“ಅದು ನನ್ನ ತೋಳು ಮತ್ತು ಕುತ್ತಿಗೆಗೆ ತನ್ನ ಮುಂಗಾಲಿನಿಂದ ಹೊಡೆದು ಪರಚಿತು, ನಾನು ಕೋಲಿನಿಂದ ಹೊಡೆದೆ. ಆಗ ನಾನು ಕಾಡಿನಿಂದ ಸುಮಾರು ನಾಲ್ಕು ಕಿಲೋಮೀಟರುಗಳಷ್ಟು ಒಳಗಿದ್ದೆ. ನನ್ನ ಬಟ್ಟೆಗಳು ಪೂರ್ತಿಯಾಗಿ ರಕ್ತದಿಂದ ಒದ್ದೆಯಾಗಿದ್ದವು. ಮನೆಗೆ ಬರಲು ಬಹಳ ಒದ್ದಾಡಿದ್ದೆ.” ವಿಶಾಲರಾಮ್ ಮರಕಮ್ ಮುಂದಿನ ಎರಡು ವಾರಗಳನ್ನು ಆಸ್ಪತ್ರೆಯಲ್ಲಿ ಕಳೆದಿದ್ದರು. ಆದರೆ ಅವರಿಗೆ ತಮ್ಮ ಎಮ್ಮೆಗಳಿಗೆ ಯಾವುದೇ ತೊಂದರೆಯಾಗದಿದ್ದನ್ನು ಕಂಡು ಸಂತೋಷವಾಗಿತ್ತು. “ಅಂದು ಚಿರತೆ ನನ್ನ ನಾಯಿಗಳ ಮೇಲೂ ದಾಳಿ ಮಾಡಿತ್ತು. ಆದರೆ ಅವು ಓಡಿ ತಪ್ಪಿಸಿಕೊಂಡವು.” ಎಂದು ಅವರು ಹೇಳುತ್ತಾರೆ.
ಈ ದಾಳಿ ನಡೆದಿದ್ದು 2015ರಲ್ಲಿ. ಮರಕಮ್ ಈಗ ಅದನ್ನು ನೆನೆದು ನಗುತ್ತಾ, ತಾನು ಈ ರೀತಿ ಬೇಟೆಗಾರ ಪ್ರಾಣಿಗಳನ್ನು ಹತ್ತಿರದಿಂದ ಎದುರಿಸಿದ್ದು ಅದೇ ಮೊದಲೇನಲ್ಲ, ಹಾಗೆಯೇ ಅದೇ ಕೊನೆಯೂ ಅಲ್ಲವೆನ್ನುತ್ತಾರೆ. ಅವರು ಎಮ್ಮೆಗಳು ಮೇಯಲು ಹೋಗುವ ಚತ್ತೀಸಗಢದ ಜಬರ್ರಾ ಕಾಡಿನಲ್ಲಿ ಕೇವಲ ಹಸಿದ ಚಿರತೆಗಳಷ್ಟೇ ಎದುರಾಗುವುದಿಲ್ಲ, ಆಗಾಗ ಹುಲಿಗಳು, ತೋಳಗಳು, ನರಿಗಳು, ಕಾಡು ನಾಯಿಗಳು, ಗುಳ್ಳೆ ನರಿಗಳು ಮತ್ತು ಕಾಡು ಹಂದಿಗಳು, ಮತ್ತು ಸಂಭಾರ್ ಮತ್ತು ಚಿತಾಲ್ ಜಿಂಕೆಗಳು ಮತ್ತು ಪ್ರಬಲ ಕಾಡೆಮ್ಮೆಗಳೂ ಎದುರಾಗುವುದುಂಟು. ಬೇಸಿಗೆ ಸಮಯದಲ್ಲಿ ಪ್ರಾಣಿಗಳು ನೀರನ್ನು ಹುಡುಕಿಕೊಂಡು ಕಾಡಿನಲ್ಲಿರುವ ನೀರಿನ ಒರತೆಗಳನ್ನು ಹುಡುಕಿಕೊಂಡು ಹೋಗುವಾಗ, ಅಂತಹ ಸ್ಥಳಗಳಲ್ಲಿ ಬೇಟೆಗಾರ ಪ್ರಾಣಿಗಳಿಗೆ ಬಲಿಯಾಗುವ ಸಾಧ್ಯತೆ ಎರಡರಷ್ಟಿರುತ್ತದೆ, ಕೆಲವೊಮ್ಮೆ ಮೂರರಷ್ಟೂ ಇರುತ್ತದೆ!
“ನನ್ನ ಎಮ್ಮೆಗಳು ಅವುಗಳಿಗೆ ಇಷ್ಟ ಬಂದಂತೆ ಕಾಡಿನ ತುಂಬಾ ಅಲೆದು ಮೇಯುತ್ತವೆ. ಅವು ಮನೆಗೆ ಬರದಿದ್ದರೆ ಮಾತ್ರವೇ ನಾನು ಹುಡುಕಿಕೊಂಡು ಹೋಗುತ್ತೇನೆ,” ಎನ್ನುತ್ತಾರೆ ಮರಕಮ್. “ಕೆಲವೊಮ್ಮೆ ನನ್ನ ಎಮ್ಮೆಗಳು ಬೆಳಗಿನ ಜಾವ ನಾಲ್ಕು ಗಂಟೆಯಾದರೂ ಮನೆಗೆ ಮರಳುವುದಿಲ್ಲ. ಅಂತಹ ಸಂದರ್ಭಗಳಲ್ಲಿ ನಾನು ಡಬಲ್ [ಶಕ್ತಿಯ] ಟಾರ್ಚ್ ಹಿಡಿದು ಅವುಗಳನ್ನು ಹುಡುಕಲು ಕಾಡಿಗೆ ಹೋಗುತ್ತೇನೆ.” ಹೀಗೆ ಕಾಡಿಗೆ ಬರಿಗಾಲಿನಲ್ಲಿ ಹೋದಾಗಲೆಲ್ಲ ಉಂಟಾದ ಗಾಯಗಳು ಮತ್ತು ಕಲೆಯನ್ನು ತೋರಿಸಿದರು.
ಅವರ ಸರ್ವಸ್ವತಂತ್ರ ಮನಸ್ಸಿನ ಎಮ್ಮೆಗಳು ಧಮ್ತಾರಿ ಜಿಲ್ಲೆಯ ನಗರಿ ತೆಹ್ಸಿಲ್ನ ಜಬರ್ರಾ ಗ್ರಾಮದ ಪಕ್ಕದಲ್ಲಿರುವ ಕಾಡಿನಲ್ಲಿ ಪ್ರತಿದಿನ ಸುಮಾರು 9-10 ಕಿಲೋಮೀಟರುಗಳಷ್ಟು ದೂರದವರೆಗೂ ಮೇಯಲು ಹೋಗುತ್ತವೆ. “ಬೇಸಿಗೆಯಲ್ಲಿ ಅವು ಆಹಾರ ಹುಡುಕಿಕೊಂಡು ಇದರ ಎರಡರಷ್ಟು ದೂರವನ್ನು ಪ್ರಯಾಣಿಸುತ್ತವೆ. ಆದರೆ ಇನ್ನು ಮುಂದೆ ಆಹಾರಕ್ಕಾಗಿ ಅವು ಕಾಡಿನ ಮೇಲೆ ಅವಲಂಬಿತವಾಗುವುದು ಕಷ್ಟ. ಹಾಗೊಂದು ವೇಳೆ ಅವಲಂಬಿತವಾದಲ್ಲಿ ಅವು ಹಸಿವಿನಿಂದ ಸಾಯಬೇಕಾಗುತ್ತದೆ,” ಎನ್ನುತ್ತಾರೆ ಮರಕಮ್.









