“ಅವರು ನನ್ನನ್ನು ಕೊಂದೇ ಬಿಡುತ್ತಿದ್ದರು…” ಎನ್ನುವಾಗ 28 ವರ್ಷದ ಅರುಣಾ ಅವರ ಮುಖದಲ್ಲಿ ದಿಗ್ಭ್ರಮೆ ತುಂಬಿತ್ತು. ಅವರು ನಮ್ಮೊಡನೆ ಮಾತನಾಡುತ್ತಾ ಅಲ್ಲೇ ಆಡುತ್ತಿದ್ದ ಆರು ವರ್ಷದ ಮಗಳತ್ತ ನೋಡುತ್ತಿದ್ದರು. ಇಲ್ಲಿ ʼಅವರುʼ ಎಂದರೆ ಅರುಣಾರ ಕುಟುಂಬ ಸದಸ್ಯರು. ಅವರಿಗೆ ವರುಣಾ ಹೀಗೆ ಏಕೆ ವರ್ತಿಸುತ್ತಿದ್ದಾರೆನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗಿರಲಿಲ್ಲ. “ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ಎಸೆಯುತ್ತಿದ್ದೆ. ಮನೆಯಲ್ಲಿ ಇರುತ್ತಿರಲಿಲ್ಲ. ನಮ್ಮ ಮನೆಯ ಬಳಿ ಯಾರೂ ಬರುತ್ತಿರಲಿಲ್ಲ…”
ಅವರು ಕೆಲವೊಮ್ಮೆ ತಮಿಳುನಾಡಿನ ಕಾಂಜೀಪುರಂ ಜಿಲ್ಲೆಯ ತನ್ನ ಮನೆ ಬಳಿಯ ಬೆಟ್ಟಗಳಲ್ಲಿ ಅಲೆದಾಡುತ್ತಿದ್ದರು. ಅರುಣಾ ತಮ್ಮ ಮೇಲೆ ಹಲ್ಲೆ ಮಾಡಬಹುದೆಂದು ಹೆದರಿ ಕೆಲವರು ಓಡುತ್ತಿದ್ದರೆ ಇನ್ನೂ ಕೆಲವರು ಅವರಿಗೆ ಕಲ್ಲುಗಳಿಂದ ಹೊಡೆಯುತ್ತಿದ್ದರು. ಅವರನ್ನು ಮನೆಗೆ ಕರೆ ತರುತ್ತಿದ್ದ ಅವರ ಅಪ್ಪ ಮಗಳು ಮತ್ತೆ ಮನೆ ಬಿಟ್ಟು ಹೋಗದಂತೆ ನೋಡಿಕೊಳ್ಳುವ ಸಲುವಾಗಿ ಅವರನ್ನು ಕುರ್ಚಿಗೆ ಕಟ್ಟಿ ಹಾಕುತ್ತಿದ್ದರು.
ಅರುಣಾ (ಹೆಸರು ಬದಲಾಯಿಸಲಾಗಿದೆ) ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವುದು ತಿಳಿದುಬಂದಾಗ ಅವರ ವಯಸ್ಸು 18. ಈ ಕಾಯಿಲೆ ವ್ಯಕ್ತಿಯ ಯೋಚನೆ, ಭಾವನೆ ಮತ್ತು ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ.
ಕಾಂಚೀಪುರಂ ಜಿಲ್ಲೆಯ ಚೆಂಗಲ್ಪಟ್ಟು ಗ್ರಾಮದ ದಲಿತ ಕಾಲನಿಯಲ್ಲಿನ ತಮ್ಮ ಮನೆಯ ಹೊರಗೆ ಕುಳಿತು ನಮ್ಮೊಡನೆ ಮಾತನಾಡುತ್ತಿದ್ದ ಅರುಣಾ ಇಷ್ಟು ಹೇಳಿ ತಮ್ಮ ಬದುಕಿನ ಸಂಕಷ್ಟದ ದಿನಗಳ ಕುರಿತಾದ ಮಾತನ್ನು ನಿಲ್ಲಿಸಿದರು. ಹಾಗೆ ಮಾತು ನಿಲ್ಲಿಸಿದವರು ಇದ್ದಕ್ಕಿದ್ದಂತೆ ಎದ್ದು ನಡೆಯತೊಡಗಿದರು. ಗುಲಾಬಿ ಬಣ್ಣದ ನೈಟಿ ತೊಟ್ಟಿದ್ದ ಅವರು ಕಪ್ಪು ಬಣ್ಣದ ದೇಹ ಮತ್ತು ಸಣ್ಣದಾಗಿ ಕತ್ತರಿಸಿದ ಕೂದಲನ್ನು ಹೊಂದಿದ್ದರು. ನಡೆಯುವಾಗ ಮುಂದಕ್ಕೆ ಬಾಗಿದಂತೆ ಕಾಣುತ್ತಿದ್ದರು. ತನ್ನ ಒಂದು ಕೋಣೆಯ ಗುಡಿಸಲನ್ನು ಪ್ರವೇಶಿಸಿದ ಅವರು ವೈದ್ಯರ ಚೀಟಿ ಮಾತ್ರೆಗಳೊಡನೆ ಹೊರಗೆ ಬಂದರು. ತಂದಿದ್ದ ಎರಡು ಮಾತ್ರೆಗಳ ಸ್ಟ್ರಿಪ್ ತೋರಿಸುತ್ತಾ “ಇದು ನಿದ್ರೆಗಾಗಿ ಕೊಟ್ಟಿದ್ದಾರೆ. ಇನ್ನೊಂದು ನರ ಸಂಬಂಧಿ ರೋಗಗಳಿಗೆ ಪರಿಹಾರ ನೀಡುವುದು” ಎಂದು ಹೇಳಿದರು. “ಈಗ ನನಗೆ ನಿದ್ರೆ ಚೆನ್ನಾಗಿ ಬರುತ್ತದೆ. ಔಷಧಿ ತರುವ ಸಲುವಾಗಿ ಪ್ರತಿ ತಿಂಗಳು ಸೆಂಬಾಕ್ಕಂ [ಪ್ರಾಥಮಿಕ ಆರೋಗ್ಯ ಕೇಂದ್ರ] ಗೆ ಹೋಗುತ್ತೇನೆ."
ಒಂದು ವೇಳೆ ಅರುಣಾ ಶಾಂತಿ ಶೇಷ ಅವರನ್ನು ಭೇಟಿಯಾಗದೆ ಹೋಗಿದ್ದರೆ ಅವರ ರೋಗ ಪತ್ತೆಯಾಗದೆ ಉಳಿದುಬಿಡುವ ಸಾಧ್ಯತೆಯಿತ್ತು.



