ಫಾತಿಮಾ ಬೀಬಿಯ ನವಜಾತ ಶಿಶುವು ಸಾವನ್ನಪ್ಪಿದ ನಂತರವೇ ಆಕೆ ತನ್ನ ಐದನೇ ಹೆರಿಗೆಗಾಗಿ ಸಮುದಾಯ ಪ್ರಸೂತಿ ಗೃಹಕ್ಕೆ ಬಂದಿದ್ದಳು. ಅವಳ ಎಲ್ಲಾ ಮಕ್ಕಳೂ (ಮೂರು ಹೆಣ್ಣು ಮತ್ತು ಒಂದು ಗಂಡು) ಕೂಡ ಮನೆಯಲ್ಲೇ ಹುಟ್ಟಿದವುಗಳು. ''ಆಮ್ಲಜನಕದ ಕೊರತೆಯಿಂದ ನನ್ನ ಗಂಡುಮಗು ಸಾವನ್ನಪ್ಪಿತ್ತು. ಹೀಗಾಗಿ ಈ ಬಾರಿ ಆಸ್ಪತ್ರೆಗೆ ಬಂದಿದ್ದೇವೆ'', ಎನ್ನುತ್ತಿದ್ದಾರೆ ಫಾತಿಮಾಳ ತಾಯಿ ಜಮೀಲಾ.
ತಾವು ನೆಲೆಸಿರುವ ರಾಮಪುರ ಹಳ್ಳಿಯಿಂದ ಉತ್ತರ 24 ಪರ್ಗನಾಸ್ ಜಿಲ್ಲೆಯಲ್ಲಿರುವ ಬಯೇರ್ಮಾರಿ ಹಳ್ಳಿಗೆ ಇರುವ ಕೇವಲ 30 ನಿಮಿಷಗಳ ದೂರವನ್ನು ಕ್ರಮಿಸಲು ಈ ಕುಟುಂಬವು 700 ರೂಪಾಯಿಗಳನ್ನು ಬಾಡಿಗೆ ವ್ಯಾನಿಗಾಗಿ ಖರ್ಚುಮಾಡಿತ್ತು. ''ಇಲ್ಲಿಯ ಬಡ ಹೆಂಗಸರು ದೋಣಿಗಳಲ್ಲಿ ಆಸ್ಪತ್ರೆಗೆ ಬರುತ್ತಾರೆ. ನೀರಿನಲ್ಲಿ ಹೆಚ್ಚಿನ ಉಬ್ಬರಗಳಿದ್ದಾಗ ಇದು ಅಪಾಯಕಾರಿ. ಇಂಥದ್ದೇ ಘಟನೆಯೊಂದರಲ್ಲಿ ಕಳೆದ ಬಾರಿ ಜನರಿಂದ ತುಂಬಿದ್ದ ದೋಣಿಯೊಂದು ಭಾರೀ ಗಾತ್ರದ ಅಲೆಗಳಿಗೆ ಸಿಲುಕಿ ಕಟ್ಖಲಿ ಪ್ರದೇಶದ ಆಸುಪಾಸಿನಲ್ಲಿ ತಲೆಕೆಳಗಾಗಿತ್ತು. ಕೆಲವರ ಪ್ರಾಣ ಬೇರೆ ಹೋಗಿತ್ತು'', ಎನ್ನುತ್ತಾಳೆ ಆಕೆ.
ಫಾತಿಮಾಳ ಕಷ್ಟದ ಕಥೆಯು ಸುಂದರಬನದಲ್ಲಿ ಗರ್ಭಿಣಿ ಹೆಂಗಸರು ಎದುರಿಸಬೇಕಾದ ಸವಾಲುಗಳಿಗೆ ಕನ್ನಡಿ ಹಿಡಿದಂತಿದೆ. ಇದು ಇತರೆ ವೈದ್ಯಕೀಯ ಸಮಸ್ಯೆಗಳ ವಿಚಾರದಲ್ಲೂ ಸತ್ಯವೇ. ಈ ದ್ವೀಪಪ್ರದೇಶದಲ್ಲಿ ನೆಲೆಸಿರುವ ಎಲ್ಲರಿಗೂ ಕೂಡ ವೈದ್ಯಕೀಯ ನೆರವನ್ನು ಪಡೆಯುವುದೆಂದರೆ ಇಂದಿಗೂ ಕನಸಿನ ಮಾತೇ.
ಹಾಗೆ ನೋಡಿದರೆ ಸುಂದರ್ ಬನ್ ನಲ್ಲಿರುವ ವೈದ್ಯಕೀಯ ಉಪಕೇಂದ್ರಗಳು ಇಲ್ಲವೇ ಇಲ್ಲವೆನ್ನುವಷ್ಟು ಕಮ್ಮಿ. ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯವಸ್ಥೆಯ ಸಹಿತವಾಗಿ ಈ ಉಪಕೇಂದ್ರಗಳು ಇಲ್ಲಿಯ ಸಮುದಾಯದ ಜನರಿಗೆ ಕೈಗೆಟಕುವ ಮೊದಲ ಆರೋಗ್ಯ ಸೇವಾ ಘಟಕಗಳು. ಪ್ರತೀ ಉಪಕೇಂದ್ರವೂ ಕೂಡ 5000 ದಷ್ಟು ಜನರನ್ನು ತಲುಪಬೇಕೆಂಬ ಉದ್ದೇಶವನ್ನಿರಿಸಿಕೊಂಡು ಮಾಡಿದ್ದ ವ್ಯವಸ್ಥೆ. ದಕ್ಷಿಣ 24 ಪರ್ಗನಾಸ್ ಜಿಲ್ಲೆಯ ಪಶ್ಚಿಮ ಶ್ರೀಪತಿನಗರ ಮತ್ತು ಪೂರ್ವ ಶ್ರೀಪತಿನಗರ ಹಳ್ಳಿಗಳ ಒಟ್ಟು ಜನಸಂಖ್ಯೆಯು ಸುಮಾರು 9500 ರಷ್ಟಾಗುತ್ತದೆ (2011 ರ ಜನಗಣತಿಯ ಪ್ರಕಾರ). ಇನ್ನು ಈ ಅವಧಿಯಿಂದ ಹೆಚ್ಚಿದ ಜನಸಂಖ್ಯೆಯನ್ನು ಪರಿಗಣಿಸಿದ್ದೇ ಆದರೆ 10,000 ಕ್ಕೂ ಹೆಚ್ಚು ಜನರು ತಮ್ಮ ವೈದ್ಯಕೀಯ ಅವಶ್ಯಕತೆಗಾಗಿ ಉತ್ತಮ ಉಪಕರಣ, ಸೌಲಭ್ಯಗಳಿಲ್ಲದ ಇರುವ ಎರಡೇ ಎರಡು ಉಪಕೇಂದ್ರಗಳ ಮೇಲೆ ಮತ್ತು ತಮ್ಮನ್ನು ತಾವು ವೈದ್ಯರೆಂದು ಕರೆದುಕೊಳ್ಳುವ ಕೆಲ ಸ್ಥಳೀಯರ ಮೇಲೆಯೇ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ.
ಈ ಎಲ್ಲಾ ಕಾರಣಗಳಿಂದಾಗಿ ಪಶ್ಚಿಮ ಶ್ರೀಪತಿನಗರ ಹಳ್ಳಿಯೂ ಸೇರಿದಂತೆ ಸುಂದರಬನದ ದೂರದೂರದ ಪ್ರದೇಶಗಳಲ್ಲಿ ನೆಲೆಸಿರುವ ಗ್ರಾಮಸ್ಥರು ಮೊಬೈಲ್ ವೈದ್ಯಕೀಯ ಘಟಕಗಳ ಮೊರೆ ಹೋಗಬೇಕಾಗಿ ಬಂದಿದೆ. ಇಂಥಾ ಕೆಲವು ಘಟಕಗಳು ಇಲ್ಲಿಯ ನದಿಗಳನ್ನು ದಾಟುತ್ತಿರುವ ದೋಣಿಗಳಲ್ಲೂ ಕಾರ್ಯನಿರ್ವಹಿಸುತ್ತಿವೆ. ನಾವು ಭೇಟಿ ನೀಡಿದ ದಿನದಂದು ಆಸುಪಾಸಿನ ಪ್ರದೇಶಗಳ ಹಲವು ರೋಗಿಷ್ಠರು ಗುಂಪಾಗಿ ಚಿಕ್ಕದೊಂದು ಖಾಲಿ ಕೋಣೆಯ ಪಕ್ಕದಲ್ಲಿ ನಿಂತಿದ್ದರು. ಆ ದಿನದಂದು ಈ ಪುಟ್ಟ ಕೋಣೆಯೇ ಇವರಿಗಾಗಿ ಕ್ಲಿನಿಕ್ ಆಗಿ ಬದಲಾಗಲಿತ್ತು. ಶಿಬುವಾ ನದಿಯನ್ನು ದಾಟಿ ಎರಡು ಘಂಟೆಗಳ ಪ್ರಯಾಣವನ್ನು ಮುಗಿಸಿದ ವೈದ್ಯಕೀಯ ಸಿಬ್ಬಂದಿಗಳು ಆಗಷ್ಟೇ ಬಂದಿಳಿದಿದ್ದರು. ಇನ್ನು ಆ ದಿನವು ಮಂಗಳವಾರವೂ ಆಗಿತ್ತು ಎನ್ನುವುದನ್ನು ಹೇಳಲೇಬೇಕು. ಪ್ರತೀ ಮಂಗಳವಾರವನ್ನು ಈ ವೈದ್ಯಕೀಯ ತಂಡವು ಹಳ್ಳಿಗೆ ಭೇಟಿಕೊಡುವ ದಿನವೆಂದು ನಿಗದಿಪಡಿಸಲಾಗಿದೆ.







