಕೊಳಗಾದ ದಲಿತ ವ್ಯಕ್ತಿಯೊಬ್ಬ ಹಳ್ಳಿಯಿಂದಲೇ ಕಾಲ್ಕಿತ್ತಿದ್ದಾನೆ. ಈ ಪ್ರದೇಶಗಳಲ್ಲಿ ಆಗಿರುವ ಅತೀ ಕೀಳುಮಟ್ಟದ ಅಮಾನವೀಯ ದೌರ್ಜನ್ಯಗಳಲ್ಲಿ ಇದೂ ಒಂದು. ಎಪ್ರಿಲ್ 1998 ರಲ್ಲಿ ರಾಮೇಶ್ವರ ಜಾತವ್ ಎಂಬ ದಲಿತನೊಬ್ಬ ಮೇಲ್ಜಾತಿಯಾದ ಗುಜ್ಜರ್ ಸಮುದಾಯದ ವ್ಯಕ್ತಿಯೊಬ್ಬನಿಗೆ ನೀಡಿದ್ದ 150 ರೂಪಾಯಿಗಳ ಸಾಲವನ್ನು ಮರಳಿ ಕೇಳಿದ್ದ. ಅದು ಇಷ್ಟೆಲ್ಲಾ ರಾದ್ಧಾಂತಗಳಿಗೆ ಮೂಲವಾಗುವುದೆಂದು ಅವನಿಗಾದರೂ ಏನು ತಿಳಿದಿತ್ತು? ಆತನ ಬೇಡಿಕೆಯಿಂದ ರೊಚ್ಚಿಗೆದ್ದ ಕೆಲ ಗುಜ್ಜರ್ ಯುವಕರು ಸೇರಿಕೊಂಡು ಜಾತವನ ಮೂಗಿನಲ್ಲಿ ತೂತು ಕೊರೆದು, ಆ ತೂತಿನಿಂದ ಸುಮಾರು ಒಂದು ಮೀಟರ್ ಉದ್ದದ, 2 ಮಿಲಿಮೀಟರ್ ದಪ್ಪದ ಸೆಣಬಿನ ದಾರವನ್ನು ತೂರಿಸಿ ಮೂಗಿನ ಹೊಳ್ಳೆಗಳಿಂದ ತೆಗೆದಿದ್ದರು. ನಂತರ ಈ ಮೂಗುದಾರವನ್ನು ಹಿಡಿದುಕೊಂಡೇ ಆತನನ್ನು ಹಳ್ಳಿಯ ಗಲ್ಲಿಗಳಲ್ಲಿ ಮೆರವಣಿಗೆ ಮಾಡಿಸಲಾಯಿತು.
ಈ ಘಟನೆಯು ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿ ದೇಶದೆಲ್ಲೆಡೆ ಆಕ್ರೋಶಕ್ಕೆ ಗುರಿಯಾಗಿದ್ದು ಸತ್ಯ. ಇನ್ನು ಮುದ್ರಣ ಮತ್ತು ಟೆಲಿವಿಷನ್ ಮಾಧ್ಯಮಗಳಿಂದಾಗಿ ಇದು ಹೊರದೇಶಗಳಲ್ಲೂ ವರದಿಯಾಯಿತು. ಒಟ್ಟಿನಲ್ಲಿ ಇಡೀ ಪ್ರಕರಣವು ಈ ಮಟ್ಟಿಗೆ ಸುದ್ದಿಯಾದರೂ ನ್ಯಾಯ ಸಿಗುವ ಭರವಸೆಯೇನೂ ಇರಲಿಲ್ಲ. ಹಳ್ಳಿಯೊಳಗಿರುವ ಭಯದ ವಾತಾವರಣ ಮತ್ತು ಅಧಿಕಾರಶಾಹಿಯು ಹುಟ್ಟಿಸಿರುವ ಪ್ರತಿಕೂಲ ಪರಿಸ್ಥಿತಿಗಳು ಇದನ್ನು ಕಾಯ್ದುಕೊಂಡು ಬಂದಿವೆ. ಇತ್ತ ಪ್ರಕರಣಕ್ಕಿದ್ದ ರೋಚಕತೆ ಮತ್ತು ಸುದ್ದಿ ಆಕರ್ಷಣೆಯು ಕಮ್ಮಿಯಾಗುತ್ತಾ ಹೋದಂತೆ ಕ್ರಮೇಣ ಮಾಧ್ಯಮಗಳೂ ಕೂಡ ಇದರಲ್ಲಿ ತನ್ನ ಆಸಕ್ತಿಯನ್ನು ಕಳೆದುಕೊಂಡವು. ಮಾನವ ಹಕ್ಕುಗಳನ್ನು ಪ್ರತಿಪಾದಿಸುವ ಕೆಲ ಸಂಸ್ಥೆಗಳ ಕತೆಯೂ ಇದೇ ಆಗಿತ್ತು. ಮಾಧ್ಯಮಗಳು ಬಂದು ಹೋದ ನಂತರ ಉಳಿದ ರೋದನೆಯನ್ನು ಮಾತ್ರ ಈ ಪ್ರಕರಣಕ್ಕೆ ಬಲಿಯಾದವರು ಏಕಾಂಗಿಯಾಗಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದ್ದು ವಿಪರ್ಯಾಸವೇ ಸರಿ. ಸ್ವತಃ ರಾಮೇಶ್ವರ್ ಕೂಡ ನ್ಯಾಯಾಲಯದಲ್ಲಿ ತನ್ನ ಧಾಟಿಯನ್ನು ಬದಲಾಯಿಸಿದ್ದ. ಹೌದು, ದೌರ್ಜನ್ಯವು ನಿಜಕ್ಕೂ ನಡೆದಿತ್ತು. ಆದರೆ ರಾಮೇಶ್ವರ್ ತನ್ನ ದೂರಿನಲ್ಲಿ ಹೆಸರಿಸಿದ್ದ ಆರು ಆರೋಪಿಗಳು ಮಾತ್ರ ಇದನ್ನು ಮಾಡಿರಲಿಲ್ಲ. ರಾಮೇಶ್ವರ್ ನ್ಯಾಯಾಲಯದಲ್ಲಿ ತಪ್ಪಿತಸ್ಥನನ್ನು ಗುರುತಿಸಲು ವಿಫಲನಾಗಿದ್ದ.
ಇತ್ತ ದೌರ್ಜನ್ಯದ ಪ್ರಕರಣದಲ್ಲಾದ ಗಾಯಗಳ ಬಗ್ಗೆ ದಾಖಲಿಸಿದ್ದ ಹಿರಿಯ ವೈದ್ಯಕೀಯ ಅಧಿಕಾರಿಯೊಬ್ಬರು ತನ್ನ ಮರೆವಿನ ಕಾರಣವನ್ನು ಮುಂದಿಟ್ಟಿದ್ದರು. ಗಾಯಾಳುವಾಗಿದ್ದ ರಾಮೇಶ್ವರ್ ಈ ವೈದ್ಯಕೀಯ ಅಧಿಕಾರಿಯನ್ನು ಸಂಪರ್ಕಿಸಿದ್ದು ಸತ್ಯವೇ ಆಗಿತ್ತು. ಆದರೆ ಅಧಿಕಾರಿ ಹೇಳುವ ಪ್ರಕಾರ ರಾಮೇಶ್ವರ್ ತನಗಾಗಿದ್ದ ವಿಚಿತ್ರ ಗಾಯಗಳಿಗೆ ಯಾವ ಕಾರಣವನ್ನು ನೀಡಿದ್ದ ಎಂಬುದು ಮಾತ್ರ ಆತನಿಗೆ ನೆನಪಿರಲಿಲ್ಲ.






