ಗಜುವಾಸ್ ಗ್ರಾಮದ ಹೊರವಲಯದಲ್ಲಿರುವ ಖೇಜ್ರಿಮರದ ತೆಳು ನೆರಳಿನಡಿ ನೆಲದ ಮೇಲೆ ಕುಳಿತಿದ್ದ ಭಜರಂಗ್ ಗೋಸ್ವಾಮಿ “ಈ ಬಿಸಿಲಿನಿಂದಾಗಿ ನನ್ನ ಬೆನ್ನು ಸುಟ್ಟುಹೋಗಿದೆ,” ಎನ್ನುತ್ತಾರೆ. “ಬಿಸಿಲು, ಸೆಕೆ ಜಾಸ್ತಿಯಾಗಿ ಬೆಳೆ ಇಳುವರಿಯೂ ಕಡಿಮೆಯಾಗಿದೆ” ಎಂದು ಇತ್ತೀಚಿಗೆ ಕಟಾವು ಮಾಡಿದ ಸಜ್ಜೆಯ ಕೂಳೆಯತ್ತ ನೋಡುತ್ತಾ ತನ್ನ ಮಾತು ಮುಂದುವರೆಸುತ್ತಾರೆ. ಒಂಟೆಯೊಂದು ಒಂಟಿಯಾಗಿ ಅವರು ಮತ್ತು ಅವರ ಹೆಂಡತಿ ರಾಜ್ ಕೌರ್ ಗೇಣಿ ಬೆಳೆಗಾರರಾಗಿ ವ್ಯವಸಾಯ ಮಾಡುವ 22 ಭಿಘಾ ಹೊಲದಲ್ಲಿ ಒಣ ಹುಲ್ಲನ್ನು ಮೇಯುತ್ತಿದೆ. ಇವರ ಈ ಹೊಲವಿರುವುದು ರಾಜಸ್ಥಾನದ ಚುರೂ ಜಿಲ್ಲೆಯ ತಾರಾನಗರ್ ತೆಹಸಿಲ್ನಲ್ಲಿ.
“ತಲೆಯ ಮೇಲೆ ನೆತ್ತಿ ಸುಡುವ ಸೂರ್ಯ, ಕಾಲಿನ ಕೆಳಗೆ ಅಂಗಾಲು ಸುಡುವ ಮರಳು,” ಎನ್ನುತ್ತಾರೆ ಸುಜನಘರ್ ತೆಹಸಿಲ್ನ ತಾರಾ ನಗರ ದಕ್ಷಿಣದ ಗೀತಾ ದೇವಿ. ಗೀತಾ ದೇವಿಯವರು ಭೂರಹಿತ ವಿಧವೆಯಾಗಿದ್ದು ಭಗವಾನಿ ದೇವಿಯರ ಕುಟುಂಬದ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಇಬ್ಬರೂ ಆಗಷ್ಟೇ ದಿನದ ಕೆಲಸ ಮುಗಿಸುವ ಹೊತ್ತಿಗೆ ಗುಡಾವರಿ ಗ್ರಾಮದಲ್ಲಿ ಸುಮಾರು ಐದು ಗಂಟೆಯಾಗಿತ್ತು. “ಗರ್ಮಿ ಹೀ ಗರ್ಮಿ ಪಡೇ ಹೈ ಆಜ್ ಕಲ್” [ಇತ್ತೀಚೆಗೆ ಸೆಕೆಯೆಂದರೆ ಸೆಕೆ] ಎನ್ನುತ್ತಾರೆ ಭಗವಾನಿ ದೇವಿ.
ಉತ್ತರ ರಾಜಸ್ಥಾನದ ಚುರೂ ಜಿಲ್ಲೆಯಲ್ಲಿ ಕಾಲ ಕೆಳಗಿನ ಮರಳಿನಿಂದ ಕೂಡಿದ ನೆಲ ಮೇ ಮತ್ತು ಜೂನ್ ತಿಂಗಳ ಬೇಸಿಗೆಯಲ್ಲಿ ದಗದಗಿಸುತ್ತಿದ್ದರೆ ಬೀಸುವ ಗಾಳಿಯು ಉರಿವ ಕುಲುಮೆಯ ಕೆನ್ನಾಲಿಗೆ ಸವರಿದಂತಿರುತ್ತದೆ. ಇನ್ನು ತಾಪಮಾನ ಮತ್ತು ಅದು ಏರುತ್ತಾ ಹೋಗುವದರ ಕುರಿತು ಮಾತನಾಡುವುದಾದರೆ – ಅದಿಲ್ಲಿ ಒಂದು ಸಾಮಾನ್ಯ ಪ್ರಕ್ರಿಯೆ. ಆ ತಿಂಗಳುಗಳಲ್ಲಿ ಇಲ್ಲಿನ ತಾಪಮಾನ ನಲವತ್ತು ಡಿಗ್ರಿಗಳ ತನಕ ಹೋಗುತ್ತದೆ. ಕಳೆದ ತಿಂಗಳಷ್ಟೇ ಎಂದರೆ ಮೇ 2020ರಲ್ಲಿ ಇಲ್ಲಿನ ತಾಪಮಾನ 50 ಡಿಗ್ರಿ ಸೆಲಿಷಿಯಸ್ಗೆ ಏರಿತ್ತು – ಮತ್ತಿದು ಜಗತ್ತಿನಲ್ಲೇ ದಾಖಲಾದ ಅತಿಹೆಚ್ಚಿನ ತಾಪಮಾನವಾಗಿದೆ, ಎಂದು ವರದಿಗಳು ಹೇಳುತ್ತವೆ.
ಹೀಗೆ ಕಳೆದ ವರ್ಷ ತಾಪಮಾನವು ಹಿಂದಿನ ದಾಖಲೆಗಳನ್ನು ಮುರಿದು ಮಾಪನದ ಪಾದರಸ 51 ಡಿಗ್ರಿ ಸೆಲ್ಸಿಯಸ್ ಮಟ್ಟವನ್ನು ತಲುಪಿತ್ತು. ಇದು ಕುದಿಯುವ ನೀರಿನ ತಾಪಮಾನದ ಅರ್ಧಕ್ಕಿಂತ ಹೆಚ್ಚು. ಆದರೆ ಇಲ್ಲಿನ ಬಹಳಷ್ಟು ಜನರಿಗೆ ಇದೊಂದು ವಿಷಯವೇ ಅಲ್ಲ. ಗಜುವಾಸ್ ಗ್ರಾಮದಲ್ಲಿರುವ ತನ್ನ ದೊಡ್ಡ ಮನೆಯಲ್ಲಿನ ಹಾಸಿಗೆಯ ಮೇಲೆ ಮಲಗಿರುವ ನಿವೃತ್ತ ಶಾಲಾ ಶಿಕ್ಷಕ ಮತ್ತು ಭೂಮಾಲಿಕ 75 ವರ್ಷದ ಹರ್ದಯಾಲ್ಜೀ ಸಿಂಗ್ ಹೇಳುವಂತೆ; “ಇದೇನೂ ಹೊಸದಲ್ಲ ಮೂವತ್ತು ವರ್ಷಗಳ ಹಿಂದೆಯೂ ಒಮ್ಮೆ 50 ಡಿಗ್ರಿ ತಲುಪಿತ್ತು”,
ಈ ಸೆಕೆಯ ದಿನಗಳ ಆರು ತಿಂಗಳ ನಂತರ ಮತ್ತೆ ಡಿಸೆಂಬರ್-ಜನವರಿಯಲ್ಲಿ ಚುರೂ ಸೊನ್ನೆ ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನವನ್ನೂ ಕಂಡಿದೆ. ಮತ್ತು ಫೆಬ್ರವರಿ 2020ರಲ್ಲಿ, ಭಾರತದ ಹವಾಮಾನ ಇಲಾಖೆಯು ಚುರೂವಿನಲ್ಲಿರುವ ಭಾರತದ ಬಯಲು ಪ್ರದೇಶಗಳಲ್ಲಿ 4.1 ಡಿಗ್ರಿಗಳಷ್ಟು ಕಡಿಮೆ ತಾಪಮಾನವನ್ನು ದಾಖಲಿಸಿದೆ.


















