ಮೂರು ಸುತ್ತಿನ ನೀರು ಬರಬೇಕಾದಲ್ಲಿ ನಮಗೆ ಒಂದು ಸುತ್ತಿನ ನೀರಷ್ಟೇ ಸಿಕ್ಕಿದೆ. ಹೆಚ್ಚೆಂದರೆ ಒಂದೂವರೆ ಎಂದೇ ಹೇಳಿ. ಅದರಲ್ಲೂ ಮೊದಲ ಸುತ್ತಂತೂ ಬಹಳ ಬೇಗನೇ, ಯಾವುದೇ ಪೂರ್ವ ಸೂಚನೆಗಳಿಲ್ಲದೆ ಬೇರೆ ಬಿಡುಗಡೆಯಾಗಿತ್ತು'', ಎಂದು ಹೇಳುತ್ತಿದ್ದಾರೆ ಪ್ರಶಾಂತ್ ನಿಮ್ಸೆ. ನಿಮ್ಸೆ ಗಂಗಾಪುರ ಅಣೆಕಟ್ಟಿನ ಎಡಕಾಲುವೆಯಿಂದ ನೀರಿನ ನಿರ್ವಹಣೆಯನ್ನು ಮಾಡುತ್ತಿರುವ ನದುರ್ ಗಾಂವ್ ಪ್ರದೇಶದ ನಿವಾಸಿ. ದ್ರಾಕ್ಷಿ, ಅಂಜೂರ ಮತ್ತು ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ನಿಮ್ಸೆ ಈ ಬಾರಿ ತಕ್ಕಮಟ್ಟಿನ ಆದಾಯವು ಸಿಕ್ಕಿದ್ದು ತನ್ನ ಊರಿನಲ್ಲಿ ಕಟ್ಟಿರುವ ಕಲ್ಯಾಣ ಮಂಟಪದಿಂದಷ್ಟೇ ಎಂದು ಹೇಳುತ್ತಿದ್ದಾನೆ. ಈ ವಿವಾಹ ಮಂಟಪವು ನಾಸಿಕ್ ನಗರದ ವ್ಯಾಪ್ತಿಯಲ್ಲೇ ಬರುವುದರಿಂದ ನಿಮ್ಸೆಯ ದಂಧೆಯು ಚೆನ್ನಾಗಿಯೇ ನಡೆಯುತ್ತಿದೆ. ``ನಾನಂತೂ ಬಚಾವಾದೆ, ಆದರೆ ಕೃಷಿಯನ್ನೇ ಅವಲಂಬಿಸಿರುವ ರೈತ ಕುಟುಂಬಗಳಂತೂ ದೊಡ್ಡ ಸಂಕಷ್ಟಕ್ಕೀಡಾಗಿವೆ'', ಎನ್ನುವುದು ಆತನ ಅಭಿಪ್ರಾಯ.
``ದ್ರಾಕ್ಷಿ ಬೆಳೆಗಾಗುತ್ತಿರುವ ನಷ್ಟವು ದಿನಕಳೆದಂತೆ ಹೆಚ್ಚಾಗುತ್ತಿದೆ'', ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ ಮತ್ತೊಬ್ಬ ಕೃಷಿಕ ವಾಸುದೇವ್ ಖಟೆ. ``ಬರಗಾಲದಿಂದುಂಟಾಗಿರುವ ನೀರಿನ ತೀವ್ರ ಅಭಾವದ ಬಿಸಿಯು ದ್ರಾಕ್ಷಿಯ ಕಟಾವಿಗೂ ತಟ್ಟಿದೆ. ದ್ರಾಕ್ಷಿಯ ಒಳ್ಳೆಯ ಬೆಳೆ ಬಂದ ಹೊರತಾಗಿಯೂ ಗುಣಮಟ್ಟದಲ್ಲಿ ವ್ಯತ್ಯಾಸಗಳಾಗುತ್ತಿವೆ. ಪ್ರತೀವರ್ಷವೂ ಎಕರೆಯೊಂದಕ್ಕೆ 100 ಮ್ಯಾನ್ - ಡೇ ಗಳು ಬೇಕಾಗುತ್ತವೆ. ಹೀಗಿದ್ದಾಗ ಸಂಕಷ್ಟಕ್ಕೀಡಾಗಿರುವ 40,000 ಎಕರೆ ಬೆಳೆಯ ಭೂಮಿಯಲ್ಲಿ ದುಡಿಯುತ್ತಿರುವ ಕಾರ್ಮಿಕರ ಬಗ್ಗೆ ಯೋಚಿಸಿ. 3 ಮಿಲಿಯನ್ ಉದ್ಯೋಗದಿನಗಳ ದೊಡ್ಡ ಪ್ರಮಾಣದ ನಷ್ಟ ಅವರಿಗೆ. ಇಲ್ಲಿಯ ಕೃಷಿ ಕಾರ್ಮಿಕರು ಮರಾಠಾವಾಡಾ, ಬೀದ್, ಲಾತೂರ್, ಔರಂಗಾಬಾದ್, ಒಸ್ಮಾನಾಬಾದ್ ಗಳಂತಹ ಹೊರಭಾಗಗಳಿಂದ ಬರುವವರು. ಈ ಕೃಷಿಕಾರ್ಮಿಕರ ಉದ್ಯೋಗಕ್ಕೆ ಬೀಳುತ್ತಿರುವ ನೇರ ಹೊಡೆತಗಳು ತಮ್ಮ ಪರಿಣಾಮವನ್ನು ಮರಳಿ ಮರಾಠಾವಾಡಾದಂತಹ ಪ್ರದೇಶಗಳಿಗೂ ಕೂಡ ಹರಡಿಸುತ್ತಿವೆ.
ಮಳೆಯು ರಾಜ್ಯಾದ್ಯಂತ ನಿಧಾನವಾಗಿ ಹಬ್ಬುತ್ತಿದೆ. ಇದರ ಹೊರತಾಗಿಯೂ ರೈತರಿಗೆ, ಕೃಷಿಕಾರ್ಮಿಕರಿಗೆ ಮತ್ತು ಇತರರಿಗೆ ಮಳೆಯ ಆಗಮನವೊಂದೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ ಎಂಬುದರ ಬಗ್ಗೆ ಅರಿವಿದೆ. ಫೋಟೋಗ್ರಾಫರ್-ಪುರೋಹಿತ ಅಕೋಲ್ಕರ್ ಹೇಳುವಂತೆ ಮಳೆಯು ತಾತ್ಕಾಲಿಕವಾಗಿ ನಿರಾಳತೆಯನ್ನಂತೂ ತಂದಿದೆ. ಆದರೆ ದೀರ್ಘಕಾಲಿಕ ಸಮಸ್ಯೆಗಳು ಹೆಚ್ಚುತ್ತಲೇ ಇವೆ ಮತ್ತು ಅವುಗಳು ಅಷ್ಟು ಸುಲಭವಾಗಿ ಪರಿಹಾರವಾಗುವಂತೆ ಕಾಣುತ್ತಿಲ್ಲ.
ಇತ್ತ ನಾಸಿಕ್ ಜಿಲ್ಲೆಯ ನೀರಾವರಿ ವಿಭಾಗದಲ್ಲಿ ಸೂಪರಿಂಟೆಂಡೆಂಟ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪಿ. ಬಿ. ಮಿಸಲ್ ರವರಿಗೆ ಇವೆಲ್ಲದರ ಬಗ್ಗೆ ಭಿನ್ನವಾದ ಅಭಿಪ್ರಾಯವಿದೆ. ``ವರ್ಷವಿಡೀ ಹರಿಯುವ ಅಥವಾ ದೀರ್ಘಕಾಲದವರೆಗೆ ವ್ಯವಸಾಯ ಅಥವಾ ಇತರೆ ಬಳಕೆಗೆ ಸಿಗುವಂತಹ ನದಿಗಳನ್ನು ಮಹಾರಾಷ್ಟ್ರವು ಹೊಂದಿಲ್ಲ. ಕಳೆದ 20 ವರ್ಷಗಳಿಂದ ಅಂತರ್ಜಲದ ಮೂಲಗಳು ನಮ್ಮಲ್ಲಿ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿವೆ. ವ್ಯವಸಾಯ ಭೂಮಿಗಳಲ್ಲಿ ಮಿತಿಮೀರಿ ಪಂಪಿಂಗ್ ಮಾಡಲಾಗುತ್ತಿದೆ. ನಾಸಿಕ್ ನಗರದ ಜನಸಂಖ್ಯೆಯು 20 ಲಕ್ಷಕ್ಕೆ ಏರಿದ್ದಲ್ಲದೆ ಇತರೆ (ಫ್ಲೋಟಿಂಗ್ ಪಾಪ್ಯುಲೇಷನ್) ಜನಸಂಖ್ಯೆಯು 3 ಲಕ್ಷದವರೆಗೆ ಬಂದುಮುಟ್ಟಿದೆ. ಜಮೀನುಗಳ ಬಳಕೆಯ ವಿಧಾನದಲ್ಲೂ ಹಲವು ಬದಲಾವಣೆಗಳಾಗಿವೆ. ನಗರದ ಸುತ್ತಲೂ ಆವರಿಸಿದ್ದ ಹಸಿರು ಗದ್ದೆಗಳಲ್ಲಿ ಈಗ ಕಟ್ಟಡಗಳು ಎದ್ದು ನಿಂತಿವೆ'', ಎನ್ನುತ್ತಾರೆ ಮಿಸಲ್. ಮಳೆಯ ಅನಿಶ್ಚಿತತೆಯು ಹೆಚ್ಚಾಗಿರುವುದು ಹೌದಾದರೂ ಮಳೆಯ ಪ್ರಮಾಣವು ಕಮ್ಮಿಯೇನೂ ಆಗಿಲ್ಲ ಅನ್ನುವುದು ಇವರ ಅನಿಸಿಕೆ. ಆದರೆ ಮಿಸಲ್ ರವರ ಮಾತಿಗೆ ವ್ಯತಿರಿಕ್ತವಾಗಿ ಮಾಹಿತಿಗಳನ್ನು ಹಂಚಿಕೊಂಡ ಪರಿಸರ ತಜ್ಞರಾದ ಪ್ರೊ. ಮಾಧವ್ ಗಡ್ಗಿಲ್ ಮಹಾರಾಷ್ಟ್ರದಲ್ಲಿ ವರ್ಷವಿಡೀ ಹರಿಯುವ ನದಿಗಳೂ ಕೂಡ ಇತ್ತು ಎನ್ನುತ್ತಾರೆ. ನಂತರ ಇವುಗಳನ್ನು ಅರೆಕಾಲಿಕ ನದಿಗಳಾಗಿ ಪರಿವರ್ತಿಸಲಾಯಿತು ಎಂಬುದು ಇವರ ವಾದ.
ಇವೆಲ್ಲವುಗಳೂ ಕೂಡ ನಮ್ಮನ್ನು ಮತ್ತೆ ಕರೆತರುವುದು ನೀರಿನ ತೀವ್ರ ಬಿಕ್ಕಟ್ಟಿಗೆ ಮತ್ತಷ್ಟು ಇಂಬನ್ನು ನೀಡುತ್ತಿರುವ ಮಹಾರಾಷ್ಟ್ರದ ಏಜೆನ್ಸಿಗಳ ಬಳಿಗೆ. ತ್ರಿಂಬಕೇಶ್ವರದಲ್ಲಿರುವ ನೀರಿನ ಸಮಸ್ಯೆ ಮತ್ತು ಪಶ್ಚಿಮ ಮಹಾರಾಷ್ಟ್ರದಲ್ಲಿರುವ ಸತಾರಾ ಜಿಲ್ಲೆಯ ಕೃಷ್ಣಾ ನದಿಯ ಮೂಲವಾದ ಹಳೇ ಮಹಾಬಲೇಶ್ವರದಲ್ಲಿರುವ ನೀರಿನ ಸಮಸ್ಯೆಗಳಲ್ಲಿ ಸಾಮ್ಯತೆಗಳನ್ನು ನಾವು ಕಂಡಿದ್ದೆವು (ನಾನು ಮತ್ತು ನನ್ನ ಸಹೋದ್ಯೋಗಿಗಳು ಮೇ ತಿಂಗಳಲ್ಲಿ ಈ ಜಾಗಕ್ಕೆ ಭೇಟಿಯನ್ನಿತ್ತಿದ್ದೆವು).
``ನಾಸಿಕ್ ಈಗ ದೊಡ್ಡ ಕೈಗಾರಿಕಾ ಪ್ರದೇಶವಾಗಿ ಬೆಳೆದಿದೆ ಎಂಬುದನ್ನು ಮರೆಯಬೇಡಿ. ಹೀಗಾಗಿ ನೀರಿನ ಹಂಚಿಕೆಯ ವ್ಯವಸ್ಥೆಯೂ ಕೂಡ ಇಲ್ಲಿ ಬದಲಾಗಿದೆ'', ಎನ್ನುತ್ತಾರೆ ಅಕೋಲ್ಕರ್. ಅಂತೆಯೇ ತನ್ನ ಮಾತನ್ನು ಮುಂದುವರಿಸುವ ಅಕೋಲ್ಕರ್, ``ಅನಿಯಂತ್ರಿತ ನೀರಿನ ಮಾರುಕಟ್ಟೆಯು ಈ ಪ್ರದೇಶದ ಎಲ್ಲಾ ಕಡೆ ತುಂಬಿಹೋಗಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಪ್ರದೇಶದ ಪ್ರತಿಯೊಂದು ಅಡಿಗಳನ್ನೂ ಕಾಂಕ್ರಿಟೀಕರಣಗೊಳಿಸಲಾಗಿದೆ. ಈಗ ನೀರಿನ ಹರಿವಿಗಾಗಲೀ, ಕೊಂಚ ನೆಲೆಯೂರಲಾಗಲೀ ಜಾಗವೇ ಇಲ್ಲ'', ಎಂದೂ ಹೇಳುತ್ತಾರೆ.