ಪೊಲಮರಸೆಟ್ಟಿ ಪದ್ಮಜ ಅವರ ಪರಿವಾರವು ೨೦೦೭ರಲ್ಲಿ ನಡೆದ ಅವರ ಮದುವೆಯ ಸಂದರ್ಭದಲ್ಲಿ ೨೫ ತೊಲ (೨೫೦ ಗ್ರಾಂ) ಚಿನ್ನದ ಒಡವೆಗಳ ವರದಕ್ಷಿಣೆಯನ್ನು ನೀಡಿತ್ತು. “ನನ್ನ ಪತಿ ಅದೆಲ್ಲವನ್ನೂ ಖರ್ಚು ಮಾಡಿಕೊಂಡ ಮೇಲೆ ನನ್ನನ್ನೂ ತ್ಯಜಿಸಿದರು”, ಎಂದು ಅಲವತ್ತುಕೊಂಡರು, ೩೧ರ ವಯಸ್ಸಿನ ಪದ್ಮಜ. ಇವರು ತಮ್ಮ ಜೀವನೋಪಾಯಕ್ಕಾಗಿ ಗಡಿಯಾರಗಳ ರಿಪೇರಿಯ ಉದ್ಯೋಗದಲ್ಲಿ ತೊಡಗಿದ್ದಾರೆ.
ಪದ್ಮಜ ಅವರ ಪತಿ ಒಂದೊಂದೇ ಒಡವೆಗಳನ್ನು ಮಾರಿ, ಸರಾಯಿಗೆಂದು ಖರ್ಚುಮಾಡಿದರು. “ನನ್ನ ಹಾಗೂ ನನ್ನ ಕುಟುಂಬದ ಜವಾಬ್ದಾರಿಯನ್ನು, ಅದರಲ್ಲೂ ವಿಶೇಷವಾಗಿ ಮಕ್ಕಳ ಜವಾಬ್ದಾರಿಯನ್ನು ನಾನೇ ಹೊರಬೇಕಾಯಿತು” ಎಂದರಾಕೆ. ೨೦೧೮ರಲ್ಲಿ ಪತಿಯು ತನ್ನನ್ನು ತ್ಯಜಿಸಿದ ನಂತರ, ಅವರು ಕೈ ಗಡಿಯಾರಗಳ ರಿಪೇರಿಯನ್ನು ಪ್ರಾರಂಭಿಸಿದರು. ಬಹುಶಃ ಆಂಧ್ರ ಪ್ರದೇಶದ ವಿಶಾಖಪಟ್ನಂ ನಗರದಲ್ಲಿ ಗಡಿಯಾರಗಳನ್ನು ರಿಪೇರಿ ಮಾಡುವ ಏಕೈಕ ಮಹಿಳೆ ಈಕೆ.
ಆಗಿನಿಂದಲೂ ಇವರು ಚಿಕ್ಕ ಗಡಿಯಾರದ ಅಂಗಡಿಯೊಂದರಲ್ಲಿ ಕೆಲಸವನ್ನು ನಿರ್ವಹಿಸುತ್ತ, ಪ್ರತಿ ತಿಂಗಳು ೬,೦೦೦ ರೂ.ಗಳ ಸಂಬಳವನ್ನು ಪಡೆಯುತ್ತಿದ್ದಾರೆ. ಆದರೆ ಮಾರ್ಚ್ನಲ್ಲಿ ಕೋವಿಡ್-೧೯ ಲಾಕ್ಡೌನ್ ಪ್ರಾರಂಭವಾದಾಗಿನಿಂದಲೂ ಆಕೆಯ ಸಂಪಾದನೆಗೆ ಹೊಡೆತ ಬಿದ್ದಿದೆ. ಆ ತಿಂಗಳಿನಲ್ಲಿ ಈಕೆ ಕೇವಲ ತಮ್ಮ ಸಂಬಳದ ಅರ್ಧದಷ್ಟನ್ನು ಪಡೆದರಾದರೂ, ಏಪ್ರಿಲ್ ಮತ್ತು ಮೇನಲ್ಲಿ ಅದೂ ಸಹ ದೊರೆಯಲಿಲ್ಲ.
ತನ್ನ ಮಕ್ಕಳಾದ ೧೩ ವರ್ಷದ ಅಮನ್ ಮತ್ತು ೧೦ ವರ್ಷದ ರಾಜೇಶ್ ಜೊತೆಗೆ ಕಂಚರಪಲೆಮ್ ಪ್ರದೇಶದಲ್ಲಿ ವಾಸಿಸುತ್ತಿರುವ ಪದ್ಮಜ, “ಮೇ ತಿಂಗಳವರೆಗೂ ನನ್ನ ಉಳಿತಾಯದಿಂದ ಬಾಡಿಗೆಯನ್ನು ನಿಭಾಯಿಸಿದೆ. ಮಕ್ಕಳನ್ನು ಸ್ಕೂಲಿಗೆ ಕಳುಹಿಸುವುದನ್ನು ಮುಂದುವರೆಸಲು ನನಗೆ ಸಾಧ್ಯವಾಗಲೆಂದು ಆಶಿಸುತ್ತೇನೆ. ನನಗಿಂತಲೂ ಅವರು ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆಯಬೇಕೆಂಬುದು ನನ್ನ ಇಚ್ಛೆ (೧೦ನೇ ತರಗತಿಗಿಂತಲೂ ಹೆಚ್ಚಿನ ವ್ಯಾಸಂಗ)” ಎಂದು ತಿಳಿಸಿದರು.
ಪದ್ಮಜಾರ ಸಂಪಾದನೆಯಲ್ಲೇ ಆಕೆಯ ತಂದೆ ತಾಯಿಯರನ್ನೊಳಗೊಂಡ ಅವರ ಸಂಪೂರ್ಣ ಪರಿವಾರವನ್ನು ನಿಭಾಯಿಸಬೇಕಿದೆ. ನಿರುದ್ಯೋಗಿಯಾಗಿರುವ ಈಕೆಯ ಪತಿಯಿಂದ ಯಾವುದೇ ಹಣಕಾಸಿನ ಬೆಂಬಲವಿಲ್ಲ. “ಹಣವಿಲ್ಲದ ಸಂದರ್ಭಗಳಲ್ಲಿ ಈಗಲೂ ಅವರು ಬರುತ್ತಾರೆ” ಎನ್ನುವ ಪದ್ಮಜ, ಆತನು ಬಂದಾಗ, ತಮ್ಮಲ್ಲಿ ಉಳಿದುಕೊಳ್ಳಲು ಆಸ್ಪದ ನೀಡುತ್ತಾರೆ.
“ಗಡಿಯಾರಗಳ ರಿಪೇರಿಯನ್ನು ಕಲಿಯುವ ನಿರ್ಧಾರವು ಅನಿರೀಕ್ಷಿತ. ನನ್ನ ಪತಿಯು ತೊರೆದು ಹೋದಾಗ, ನನಗೆ ದಿಕ್ಕುತೋಚದಂತಾಯಿತು. ಸೌಮ್ಯ ಸ್ವಭಾವದವಳಾದ ನನಗಿದ್ದ ಸ್ನೇಹಿತರು ಕಡಿಮೆ. ನನ್ನ ಸ್ನೇಹಿತರಲ್ಲೊಬ್ಬರು ಇದರ ಸಲಹೆ ನೀಡುವವರೆಗೂ ಏನು ಮಾಡಬೇಕೆಂದು ನನಗೆ ತೋಚುತ್ತಿರಲಿಲ್ಲ” ಎಂದರಾಕೆ. ಈಕೆಯ ಸ್ನೇಹಿತೆಯ ಸಹೋದರ, ಎಂ. ಡಿ. ಮುಸ್ತಫ, ಪದ್ಮಜಾರಿಗೆ ರಿಪೇರಿ ಕೆಲಸವನ್ನು ಕಲಿಸಿದರು. ಸದಾ ಚಟುವಟಿಕೆಯಿಂದ ಕೂಡಿರುವ ವಿಶಾಖಪಟ್ಟಣದ ಜಗದಂಬ ಪ್ರದೇಶದಲ್ಲಿ ಇವರ ಗಡಿಯಾರದ ಅಂಗಡಿಯಿದೆ. ಪದ್ಮಜ ಕೆಲಸವನ್ನು ನಿರ್ವಹಿಸುವ ಅಂಗಡಿಯೂ ಇಲ್ಲೇ ಇದ್ದು, ಆರು ತಿಂಗಳಲ್ಲಿ ಪದ್ಮಜ, ಇದರಲ್ಲಿ ನೈಪುಣ್ಯವನ್ನು ಪಡೆದರು.










