“ಕೆಲವೊಮ್ಮೆ ಯಾರಾದರೂ ಮಹಿಳೆ ನನಗೆ ಕರೆ ಮಾಡುತ್ತಾರೆ ಅಥವಾ ರಾತ್ರಿಯಲ್ಲಿ ಮನೆಗೆ ತನ್ನ ಮನೆಯಲ್ಲಿನ ಪುರುಷ ಸಂಬಂಧಿಯನ್ನು ಕಾಂಡೋಮ್ ಪ್ಯಾಕೆಟ್ ತರಲು ಕಳುಹಿಸುತ್ತಾರೆ" ಎಂದು ಕಲಾವತಿ ಸೋನಿ ಹೇಳುತ್ತಾರೆ. ಟಿಕಾರಿ ಗ್ರಾಮದ ಈ 54 ವರ್ಷದ 'ಡಿಪೋ ದೀದಿ' ಹೀಗೆ ತಡರಾತ್ರಿ ಬರುವವರ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ, ಅವರು ಮಹಿಳೆಯರಿಗೆ ಅಗತ್ಯ ವಸ್ತುಗಳನ್ನು ಒದಗಿಸುತ್ತಾರೆ. ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಹಳ್ಳಿಯಲ್ಲಿರುವ ತನ್ನ ಸಣ್ಣ ಮನೆಯ ವರಾಂಡದಲ್ಲಿ ಚಾರ್ಪಾಯ್ ಮೇಲೆ ಕುಳಿತು, "ನಾನು ರಾತ್ರಿಯಲ್ಲಿಯೂ ಸೇವೆ ನೀಡುತ್ತೇನೆ" ಎಂದು ಅವರು ತಮಾಷೆಯಾಗಿ ಹೇಳುತ್ತಾರೆ. “ಇತ್ನೀ ಕೋಯಿ ಬಡೀ ಬಾತ್ ನಹೀಹೈ [ಇದೇನೂ ಅಷ್ಟು ದೊಡ್ಡ ವಿಷಯವಲ್ಲ]” ಎಂದು ಕಲಾವತಿ ತನ್ನ ಕೆಲಸದ ಬಗ್ಗೆ ಹೇಳುತ್ತಾರೆ.
ಹಳ್ಳಿಯಲ್ಲಿ ಕಾರ್ಯಾಚರಿಸುತ್ತಿರುವ ಸರ್ಕಾರೇತರ ಸಂಸ್ಥೆಯ 'ಡಿಪೋ ದೀದಿ' ಸೇವೆಯ ಕುರಿತು ಕೇಳಿದ ನಂತರ, ಕುತೂಹಲದಿಂದ ನಾವು ಅವರ ಮನೆಗೆ ಬಂದಿದ್ದೆವು. "ಏಯ್, ಆ ಚೀಲವನ್ನು ತೆಗೆದುಕೊಂಡು ಬಾ" ಎಂದು ಕಲಾವತಿ ತನ್ನ ಮೊಮ್ಮಗನಿಗೆ ಕೂಗಿ ಹೇಳಿದರು . ಕೆಲವೇ ಸೆಕೆಂಡುಗಳಲ್ಲಿ, ಪುಟ್ಟ ಹುಡುಗ ಎರಡು ಅಂತಸ್ತಿನ ಪಕ್ಕಾ ಮನೆಯ ಒಳಗಿನಿಂದ ಉಬ್ಬಿದ ಪ್ಲಾಸ್ಟಿಕ್ ಚೀಲದೊಂದಿಗೆ ಓಡಿ ಬಂದ. ಕಾಂಡೋಮ್ ಗಳು, ಸ್ಯಾನಿಟರಿ ನ್ಯಾಪ್ಕಿನ್ ಗಳು, ಗರ್ಭನಿರೋಧಕ ಮಾತ್ರೆಗಳು ಮತ್ತು ಓರಲ್ ರೀಹೈಡ್ರೇಶನ್ ಪ್ಯಾಕೆಟುಗಳ ಮಿಶ್ರಣವು ಚೀಲದಿಂದ ಹೊರಬಂತು. ಅವುಗಳನ್ನು ಪ್ರದರ್ಶನದಲ್ಲಿರುವಂತೆ, ಚಾರ್ಪಾಯ್ ಮೇಲೆ ಸಾಲಾಗಿ ಜೋಡಿಸಿದರು.
"ಇತ್ನಿ ಕೋಯಿ ಬಡಿ ಬಾತ್ ನಹೀ ಹೈ" ಎಂದು ಪಲ್ಲವಿಯಂತೆ ಮತ್ತೆ ಹೇಳಿದರು. "ಮೊದಲು ನಾನು ಮನೆಯ ಸಣ್ಣ ವಿಷಯಗಳ ಬಗ್ಗೆ ಮಾತನಾಡುತ್ತಿದ್ದೆ. ನಾವು ಅವರ ಮನೆಯ ಪರಿಸ್ಥಿತಿ, ಅತ್ತೆ-ಮಾವನ ಬಗ್ಗೆ ದೂರುಗಳು, ಮಕ್ಕಳ ಬಗ್ಗೆ ಸ್ವಲ್ಪ ಚರ್ಚಿಸುತ್ತಿದ್ದೆವು. ಅವರು ಹೇಳುವುದನ್ನು ನಾನು ತಾಳ್ಮೆಯಿಂದ ಕೇಳುತ್ತಿದ್ದೆ. ನಿಧಾನವಾಗಿ, ಈ ಸಂಭಾಷಣೆಗಳ ಮೂಲಕ - ನಾನು ಸ್ವಲ್ಪ ಹೆಚ್ಚು ಮಾತಾನಾಡುವವಳು, ದಿನ ಕಳೆದಂತೆ - ಎಲ್ಲಾ ಮಹಿಳೆಯರು ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ನಾನು ಅರಿತುಕೊಳ್ಳಲು ಪ್ರಾರಂಭಿಸಿದೆ. ಹಾಗಾದರೆ ಒಬ್ಬರಿಗೊಬ್ಬರು ಏಕೆ ಸಹಾಯ ಮಾಡಬಾರದು ಎನ್ನುವ ಯೋಚನೆ ಬಂತು. ಅಷ್ಟೆ" ಹೀಗೆ ಟಿಕಾರಿಯ 'ಡಿಪೋ ದೀದಿ' ಪಾತ್ರವನ್ನು ತಾನು ನಿರ್ವಹಿಸಲು ಆರಂಭಿಸಿದೆ ಎಂದು ಹೇಳಿದರು.
ಅಗತ್ಯ ವಸ್ತುಗಳನ್ನು ವಿತರಿಸುವ ಮತ್ತು ಉತ್ತಮ ಆರೋಗ್ಯ ಅಭ್ಯಾಸಗಳನ್ನು ಉತ್ತೇಜಿಸುವ ಸಮುದಾಯದ ಮಹಿಳೆಯರಿಗೆ ಬಳಸಲಾಗುವ ಆರೋಗ್ಯ ವಲಯದ ಪದವಾದ 'ಡಿಪೋ ಹೋಲ್ಡರ್' ನಿಂದ ಈ ಹೆಸರು ಬಂದಿದೆ. ಆದರೆ ಕಲಾವತಿ ಅಂಗನವಾಡಿ ಕಾರ್ಯಕರ್ತೆ ಅಥವಾ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ (ಆಶಾ) ಅಲ್ಲ, ಅವರು ಔಪಚಾರಿಕವಾಗಿ ಹಳ್ಳಿಗಳಲ್ಲಿ ಡಿಪೋ ಹೊಂದಿರುವವರಾಗಿ ಕಾರ್ಯನಿರ್ವಹಿಸುತ್ತಾರೆ. ಅವರು ಝೋಲಾ ಚಾಪ್ (ಪರವಾನಗಿ ಪಡೆಯದ ವೈದ್ಯ) ಅಲ್ಲ. ಮೂಲಭೂತ ಸಂತಾನೋತ್ಪತ್ತಿ ಆರೋಗ್ಯ ಆರೈಕೆ ಅಗತ್ಯಗಳಿಗಾಗಿ ಮಹಿಳೆಯರಿಗೆ ಅಗತ್ಯವಿರುವ ಬಹುತೇಕ ಎಲ್ಲವನ್ನೂ ಸಂಗ್ರಹಿಸುತ್ತಾರೆ, ಮತ್ತು ಅವರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಕಾಳಜಿಗಳ ಬಗ್ಗೆ ಅವರೊಂದಿಗೆ ಮಾತನಾಡುತ್ತಾರೆ.







