“ನಿಮ್ಮನ್ನು ನಂಬಿ ನನ್ನ ಬದುಕಿನ ಕತೆಯನ್ನ ಹಂಚಿಕೊಳ್ಳಬಹುದಾ?”
ಇದೊಂದು ನೇರ ನಮ್ಮ ವಿಶ್ವಾರ್ಹತೆಯನ್ನೇ ಪ್ರಶ್ನಿಸುವ ಪ್ರಶ್ನೆ. ಆದರೆ ಹಾಗೆ ಪ್ರಶ್ನಿಸಿದವರಿಗೂ ಈ ರೀತಿ ಕೇಳಲು ಅವರದೇ ಕಾರಣವಿತ್ತು. ತಮಿಳು ನಾಡಿನ ವಿಲ್ಲುಪುರಂ ಜಿಲ್ಲೆಯ ಅಪರಿಚಿತ ಹಳ್ಳಿಯೊಂದರ ಜನನಿ (ಹೆಸರು ಬದಲಿಸಲಾಗಿದೆ) ತನ್ನ ಬದುಕನ್ನು ಕ್ಷಯರೋಗ ಸಂಪೂರ್ಣ ಬದಲಿಸಿಬಿಟ್ಟ ಕತೆಯನ್ನ ನನ್ನೊಡನೆ ಹಂಚಿಕೊಳ್ಳುವವರಿದ್ದರು. ಹೀಗಾಗಿ ಅವರು ಆ ಪ್ರಶ್ನೆ ಕೇಳಿದ್ದರು.
ಅವರು ಟಿ.ಬಿ. ಸೋಂಕಿಗೆ ಒಳಗಾದಾಗ ಮದುವೆಯಾಗಿ ಒಂದೂವರೆ ವರ್ಷವಾಗಿತ್ತು. ನಾಲ್ಕು ತಿಂಗಳ ಮಗನಿದ್ದ. “ಟಿಬಿ ಇದೆಯೆಂದು ಗೊತ್ತಾಗಿದ್ದು 2020ರ ಮೇ ತಿಂಗಳಲ್ಲಿ. ಅದಕ್ಕೂ ಒಂದು ತಿಂಗಳಿಗೆ ಮೊದಲು ರೋಗಲಕ್ಷಣಗಳು ಕಾಣಿಸಿಕೊಂಡಿತ್ತು [ತೀವ್ರ ಕೆಮ್ಮು ಮತ್ತು ಜ್ವರ]” ಎಲ್ಲಾ ಮಾಮೂಲಿ ಪರೀಕ್ಷೆಗಳೂ ವಿಫಲಗೊಂಡ ನಂತರ ಡಾಕ್ಟರ್ ಟಿ.ಬಿ. ಟೆಸ್ಟ್ ಮಾಡಿಸುವಂತೆ ಸಲಹೆ ನೀಡಿದರು. “ಡಾಕ್ಟರ್ ಟಿಬಿ ಇದೆಯೆಂದು ಹೇಳಿದಾಗ ನಾನು ಕುಸಿದುಹೋದೆ. ನನಗೆ ಗೊತ್ತಿರುವ ಯಾರಿಗೂ ಟಿ.ಬಿ . ಇದ್ದಿರಲಿಲ್ಲ, ಇಂತಹದ್ದೊಂದು ಕಾಯಿಲೆ ನನಗೆ ಬರಬಹುದೆಂದು ಕನಸಲ್ಲೂ ಎಣಿಸಿರಲಿಲ್ಲ.”
“ಅದೂ ನಮ್ಮ ಊರಲ್ಲಿ ಕಳಂಕವೆಂದು ಭಾವಿಸಲಾಗುವ, ಅದು ಬಂದರೆ ಎಲ್ಲ ಸಾಮಾಜಿಕ ಚಟುವಟಿಕೆಗಳಿಂದ ಬಹಿಷ್ಕಾರಕ್ಕೊಳಪಡಿಸುವ ಕಾಯಿಲೆ ನನಗೆ ಬಂದಿತ್ತು. ಇದನ್ನು ಅರಗಸಿಕೊಳ್ಳುವುದು ಬಹಳ ಕಷ್ಟವಾಗಿತ್ತು.”
ಅಂದಿನಿಂದ ಒಂದು ಕಾಲದಲ್ಲಿ ಬಹಳ ಪ್ರೀತಿ ತೋರಿಸುತ್ತಿದ್ದ ಜನನಿಯ 27 ವರ್ಷದ ಗಂಡ ಹೆಂಡತಿಗೆ ಬಂದ ಕಾಯಿಲೆ ತನನಗೂ ಬರಬಹುದೆಂದು ಅಂತರ ಕಾಯ್ದುಕೊಳ್ಳತೊಡಗಿದ. “ಅವನು ಮಾನಸಿಕ ಮತ್ತು ದೈಹಿಕ ಎರಡೂ ಬಗೆಯಲ್ಲೂ ಹಿಂಸೆ ಮಾಡುತ್ತಿದ್ದ. ನಮ್ಮ ಮದುವೆಯಾದ ಒಂದು ವರ್ಷಕ್ಕೆ ಅವನ ಅಮ್ಮ ತೀರಿಕೊಂಡಿದ್ದರು. ಅದಕ್ಕೆ ಕಾರಣ ಯಾವುದೋ ಕಿಡ್ನಿ ಸಂಬಂಧಿ ಕಾಯಿಲೆಯಾಗಿತ್ತು. ಆದರೆ ನನ್ನ ಗಂಡ ಅವರ ಸಾವಿಗೂ ನಾನೇ ಕಾರಣವೆಂದು ದೂಷಿಸುತ್ತಿದ್ದ.”
ಆ ಸಮಯದಲ್ಲಿ ನಿಜವಾದ ಗಂಭೀರ ತೊಂದರೆಯಲ್ಲಿದ್ದ ವ್ಯಕ್ತಿಯೆಂದರೆ ಜನನಿಯೇ ಆಗಿದ್ದರು.
ಟಿ.ಬಿ. ಇಂದಿಗೂ ಭಾರತದಲ್ಲಿ ಅತಿ ಹೆಚ್ಚು ಜೀವಗಳನ್ನು ಬಲಿಪಡೆಯುತ್ತಿರುವ ಸೋಂಕಾಗಿದೆ.










