“ನಾನು ನನ್ನ ಭೂಮಿಯ ಮಾಲಿಕರಿಗೆ 25,000 ರೂಪಾಯಿಗಳನ್ನು ಕೊಡಬೇಕಿದೆ. ಈ ಸಾಲವನ್ನು ಮರುಪಾವತಿಸದೆ ನಾನು ಅಧಿಯಾ ಕಿಸಾನಿಯನ್ನು (ಗೇಣಿ) ಬಿಡಲು ಸಾಧ್ಯವಿಲ್ಲ” ಎಂದು ರವೇಂದ್ರ ಸಿಂಗ್ ಬರ್ಗಾಹಿ ಹೇಳುತ್ತಾರೆ. "ಅಗರ್ ಚೋಡ್ ದಿಯಾ ತೋ ಯೇ ವಾದಾ ಖಿಲಾಫಿ ಮಾನಾ ಜಾಯೇಗಾ [ಒಂದು ವೇಳೆ ನಾನು ಹಾಗೆ ಬಿಟ್ಟು ಬಿಟ್ಟರೆ ಅದು ಕೊಟ್ಟ ಭಾಷೆ ಮೀರಿದಂತೆ]."
ಮಧ್ಯಪ್ರದೇಶದ ಮುಗ್ವಾರಿ ಗ್ರಾಮದ ವಾಸಿಯಾದ ರವೇಂದ್ರ, ಅಲ್ಲಿ ಸುಮಾರು 20 ವರ್ಷಗಳಿಂದ ಗೇಣಿದಾರರಾಗಿ ಭೂಮಿಯನ್ನು ಕೃಷಿ ಮಾಡುತ್ತಿದ್ದಾರೆ. ಅಧಿಯಾ ಕಿಸಾನಿ (ಕೃಷಿ) ಒಂದು ಸಾಂಪ್ರದಾಯಿಕ, ಮೌಖಿಕ ಒಪ್ಪಂದವನ್ನು ಸೂಚಿಸುತ್ತದೆ - ಮಧ್ಯಪ್ರದೇಶದ ಸಿಧಿ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಮತ್ತು ವಿಂಧ್ಯ ಪ್ರದೇಶದಲ್ಲಿ ಕೆಲವೆಡೆ- ಮಾಲಿಕ್ (ಭೂಮಾಲೀಕರು) ಮತ್ತು ಬಾಡಿಗೆದಾರರು ಕೃಷಿ ವೆಚ್ಚವನ್ನು ಸಮಾನ ಭಾಗಗಳಲ್ಲಿ ಭರಿಸುತ್ತಾರೆ ಮತ್ತು ಇಳುವರಿಯನ್ನೂ ಸರಿ ಪಾಲು ಮಾಡಿಕೊಳ್ಳುತ್ತಾರೆ.
ರವೀಂದ್ರ ಮತ್ತು ಅವರ ಪತ್ನಿ ಮಮತಾ ಎಂಟು ಎಕರೆ ಭೂಮಿಯಲ್ಲಿ ಭತ್ತ, ಗೋಧಿ, ಸಾಸಿವೆ ಮತ್ತು ಬೇಳೆಕಾಳುಗಳನ್ನು ಬೆಳೆಯುತ್ತಾರೆ. ಗುತ್ತಿಗೆ ಕೃಷಿಯನ್ನು ಮಧ್ಯಪ್ರದೇಶದ ಆಡುಭಾಷೆಯಾದ ಬಗೇಲಿ ಭಾಷೆಯಲ್ಲಿ ಅಧಿಯಾ ಎಂದು ಕರೆಯಲಾಗುತ್ತದೆ. ಅಧಿಯಾ ಎಂದರೆ ಅರ್ಧ. ಆದರೆ ರವೀಂದ್ರ ಅವರ ಕುಟುಂಬದ ಪಾಲಿಗೆ ಅರ್ಧ ಎನ್ನವುದು ಯಾವತ್ತೂ ನ್ಯಾಯಯುತವಾಗಿ ದೊರೆತಿಲ್ಲ.
ಭಾರತದಾದ್ಯಂತ ವಿವಿಧ ರೂಪದಲ್ಲಿ ಅಸ್ಥಿತ್ವದಲ್ಲಿರುವ ಈ ಅನೌಪಚಾರಿಕ ಒಪ್ಪಂದದಲ್ಲಿ, ಭೂಮಾಲೀಕರು ಯಾವ ಬೆಳೆ ಬೆಳೆಯುವುದೆನ್ನುವುದನ್ನು ಸೇರಿದಂತೆ ಕೃಷಿ ಸಂಬಂಧಿತ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ತೀವ್ರ ಚಳಿ, ಅಕಾಲಿಕ ಮಳೆ, ಆಲಿಕಲ್ಲು ಮಳೆಯಿಂದಾಗಿ ಬೆಳೆಗಳು ಹಾನಿಗೊಳಗಾದಾಗ ಸರಕಾರ ಅಥವಾ ವಿಮಾ ಕಂಪನಿಗಳಿಂದ ಪರಿಹಾರ ದೊರೆತರೆ ಅದನ್ನು ಭೂಮಾಲಿಕರೇ ಇರಿಸಿಕೊಳ್ಳುತ್ತಾರೆ. ಗೇಣಿದಾರನಿಗೆ ಇದರಲ್ಲಿ ಏನೂ ದೊರೆಯುವುದಿಲ್ಲ.





