ನಮ್ಮಿಂದ ತಡವಾಗಿತ್ತು. ಶಿರ್ಗಾಂವ್ನ ನಮ್ಮ ಪತ್ರಕರ್ತ ಮಿತ್ರ ಸಂಪತ್ ಮೋರೆ, "ನಿಮ್ಮನ್ನು ಭೇಟಿಮಾಡಲೆಂದು ಗಣಪತಿ ಬಾಳಾ ಯಾದವ್ ಈಗಾಗಲೇ ತನ್ನ ಹಳ್ಳಿಯಿಂದ ಎರಡು ಬಾರಿ ಬಂದು ಹೋದರು" ಎಂದು ತಿಳಿಸಿದರು. "ಎರಡು ಬಾರಿಯೂ ಅವರು ತಮ್ಮ ಸ್ವಂತ ಹಳ್ಳಿಯಾದ ರಾಂಪುರಕ್ಕೆ ಹಿಂದಿರುಗಿದರು. ನೀವು ತಲುಪಿದ್ದೀರೆಂದು ತಿಳಿಸಿದ ನಂತರ ಅವರು ಮೂರನೇ ಬಾರಿಗೆ ವಾಪಸ್ಸು ಬರುತ್ತಾರೆ." ಎರಡೂ ಹಳ್ಳಿಗಳ ನಡುವಿನ ಅಂತರ 5 ಕಿ. ಮೀ. ಗಣಪತಿ ಯಾದವ್ ಸೈಕಲ್ಲಿನಲ್ಲಿಯೇ ಇಷ್ಟು ದೂರವನ್ನು ಕ್ರಮಿಸುತ್ತಾರೆ. ಮೂರು ಬಾರಿಯ ಪ್ರಯಾಣವೆಂದರೆ ಒಟ್ಟಾರೆ 30 ಕಿ. ಮೀ.ಗಳು. ಅದೂ ಬೇಸಿಗೆಯ ಮಧ್ಯಾಹ್ನದಲ್ಲಿ. ದಾರಿಯ ತುಂಬ ಕೊಳಕು ಬೇರೆ. ಕಾಲು ಶತಮಾನದಷ್ಟು ಹಳೆಯದಾದ ಸೈಕಲ್ಲಿನಲ್ಲಿ ಪ್ರಯಾಣಿಸುವ ಅವರ ವಯಸ್ಸು 97.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಡೆಗಾಂವ್ ಬ್ಲಾಕ್ನಲ್ಲಿನ ಶಿರ್ಗಾಂವ್ನ ಮೋರೆಯ ತಾತನ ಮನೆಯಲ್ಲಿ ನಾವು ಊಟಕ್ಕೆ ಅಣಿಯಾಗುತ್ತಿದ್ದಂತೆಯೇ, ಗಣಪತಿ ಬಾಳಾ ನಿರಾಯಾಸವಾಗಿ ಸೈಕಲ್ಲಿನಲ್ಲಿ ಬಂದಿಳಿದರು. ಬಿಸಿಲಿನಲ್ಲಿ ಇಷ್ಟು ದೂರ ಕ್ರಮಿಸುವಂತೆ ಮಾಡಿದ್ದಕ್ಕಾಗಿ ನಾನು ಕ್ಷಮೆ ಯಾಚಿಸಿದಾಗ, ಸೌಮ್ಯವಾಗಿ "ಪರವಾಗಿಲ್ಲ ಬಿಡಿ" ಎನ್ನುತ್ತಾ ಮುಗುಳ್ನಕ್ಕರು. "ಮದುವೆಯೊಂದರಲ್ಲಿ ಭಾಗವಹಿಸಲು ನಿನ್ನೆ ಮಧ್ಯಾಹ್ನ ವೀಟಾಗೆ ಹೋಗುವುದಿತ್ತು. ಅಲ್ಲಿಗೂ ಸೈಕಲ್ಲಿನಲ್ಲಿಯೇ ತೆರಳಿದೆ. ನಾನು ಯಾವಾಗಲೂ ಸೈಕಲ್ಲಿನಲ್ಲೇ ಪ್ರಯಾಣಿಸುತ್ತೇನೆ." ಎಂದರವರು. ರಾಂಪುರದಿಂದ ವೀಟಾಗೆ 40 ಕಿ. ಮೀ. ನಿನ್ನೆಯಂತೂ ತಾಪಮಾನ ಸುಮಾರು 40 ಸೆಲ್ಸಿಯಸ್ನಷ್ಟಿದ್ದು, ಬಿಸಿಲು ಅತ್ಯಂತ ಪ್ರಖರವಾಗಿತ್ತು.
"ಒಂದೆರಡು ವರ್ಷಗಳ ಹಿಂದೆ, ಸುಮಾರು 150 ಕಿ. ಮೀ.ಗಳನ್ನು ಕ್ರಮಿಸಿ, ಪಂಥರ್ಪುರಕ್ಕೆ ತೆರಳಿ ವಾಪಸ್ಸು ಬಂದಿದ್ದರು." ಎಂದ ಮೋರೆ, "ಈಗ ಇಷ್ಟೊಂದು ದೂರಕ್ಕೆ ಇವರು ತೆರಳುತ್ತಿಲ್ಲ." ಎಂದರು.







