ಆ ಮಹಿಳೆ ಮಲೇರಿಯಾ ರ್ಯಾಪಿಡ್ ಟೆಸ್ಟ್ ಕಿಟ್ಗಾಗಿ ತನ್ನ ಬ್ಯಾಗ್ ತಡಕಾಡತೊಡಗಿದರು. ಆ ಚೀಲವು ಔಷಧಿಗಳು, ಸಲೈನ್ ಬಾಟಲಿಗಳು, ಕಬ್ಬಿಣದಂಶದ ಮಾತ್ರೆಗಳು, ಇಂಜೆಕ್ಷನ್ಗಳು, ಬಿಪಿ ಪರೀಕ್ಷಿಸುವ ಯಂತ್ರ ಇತ್ಯಾದಿಗಳಿಂದ ತುಂಬಿತ್ತು.ಪಕ್ಕದಲ್ಲೇ ಮಹಿಳೆಯೊಬ್ಬರು ಮಲಗಿದ್ದರು. ಆಕೆಗೆ ಜ್ವರವು ಏರುತ್ತಲೇ ಇತ್ತು. ಟೆಸ್ಟ್ ಮಾಡಿದಾಗ ಪಾಸಿಟಿವ್ ಎನ್ನುವ ಫಲಿತಾಂಶ ಬಂತು. ಆ ಮಹಿಳೆಗೆ ಜ್ವರ ಬಂದು ಈಗಾಗಲೇ ಎರಡು ದಿನಗಳಾಗಿದ್ದವು. ಮತ್ತು ಕುಟುಂಬವು ಈ ಪರೀಕ್ಷೆ ಮಾಡುವ ಮಹಿಳೆಯನ್ನು ಕರೆತರಲು ಎರಡು ದಿನಗಳಿಂದ ಪ್ರಯತ್ನಿಸುತ್ತಿತ್ತು.
ಆಕೆ ಇನ್ನೊಮ್ಮೆ ತನ್ನ ಬ್ಯಾಗಿನೊಳಗೆ ಕೈಹಾಕಿದರು, ಈ ಬಾರಿ ಅದರೊಳಗಿನಿಂದ ಇಂಟ್ರಾವೆನೌಸ್ (ಐವಿ) 500 ಎಮ್ಎಲ್ ಡೆಕ್ಷ್ಟ್ರೋಸ್ ಬಾಟಲ್ ಹೊರತೆಗೆದರು. ರೋಗಿ ಮಹಿಳೆಯ ಮಂಚದ ಮೇಲೆ ಹತ್ತಿ ಮಾಡಿನಿಂದ ತೂಗುಬಿದ್ದಿದ್ದ ಪ್ಲಾಸ್ಟಿಕ್ ಹಗ್ಗಕ್ಕೆ ಆಕರ್ಷಕ ವೇಗದಿಂದ ಆ ಬಾಟಲಿಯನ್ನು ಕಟ್ಟಿದರು.
ಕಳೆದ 10 ವರ್ಷಗಳಿಂದ ಜಾರ್ಖಂಡ್ನ ಪಶ್ಚಿಮಿ ಸಿಂಗ್ ಭೂಮ್ ಜಿಲ್ಲೆಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವೈದ್ಯಕೀಯ ಸೇವೆ ನೀಡುತ್ತಿರುವ 35 ವರ್ಷದ ಜ್ಯೋತಿ ಪ್ರಭಾ ಕಿಸ್ಪೊಟ್ಟಾ ಅವರು ಅರ್ಹ ವೈದ್ಯರಲ್ಲ ಅಥವಾ ತರಬೇತಿ ಪಡೆದ ನರ್ಸ್ ಕೂಡಾ ಅಲ್ಲ. ಅವರು ಯಾವುದೇ ಸರ್ಕಾರಿ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರದೊಂದಿಗೆ ಸಂಬಂಧ ಹೊಂದಿಲ್ಲ. ಆದರೆ ಒರಾನ್ ಬುಡಕಟ್ಟಿನ ಈ ಯುವತಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಅವ್ಯವಸ್ಥೆಯ ಪ್ರತೀಕದಂತಿರುವ ಪಶ್ಚಿಮಿ ಸಿಂಗ್ ಭೂಮ್ನ ಆದಿವಾಸಿ ಹಳ್ಳಿಗಳಲ್ಲಿನ ಜನರ ಕೊನೆಯ ಭರವಸೆ.
ಇಲ್ಲಿನ ಪ್ರಾದೇಶಿಕ ಸಮೀಕ್ಷೆಗಳು ಉಲ್ಲೇಖಿಸುವ ಅನೇಕ 'ಆರ್ ಎಂಪಿ'ಗಳಲ್ಲಿ ಜ್ಯೋತಿ ಕೂಡಾ ಒಬ್ಬರು, ಗ್ರಾಮೀಣ ಭಾರತದಲ್ಲಿ ಆರೋಗ್ಯ ಆರೈಕೆ ಪೂರೈಕೆದಾರರಲ್ಲಿ ಶೇಕಡಾ 70ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಇವರೇ ಇದ್ದಾರೆ. ಇಲ್ಲಿ ಆರ್ ಎಂಪಿ ಎಂದರೆ ನೀವು ಊಹಿಸುವಂತೆ ನೋಂದಾಯಿತ ವೈದ್ಯಕೀಯ ಅಭ್ಯಾಸಿಯಲ್ಲ (Registered Medical Practitioner), ಇದು ರೂರಲ್ ಮೆಡಿಕಲ್ ಪ್ರಾಕ್ಟೀಷನರ್ಗಳು ಎನ್ನುವುದರ ದಾರಿ ತಪ್ಪಿಸುವ ಸಂಕ್ಷಿಪ್ತ ರೂಪವಾಗಿದೆ, ಈ ಪದ್ಧತಿಯ ವೈದ್ಯರನ್ನು ಜೋಲಾ ಚಾಪ್ (ಕ್ವಾಕ್) ವೈದ್ಯರು ಎಂದು ಲೇವಡಿ ಮಾಡಲಾಗುತ್ತದೆ. ಗ್ರಾಮೀಣ ಭಾರತದಲ್ಲಿ ಸಮಾನಾಂತರ ಖಾಸಗಿ ಆರೋಗ್ಯ ಸೇವೆಯನ್ನು ನಡೆಸುತ್ತಿರುವ ಈ ಅನರ್ಹ ವೈದ್ಯರನ್ನು ಶೈಕ್ಷಣಿಕ ಸಾಹಿತ್ಯದಲ್ಲಿ 'ಕ್ವಾಕ್' ಎಂದು ಹೀಯಾಳಿಸಲಾಗುತ್ತದೆ ಮತ್ತು ಆರೋಗ್ಯ ರಕ್ಷಣೆಯ ಬಗ್ಗೆ ಸರ್ಕಾರವು ತನ್ನ ನೀತಿಗಳಲ್ಲಿ ಹೆಚ್ಚಿನ ದ್ವಂದ್ವವನ್ನು ಹೊಂದಿದೆ.
ಆರ್ಎಂಪಿಗಳೆಂದರೆ ಹೆಚ್ಚಾಗಿ ಭಾರತದ ಯಾವುದೇ ಮಾನ್ಯತೆ ಪಡೆದ ವೈದ್ಯಕೀಯ ಮಂಡಳಿಗಳಲ್ಲಿ ನೋಂದಣಿಯಾಗದೆ ಇರುವವರು. ಅವರಲ್ಲಿ ಕೆಲವರು ಹೋಮಿಯೋಪತಿ ಅಥವಾ ಯುನಾನಿ ವೈದ್ಯರೆಂದು ನೋಂದಾಯಿಸಿಕೊಂಡಿರಬಹುದು, ಆದರೆ ಅವರು ಅಲೋಪತಿ ಔಷಧಿಗಳನ್ನು ಅಭ್ಯಾಸ ಮಾಡುತ್ತಾರೆ ಅಥವಾ ವಿತರಿಸುತ್ತಾರೆ.
ಬಿಹಾರ ಸರ್ಕಾರದಿಂದ ನೋಂದಾಯಿತವೆಂದು ಎಂದು ಹೇಳಲಾದ ಕೌನ್ಸಿಲ್ ಆಫ್ ಅನ್ ಎಂಪ್ಲಾಯ್ಡ್ ರೂರಲ್ ಮೆಡಿಕಲ್ ಪ್ರಾಕ್ಟೀಷನರ್ಸ್ ಎನ್ನುವ ವೈದ್ಯರ ಖಾಸಗಿ ಸಂಸ್ಥೆಯಿಂದ ಜ್ಯೋತಿ ಅಲೋಪತಿ ಔಷಧ ಪದ್ಧತಿಯಡಿಯಲ್ಲಿ ಆರ್ಎಂಪಿ ಪ್ರಮಾಣಪತ್ರವನ್ನು ಹೊಂದಿದ್ದಾರೆ. ಅವರು ಅಲ್ಲಿ ಆರು ತಿಂಗಳ ಕೋರ್ಸ್ ಮಾಡಲು, ರೂ. 10,000 ಪಾವತಿಸಿದ್ದರು. ಸಂಸ್ಥೆ ಪ್ರಸ್ತುತ ಅಸ್ತಿತ್ವದಲ್ಲಿಲ್ಲ.

















