"ಮಳೆ ಮತ್ತೆ ನಿಂತುಹೋಗಿದೆ" ಎನ್ನುತ್ತಾ ಧರ್ಮ ಗರೇಲ್ ಬಿದಿರಿನ ಕೋಲಿನ ಸಹಾಯದಿಂದ ಹೊಲದ ಕಡೆ ನಡೆಯುತ್ತಾ ಹೇಳುತ್ತಾರೆ. “ಜೂನ್ ಒಂದು ವಿಲಕ್ಷಣ ತಿಂಗಳು. 2-3 ಗಂಟೆಗಳ ಕಾಲ ಮಳೆಯಾಗುತ್ತದೆ. ಕೆಲವೊಮ್ಮೆ ಸಣ್ಣಗೆ, ಕೆಲವೊಮ್ಮೆ ಜೋರಾಗಿ. ಆದಾಗ್ಯೂ, ಮುಂದಿನ ಕೆಲವು ಗಂಟೆಗಳವರೆಗೆ ಅಸಹನೀಯ ಬಿಸಿಲು ಮೇಲುಗೈ ಸಾಧಿಸುತ್ತದೆ. ಈ ಬಿಸಿಲು ಮಣ್ಣಿನ ಅಷ್ಟೂ ತೇವಾಂಶವನ್ನು ಹೀರಿಕೊಳ್ಳುತ್ತದೆ. ಮಣ್ಣು ಮತ್ತೆ ಒಣಗುತ್ತದೆ. ಬೆಳೆಗಳು ಹೇಗೆ ಬೆಳೆಯಲು ಸಾಧ್ಯ?”
ಥಾಣೆ ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿರುವ 15 ವಾರ್ಲಿ ಕುಟುಂಬಗಳ ಆದಿವಾಸಿ ಗ್ರಾಮವಾದ ಗರೇಲ್ಪಾದದಲ್ಲಿನ ಎಂಭತ್ತು ವರ್ಷದ ಗರೇಲ್ ಮತ್ತು ಅವರ ಕುಟುಂಬವು ತಮ್ಮ ಒಂದು ಎಕರೆ ಪ್ರದೇಶದಲ್ಲಿ ಭತ್ತವನ್ನು ಬೆಳೆಯುತ್ತಾರೆ. ಜೂನ್ 2019ರಲ್ಲಿ ಅವರು ಬಿತ್ತನೆ ಮಾಡಿದ ಭತ್ತದ ಬೆಳೆ ಸಂಪೂರ್ಣವಾಗಿ ಒಣಗಿ ಹೋಗಿದೆ. ಆ ತಿಂಗಳು, 11 ದಿನಗಳವರೆಗೆ ಕೇವಲ 393 ಮಿ.ಮೀ ಮಳೆಯಾಯಿತು (ಸರಾಸರಿ 421.9 ಮಿ.ಮೀಗಿಂತಲೂ ಕಡಿಮೆ).
ಅವರು ನೆಟ್ಟ ಭತ್ತದ ಬೀಜಗಳು ಮೊಳಕೆ ಕೂಡ ಬರಲಿಲ್ಲ - ಅಲ್ಲದೆ ಅವರು ಬೀಜಗಳು, ರಸಗೊಬ್ಬರ, ಒಂದು ಟ್ರಾಕ್ಟರ್ ಬಾಡಿಗೆಗೆ ಕೊಂಡಿದ್ದು ಮತ್ತು ಇತರ ಕೃಷಿ ವೆಚ್ಚಗಳಾಗಿ ಸುಮಾರು ರೂ. 10,000 ಖರ್ಚು ಮಾಡಿದ್ದಾರೆ.
"ಆಗಸ್ಟ್ ತಿಂಗಳಿನಲ್ಲಿ ಮಾತ್ರ ನಿಯಮಿತ ಮಳೆಯಿಂದಾಗಿ ಭೂಮಿ ತಣ್ಣಗಾಯಿತು. ಎರಡನೆಯ ಬಿತ್ತನೆಯ ಮೂಲಕ ಮಾತ್ರ ನಮಗೆ ಒಂದಿಷ್ಟು ಇಳುವರಿ ಮತ್ತು ಸ್ವಲ್ಪ ಲಾಭ ದೊರಕಿತು”ಎಂದು ಧರ್ಮ ಅವರ 38 ವರ್ಷದ ಮಗ ರಾಜು ಹೇಳಿದರು.
ತಾಲ್ಲೂಕಿನಲ್ಲಿ ಜೂನ್ನಲ್ಲಿ ಮಳೆ ಕೊರತೆಯಾಗಿದ್ದರೆ, ಜುಲೈ ತಿಂಗಳಿನಲ್ಲಿ 947.3 ಮಿ.ಮೀಯಷ್ಟು ಸಾಮಾನ್ಯ ಮಳೆಯಾಗುವಲ್ಲಿ 1586.8 ಮಿ.ಮೀ ಮಳೆಯಾಗಿದೆ. ಆದ್ದರಿಂದ ಗರೇಲ್ ಕುಟುಂಬವು ಎರಡನೇ ಬಿತ್ತನೆಗೆ ಸಿದ್ಧವಾಯಿತು. ಆದರೆ, ಆಗಸ್ಟ್ನಲ್ಲಿ ಮಳೆ ತೀವ್ರಗೊಂಡು ಅಕ್ಟೋಬರ್ ತನಕ ಮುಂದುವರೆಯಿತು. ಥಾಣೆ ಜಿಲ್ಲೆಯ ಎಲ್ಲಾ ಏಳು ತಾಲ್ಲೂಕುಗಳಿಗೆ 116 ದಿನಗಳಲ್ಲಿ ಹೆಚ್ಚುವರಿಯಾಗಿ 1,200 ಮಿ.ಮೀ ಮಳೆಯಾಗಿದೆ.
“ಸಸ್ಯಗಳ ಬೆಳವಣಿಗೆಗೆ ಸಾಕಾಗುವಷ್ಟು ಮಳೆ ಸೆಪ್ಟೆಂಬರ್ ತನಕ ಆಗಿತ್ತು. ಹೊಟ್ಟೆ ಸಿಡಿಯುವವರೆಗೂ ನಾವು ಮನುಷ್ಯರೇ ತಿನ್ನುವುದಿಲ್ಲ, ಸಣ್ಣ ಸಸ್ಯ ತಿನ್ನಲು ಸಾಧ್ಯವೇ?” ರಾಜು ಕೇಳುತ್ತಾರೆ. ಅಕ್ಟೋಬರ್ ಮಳೆಯು ಗರೇಲ್ ಕುಟುಂಬದ ಜಮೀನಿನಲ್ಲಿ ಪ್ರವಾಹಕ್ಕೆ ಕಾರಣವಾಯಿತು. "ನಾವು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಭತ್ತವನ್ನು ಕತ್ತರಿಸಿ ಕಟ್ಟುಗಳಾಗಿ ಜೋಡಿಸಲು ಪ್ರಾರಂಭಿಸಿದ್ದೆವು" ಎಂದು ರೈತ ಮಹಿಳೆ ಮತ್ತು ರಾಜು ಅವರ ಪತ್ನಿ 35 ವರ್ಷದ ಸವಿತಾ ನೆನಪಿಸಿಕೊಳ್ಳುತ್ತಾರೆ. “ನಾವು ಇನ್ನೂ ಉಳಿದ ಬೆಳೆ ಕೊಯ್ಲು ಮಾಡುವುದಿತ್ತು. ಅಕ್ಟೋಬರ್ 5ರ ನಂತರ ಇದ್ದಕ್ಕಿದ್ದಂತೆ ಭಾರಿ ಮಳೆಯಾಗಲು ಪ್ರಾರಂಭಿಸಿತು. ನಾವು ಕಟಾವು ಮಾಡಿದ ಭತ್ತದ ಕಟ್ಟುಗಳನ್ನು ಸಾಧ್ಯವಾದಷ್ಟು ಮನೆಯೊಳಗೆ ಕೊಂಡೊಯ್ಯಲು ಪ್ರಯತ್ನಿಸಿದೆವು ಆದರೆ ಕೆಲವೇ ನಿಮಿಷಗಳಲ್ಲಿ, ನಮ್ಮ ಜಮೀನಿನಲ್ಲಿ ಪ್ರವಾಹ ಉಂಟಾಯಿತು…”
ಆಗಸ್ಟ್ನಲ್ಲಿ ಎರಡನೇ ಬಿತ್ತನೆ ಮಾಡಿದ ನಂತರ, ಗರೇಲ್ ಕುಟುಂಬಕ್ಕೆ 3 ಕ್ವಿಂಟಾಲ್ ಅಕ್ಕಿ ಸಿಕ್ಕಿತು. ಹಿಂದೆ ಅವರು ಮೊದಲ ಬಿತ್ತನೆಯಿಂದಲೇ ಸುಮಾರು 8-9 ಕ್ವಿಂಟಾಲ್ ಅಕ್ಕಿ ಪಡೆಯುತ್ತಿದ್ದರು.












