ಮೊದಲಿಗೆ ತಂಗಮ್ಮ ತನ್ನ ಬರುವಿಕೆಯನ್ನು ಘೋಷಿಸುವುದು ಅಲ್ಲಿ ಬಿದ್ದಿರುವ ತೆಂಗಿನ ಕೋಲನ್ನು ಆಯ್ದುಕೊಂಡು ನಿವೇಶನದ ಪೊದೆಗಳಿಗೆ ಬಡಿಯುವ ಮೂಲಕ. “ಪೊದೆಗಳು ಅಡ್ಡಾದಿಡ್ಡಿಯಾಗಿ ಬೆಳೆದಿರುವ ನಿವೇಶನಗಳಿಗೆ ನಾನು ಬಹಳ ಎಚ್ಚರಿಕೆಯಿಂದ ಪ್ರವೇಶಿಸುತ್ತೇನೆ. ಅಲ್ಲಿಗೆ ಹೋಗುವ ಮೊದಲು ಕೋಲಿನಿಂದ ಬಡಿದು ಸದ್ದು ಮಾಡುತ್ತೇನೆ. ಆಗ ಅಲ್ಲಿರಬಹುದಾದ ಹಾವು ಅಥವಾ ಇತರ ಯಾವುದೇ ಅಪಾಯಕಾರಿ ಜೀವಿಗಳು ಅಲ್ಲಿಂದ ಓಡುತ್ತವೆ.” ಎಂದು ಹೇಳುತ್ತಾರೆ. ಎತ್ತರದ ತೆಂಗಿನ ಮರಗಳ ಅಡಿಯಲ್ಲಿ ಬೆಳೆದು ನಿಂತ ಪೊದೆ ಮತ್ತು ಬಿದ್ದ ಗರಿಗಳು ಮತ್ತು ಹುಲ್ಲಿನ ನಡುವೆ ಇರಬಹುದಾದ ಜೀವಿಗಳ ಕುರಿತು ಬಹಳ ಎಚ್ಚರಿಕೆ ವಹಿಸುತ್ತಾರವರು.
ಈ ಪುಟ್ಟ ಪೊದೆಗಳಿರುವುದು ಎರ್ನಾಲಕುಲಂ ನಗರದ ಹೌಸಿಂಗ್ ಕಾಲನಿಯ ಖಾಲಿ ನಿವೇಶನಗಳಲ್ಲಿ. “ದಾರಿಯುದ್ದಕ್ಕೂ [ಒಳ್ಳೆಯ] ತೆಂಗಿನಕಾಯಿ ಸಿಗುವುದು ಅದೃಷ್ಟದ ಸಂಕೇತ” ಎನ್ನುತ್ತಾರೆ ಈ 62 ವರ್ಷದ ತಮ್ಮ ಜೀವನೋಪಾಯಕ್ಕೆ ಬೇರೆ ಕೆಲಸ ಸಿಗದೆ ತೆಂಗಿನಕಾಯಿಗಳನ್ನು ಒಟ್ಟುಗೂಡಿಸಿ ಮಾರುವ ಮಹಿಳೆ ಹೇಳುತ್ತಾರೆ. ಬಹಳಷ್ಟು ಮಲಯಾಳಿ ಅಡುಗೆ ಮನೆಗಳಲ್ಲಿ ತೆಂಗಿನಕಾಯಿಗೆ ಮಹತ್ವದ ಸ್ಥಾನವಿದ್ದು ಅಲ್ಲಿ ತೆಂಗಿನಕಾಯಿಗೆ ಸದಾ ಬೇಡಿಕೆಯಿರುತ್ತದೆ.
“ಮೊದಲು ಕೆಲಸ ಮುಗಿದ ನಂತರ ಇಲ್ಲಿ ಅಕ್ಕಪಕ್ಕದಲ್ಲಿ ಕಾಯಿ ಹೆಕ್ಕುತ್ತಿದ್ದೆ[ಪುದಿಯ ರೋಡ್ ಜಂಕ್ಷನ್] ಆದರೆ ನನ್ನ ಈಗಿನ ಆರೋಗ್ಯ ಸ್ಥಿತಿ ನನಗೆ ಕೆಲಸ ಮಾಡಲು ಬಿಡುತ್ತಿಲ್ಲ” ಎತ್ತರಕ್ಕೆ ಬೆಳೆದು ನಿಂತ ಹುಲ್ಲಿನ ನಡುವೆ ಸಾಗುತ್ತಾ ಅವರು ಹೇಳುತ್ತಾರೆ. ಒಮ್ಮೊಮ್ಮೆ ಉಸಿರು ತೆಗೆದುಕೊಳ್ಳಲು, ಅಥವಾ ಕಾಯಿ ಹುಡುಕಲು ಅಲ್ಲಲ್ಲಿ ನಿಲ್ಲುತ್ತಾರೆ. ಹೀಗೆ ಕಾಯಿ ಹುಡುಕುವಾಗ ಕಣ್ಣು ಕುರುಡಾಗಿಸುವ ಬಿಸಿಲಿನಿಂದ ಪಾರಾಗಲು ಕಣ್ಣಿಗೆ ಕೈಯನ್ನು ಅಡ್ಡಲಾಗಿ ಹಿಡಿಯುತ್ತಾರೆ.
ಐದು ವರ್ಷಗಳ ಹಿಂದೆ, ತಂಗಮ್ಮ ಉಸಿರಾಟದ ತೊಂದರೆ, ತೀವ್ರ ಆಯಾಸ ಮತ್ತು ಇತರ ಥೈರಾಯ್ಡ್ ಸಂಬಂಧಿತ ತೊಡಕುಗಳಿಂದ ಬಳಲಲು ಪ್ರಾರಂಭಿಸಿದರು. ಇದರಿಂದಾಗಿ ಅವರು ಮಾಡುತ್ತಿದ್ದ ಮನೆಗೆಲಸವನ್ನು ಬಿಡುವಂತಾಯಿತು ಮತ್ತು ಅದರೊಂದಿಗೆ ಅವರಿಗೆ ಬರುತ್ತಿದ್ದ 6,000 ರೂ.ಗಳ ಸಂಪಾದನೆಯೂ ನಿಂತುಹೋಯಿತು. ಆದಾಯದ ಅಗತ್ಯವಿದ್ದ ತಂಗಮ್ಮನಿಗೆ ಮನೆಯಲ್ಲಿ ಉಳಿಯುವುದು ಸುಲಭದ ಆಯ್ಕೆಯಾಗಿರಲಿಲ್ಲ, ಹೀಗಾಗಿ ಅವರು ಮನೆಗಳ ಧೂಳು ಸ್ವಚ್ಚ ಮಾಡುವುದು ಮತ್ತು ನೆರೆಹೊರೆಯ ಅಂಗಳಗಳನ್ನು ಸ್ವಚ್ಛಗೊಳಿಸುವಂತಹ ಕಡಿಮೆ ದೈಹಿಕ ಪ್ರಯಾಸಕರ ಕೆಲಸಗಳಿಗೆ ಹೋಗತೊಡಗಿದರು. ಕೋವಿಡ್ -19 ಅಪ್ಪಳಿಸಿದ ನಂತರ, ಆ ಕೆಲಸವೂ ನಿಂತುಹೋಯಿತು.














