ತನ್ನ ಅಜ್ಜಿಯ ಮಡಿಲಿನಲ್ಲಿ ನಿರುತ್ಸಾಹದಿಂದ ಮಲಗಿದ್ದ 3 ವರ್ಷ ವಯಸ್ಸಿನ ಸುಹಾನಿಯನ್ನು ಗಮನಿಸುತ್ತ ದುಗ್ಗ, “ನೀವು ಅದನ್ನು ಯಾವಾಗಲೂ ಜೇನುತುಪ್ಪ ಅಥವಾ ಬೆಲ್ಲದಂತಹ ಸಿಹಿ ಪದಾರ್ಥದೊಂದಿಗೆ ಸೇವಿಸಬೇಕು” ಎಂದರು.
ಮಗುವಿನ ಅಜ್ಜಿ, ಮತ್ತೊಬ್ಬ ಗ್ರಾಮೀಣ ಆರೋಗ್ಯ ವ್ಯವಸ್ಥಾಪಕಿ (RHO) ಸಾವಿತ್ರಿ ನಾಯಕ್ ಮತ್ತು ಮನ್ಕಿ ಕಚ್ಲನ್ (ಆಶಾ ಕಾರ್ಯಕರ್ತೆ) ಇವರುಗಳ ಪ್ರೀತಿಯ ಮನವೊಲಿಕೆಯಿಂದ ಮಲೇರಿಯಾದ ಕಹಿ ಗುಳಿಗೆಯನ್ನು ಮಗುವಿನ ಗಂಟಲಿಗಿಳಿಸಲಾಗುತ್ತದೆ.
ಈ ಪ್ರಕ್ರಿಯೆಯ ಉಸ್ತುವಾರಿ ವಹಿಸುತ್ತ, ಅಂಗಳದಲ್ಲಿ ಆಟವಾಡುತ್ತಿರುವ ಮಕ್ಕಳ ಕಲರವದ ನಡುವೆ, ದೊಡ್ಡ ದಾಖಲೆ ಪುಸ್ತಕವೊಂದರಲ್ಲಿ 39ರ ವಯಸ್ಸಿನ ಊರ್ಮಿಳ, ಈ ಪ್ರಕರಣದ ವಿವರಗಳನ್ನು ಬರೆಯುತ್ತಾರೆ. ಛತ್ತಿಸ್ಗಡದ ನಾರಯಣಪರ ಜಿಲ್ಲೆಯ ನೌಮುನ್ಜ್ಮೆತ ಹಳ್ಳಿಯಲ್ಲಿನ ಅಂಗನವಾಡಿಯೊಂದರ ಭಾಗಶಃ ಆವೃತಗೊಂಡ ಪಡಸಾಲೆಯು ಇವರ ತಾತ್ಕಾಲಿಕ ಚಿಕಿತ್ಸಾಲಯ.
ಪ್ರತಿ ತಿಂಗಳ ಎರಡನೆ ಮಂಗಳವಾರದಂದು ಅಂಗನವಾಡಿಯು ಹೊರರೋಗಿಗಳ ಚಿಕಿತ್ಸಾಲಯವಾಗಿಯೂ ಕಾರ್ಯನಿರ್ವಹಿಸುತ್ತದೆ. ಮಕ್ಕಳು ಅಕ್ಷರಗಳ ಕಲಿಕೆಯಲ್ಲಿ ಮಗ್ನರಾಗಿದ್ದು, ತಾಯಂದಿರು, ಶಿಶುಗಳು ಹಾಗೂ ಇತರರು ಆರೋಗ್ಯ ತಪಾಸಣೆಗಾಗಿ ಹೊರಗೆ ಸಾಲುಗಟ್ಟುತ್ತಾರೆ. ಮುಂಜಾನೆ 10 ಗಂಟೆಗೆ ಹಾಜರಾಗುವ ಊರ್ಮಿಳ ಮತ್ತು ಆರೋಗ್ಯ ಕಾರ್ಯಕರ್ತರ ಆಕೆಯ ತಂಡವು ತಪಾಸಣೆ ಹಾಗೂ ಚುಚ್ಚುಮದ್ದಿನ ಸಲಕರಣೆಗಳೊಂದಿಗೆ ತಮ್ಮ ದಾಖಲೆ ಪುಸ್ತಕಗಳು ಮತ್ತು ಚೀಲಗಳನ್ನು ಹೊರತೆಗೆಯುತ್ತಾರೆ. ಟೇಬಲ್ಲು ಹಾಗೂ ಬೆಂಚೊಂದನ್ನು ಪಡಸಾಲೆಗೆ ಸಾಗಿಸಿ, ತಮ್ಮ ರೋಗಿಗಳ ಭೇಟಿಗೆ ಸಜ್ಜಾಗುತ್ತಾರೆ.
ನಾರಾಯಣ್ಪುರ್ ವಲಯದಲ್ಲಿನ 6 ಜಿಲ್ಲೆಗಳ ಮಲೇರಿಯ ತಪಾಸಣೆಯನ್ನು 35ರ ವಯಸ್ಸಿನ ಸಾವಿತ್ರಿ ನಾಯಕ್ ಅವರನ್ನೊಳಗೊಂಡಂತೆ, ಊರ್ಮಿಳ ಮತ್ತು ಆಕೆಯ ಸಹೋದ್ಯೋಗಿಗಳಿಗೆ ವಹಿಸಲಾಗಿದ್ದು, ಅವರು ಒಂದು ವರ್ಷದಲ್ಲಿ ಕೈಗೊಂಡ ಸುಮಾರು 400 ಮಲೇರಿಯ ತಪಾಸಣೆಗಳಲ್ಲಿ, ಅಂದು ಸುಹಾನಿಯವರು ನಡೆಸಿದ ರಾಪಿಡ್ ಡಯಾಗ್ನೊಸ್ಟಿಕ್ ಟೆಸ್ಟ್ (RDT) ಸಹ ಒಂದೆನಿಸಿದೆ.
ನಾರಾಯಣ್ಪುರ್ ಜಿಲ್ಲೆಯ ಮುಖ್ಯ ಆರೋಗ್ಯಾಧಿಕಾರಿಯಾದ ಡಾ. ಆನಂದ್ ರಾಂ ಗೋಟ ಹೀಗೆನ್ನುತ್ತಾರೆ: “ಆರೋಗ್ಯವನ್ನು ಕುರಿತ ನಮ್ಮ ಸಮಸ್ಯೆಗಳಲ್ಲಿ, ಮಲೇರಿಯ, ಒಂದು ಬೃಹತ್ ಸಮಸ್ಯೆ.. ಅದು ರಕ್ತ ಕಣಗಳು ಮತ್ತು ಯಕೃತ್ತಿನ ಮೇಲೆ ಪರಿಣಾಮವನ್ನು ಬೀರಿ, ರಕ್ತಹೀನತೆಯನ್ನು ಉಂಟುಮಾಡುತ್ತದೆ. ಇದರಿಂದಾಗಿ ದೈಹಿಕ ಸಾಮರ್ಥ್ಯವು ಕುಂದುತ್ತದೆ. ಆದ್ದರಿಂದ, ಕೂಲಿಯೂ ಕಡಿಮೆಯಾಗುತ್ತದೆ. ಮಕ್ಕಳು ಜನಿಸಿದಾಗಿನ ಅವರ ತೂಕವು ಕಡಿಮೆಯಿದ್ದು, ಇದು ಆವರ್ತಿತವಾಗುತ್ತಲೇ ಇರುತ್ತದೆ.”










