ತನ್ನ ತಂದೆಯ ವರ್ಷದ ದಿನದಂದು ಈ ಬಾರಿ ತಿರು ಸ್ವಲ್ಪ ಬೇರೆ ಮಾದರಿಯ ವಸ್ತುಗಳನ್ನು ಎಡೆಯಾಗಿ ಇಟ್ಟಿದ್ದರು. ಅವುಗಳಲ್ಲಿ ಹತ್ತು ಬಗೆಯ ಸಾಬೂನು, ಬೇರೆ ಬೇರೆ ಬಗೆಯ ತೆಂಗಿನೆಣ್ಣೆಗಳು ಮತ್ತು ಅವರ ಸ್ಟಾರ್ ಪ್ರೊಡಕ್ಟ್ ಆಗಿರುವ ಅರಿಶಿನ ಪುಡಿ ಸೇರಿದ್ದವು. ಇದರೊಂದಿಗೆ ಒಂದು ಚಿಪ್ಪು ಬಾಳೆಹಣ್ಣು, ಹೂವುಗಳು, ತೆಂಗಿನಕಾಯಿ ಇಟ್ಟು ಹಾರ ಹಾಕಿದ ತಂದೆ ಸುಂದರಮೂರ್ತಿಯವರ ಚಿತ್ರಕ್ಕೆ ಕರ್ಪೂರ ಬೆಳಗಿ ಅರ್ಪಿಸಿದ್ದರು.
“ಅಪ್ಪನಿಗೆ ಇದಕ್ಕಿಂತಲೂ ಒಳ್ಳೆಯ ಮರ್ಯಾದೆ ಇನ್ಯಾವುದಿದ್ದೀತು?” ಎನ್ನುವ ಪ್ರಶ್ನೆಯೊಡನೆ ಫೇಸ್ಬುಕ್ಕಿನಲ್ಲಿ ಅಪ್ಪನ ಫೋಟೊ ಹಾಕಿದ್ದರು. ತಿರುಮೂರ್ತಿಯವರ ಅಪ್ಪ ಈ ಮಂಜಲ್ (ಅರಿಶಿನ) ಕೃಷಿ ಸಾಕೆಂದು ಕೈಬಿಟ್ಟಿದ್ದರು. ಆದರೆ ತಿರುಮೂರ್ತಿ ಎಲ್ಲರೂ ಬೇಡವೆಂದರೂ ಹಟ ಕಟ್ಟಿ ಮಂಜಲ್ ಬೇಸಾಯ ಶುರು ಮಾಡಿದ್ದರು. “ಜನರು ಮಲ್ಲಿ[ಗೆ] ಬೆಳೆದರೆ ದಿನವೂ ಹಣ ಸಿಗುತ್ತದೆನ್ನುವ ಸಲಹೆ ಕೊಟ್ಟಿದ್ದರು. ಆದರೆ ನಾನು ಅವರುಗಳ ಮಾತು ಕೇಳದೆ ಅರಿಶಿನ ನೆಟ್ಟಾಗ ನನ್ನನ್ನು ನೋಡಿ ನಕ್ಕಿದ್ದರು.” ಎಂದು ನಗುತ್ತಾರೆ. ತಿರುಮೂರ್ತಿ ಜನರು ಹೇಳಿದ್ದ ಮಾತು ತಪ್ಪೆಂದು ಸಾಬೀತುಪಡಿಸಿದರು. ಅವರದು ಬಹಳ ಅಪರೂಪದ ಕತೆ. ಆ ಕತೆಯೇ ʼತಿರು ಮೂರ್ತಿಯ ಅರಿಶಿನ ವಿಜಯ.ʼ
43 ವರ್ಷದ ತಿರು ಮೂರ್ತಿಯವರು ತಮಿಳುನಾಡಿನ ಈರೋಡ್ ಜಿಲ್ಲೆಯ ಭವಾನಿಸಾಗರ್ ಬ್ಲಾಕ್ನ ಉಪ್ಪುಪಳ್ಳಮ್ ಕುಗ್ರಾಮದಲ್ಲಿ ತಮ್ಮ ಅಣ್ಣನೊಂದಿಗೆ ಜಂಟಿಯಾಗಿ ಹೊಂದಿರುವ 12 ಎಕರೆ ನೆಲದಲ್ಲಿ ಬೇಸಾಯ ಕಾಯಕ ಮಾಡಿಕೊಂಡಿದ್ದಾರೆ. ಅವರು ಅಲ್ಲಿ ಅರಿಶಿನ, ಬಾಳೆ ಮತ್ತು ತೆಂಗಿನಕಾಯಿ ಹೀಗೆ ಮೂರು ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಅವರು ಅವುಗಳನ್ನು ಸಗಟು ಮಾರಾಟ ಮಾಡುವುದಿಲ್ಲ. ಬೆಲೆಗಳ ಮೇಲೆ ತನಗೆ ನಿಯಂತ್ರಣವಿಲ್ಲದಿದ್ದಾಗ ಹಾಗೆ ಮಾರುವುದು ಅರ್ಥಹೀನವೆಂದು ಅವರು ಹೇಳುತ್ತಾರೆ. ಸ್ಥಳೀಯವಾಗಿ, ರಾಷ್ಟ್ರೀಯವಾಗಿ ಮತ್ತು ಅಂತರರಾಷ್ಟ್ರೀಯವಾಗಿ, ದೊಡ್ಡ ವ್ಯಾಪಾರಿಗಳು, ಕಾರ್ಪೊರೇಟ್ಗಳು ಮತ್ತು ಸರ್ಕಾರಗಳು ಬೆಳೆಗಳ ದರಗಳನ್ನು ನಿಗದಿಪಡಿಸುತ್ತವೆ.
ಅಭಿವೃದ್ಧಿ ಹೊಂದುತ್ತಿರುವ ಅರಿಶಿನ ಮಾರುಕಟ್ಟೆಯಲ್ಲಿ ಭಾರತವು ವಿಶ್ವದ ಅತಿದೊಡ್ಡ ಪಾಲುದಾರ ರಾಷ್ಟ್ರವಾಗಿದೆ. 2019ರಲ್ಲಿ ಬಾರತದ ರಫ್ತು $190 ಮಿಲಿಯನ್ ಮುಟ್ಟಿತು - ಅದು ಜಾಗತಿಕ ವ್ಯಾಪಾರದ ಶೇಕಡಾ 62.6ರಷ್ಟು. ಜೊತೆಗೆ ಭಾರತವು ಆಮದುದಾರ ರಾಷ್ಟ್ರ ಕೂಡಾ ಹೌದು. 11.3ರಷ್ಟು ಆಮದು ಮಾಡಿಕೊಳ್ಳುವ ಮೂಲಕ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಆಮದಿನ ಈ ಬಹುದೊಡ್ಡ ಏರಿಕೆಯು ಭಾರತೀಯ ಅರಿಶಿನ ಬೆಳೆಗಾರರ ಹಿತಾಸಕ್ತಿಗೆ ಧಕ್ಕೆ ತಂದಿದೆ.
ಈರೋಡಿನ ಸ್ಥಳಿಯ ಮಂಡಿಗಳು ಈಗಾಗಲೇ ಈ ಬೆಳೆಗಾರರ ಜೀವ ಹಿಂಡುತ್ತಿದ್ದಾರೆ. ದೊಡ್ಡ ವ್ಯಾಪಾರಿಗಳು ಮತ್ತು ಖರೀದಿದಾರರು ಇದರ ಬೆಲೆಯನ್ನು ನಿಗದಿಪಡಿಸುತ್ತಾರೆ. ಸಾವಯವ ಬೆಳೆಗಳಿಗೆಂದು ಬೇರೆ ಆದ್ಯತೆಯ ಬೆಲೆಯೇನೂ ಸಿಗುವುದಿಲ್ಲ. ಇವೆಲ್ಲದರ ಜೊತೆಗೆ ವರ್ಷದಿಂದ ವರ್ಷಕ್ಕೆ ಬೆಲೆಯ ಅಸ್ಥಿರತೆಯೂ ಬೆಳೇಗಾರರನ್ನು ಪೀಡಿಸುತ್ತಿದೆ. 2011ರಲ್ಲಿ ಈ ಬೆಳೆಯ ಬೆಲೆ ಕ್ವಿಂಟಾಲಿಗೆ 17,000 ರೂ. ಇದ್ದರೆ, ಮುಂದಿನ ವರ್ಷ, ಅದು ಆ ಬೆಲೆಯ ನಾಲ್ಕನೇ ಒಂದು ಭಾಗದಷ್ಟು ಕುಸಿಯಿತು. 2021ರ ಸರಾಸರಿ ಕ್ವಿಂಟಾಲ್ ಗೆ ಸುಮಾರು 7,000 ರೂ.
ಜಾಣ್ಮೆ, ಪರಿಶ್ರಮ ಮತ್ತು ಸೋಷಿಯಲ್ ಮೀಡಿಯಾ ಅಕೌಂಟ್ ಬಳಸಿಕೊಂಡು ತಿರು ಈ ಸಮಸ್ಯೆಗಳಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಈ ಮೌಲ್ಯವರ್ಧನೆಯ ಪ್ರಯತ್ನವು ಸಮಸ್ಯೆಗೆ ವ್ಯಾಪಕವಾದ ಉತ್ತರವಲ್ಲದಿದ್ದರೂ ಅವರಮಟ್ಟಿಗೆ ಇದು ದೊಡ್ಡ ಸಾಧನೆಯೇ ಹೌದು. 10 ರೂಪಾಯಿಗಳಿಗೆ ಮಾರಾಟವಾಗಬಹುದಾದ ಒಂದು ತೆಂಗಿನಕಾಯಿ ನನಗೆ ಅದರ ಮೂರು ಪಟ್ಟು ತಂದುಕೊಡುತ್ತದೆ. ಯಾಕೆಂದರೆ ನಾನು ಅದರಿಂದ ಎಣ್ಣೆ ತೆಗೆದು ಸಾಬೂನು ತಯಾರಿಸಿ ಮಾರುತ್ತೇನೆ. ಅರಶಿನದ ಕತೆಯೂ ಹೀಗೆಯೇ. ಅದನ್ನು ನಾನು ಒಂದೂವರೆ ಎಕರೆಯಲ್ಲಿ ಬೆಳೆಯುತ್ತೇನೆ. ಮಂಡಿಯಲ್ಲಿ 3,000 ಕಿಲೋ ಮಾರಿದರೆ ನನಗೆ ಸಾವಯವ ಅರಿಶಿನ ಕಿಲೋ ಒಂದಕ್ಕೆ ಸುಮಾರು 50 ರೂಪಾಯಿಗಳಷ್ಟು ನಷ್ಟವಾಗುತ್ತದೆ.”



























