“ನಿಮ್ಮ ಗಂಡ ಕ್ವಿಟ್ ಇಂಡಿಯಾ ಚಳವಳಿ ಸಮಯದಲ್ಲಿ 13 ತಿಂಗಳು ಜೈಲಿಗೆ ಹೋಗಿದ್ದಾಗ ನಿಮಗೆ ಬದುಕು ನಡೆಸುವುದು ಕಷ್ಟವಾಗಿರಬಹುದು ಅಲ್ಲವೇ?” ಎಂದು ನಾನು ಭವಾನಿ ಮಹತೊ ಅವರನ್ನು ಪುರುಲಿಯಾದಲ್ಲಿ ಕೇಳಿದೆ. “ಅಷ್ಟು ದೊಡ್ಡ ಕೂಡುಕುಟುಂಬವನ್ನು ನಡೆಸುವುದು ಮತ್ತು…”
ಅವರು ಸಮಾಧಾನದಿಂದ ಆದರೆ ಬಹಳ ದೃಢವಾಗಿ “ಅವರು ಮನೆಗೆ ಬಂದ ನಂತರ ಪರಿಸ್ಥಿತಿ ಇನ್ನಷ್ಟು ಕಷ್ಟಕರವಾಗಿತ್ತು,” ಎಂದರು. “ಅಂದ್ರೆ ಅವರು ತನ್ನ ಸ್ನೇಹಿತರನ್ನೆಲ್ಲ ಕರೆದು ತರುತ್ತಿದ್ದರು. ಅವರಿಗೆ ಅಡುಗೆ ಬೇಯಿಸಿ ಹಾಕಬೇಕಿತ್ತು. ಅಥವಾ ಅವರು ಆಹಾರ ತೆಗೆದುಕೊಂಡು ಹೋಗುತ್ತಿದ್ದರು. ಕೆಲವೊಮ್ಮೆ 5, 10, 20 ಅಥವಾ ಅದಕ್ಕಿಂತಲೂ ಹೆಚ್ಚು ಜನರು ಇರುತ್ತಿದ್ದರು. ನನಗೆ ಒಂದು ಕ್ಷಣವೂ ವಿರಾಮ ಸಿಗುತ್ತಿರಲಿಲ್ಲ,”
“ಅಂದ ಹಾಗೆ, ಕ್ವಿಟ್ ಇಂಡಿಯಾ ಚಳವಳಿಯೊಂದಿಗಿನ ನಿಮ್ಮ ಸಹಯೋಗ…”
“ಅದರ ಜೊತೆ ನನಗೇನು ಸಂಬಂಧವಿದೆ, ಅಥವಾ ಅಂತಹ ಹೋರಾಟದ ಜೊತೆ?” ಎಂದು ಕೇಳುತ್ತಾರಾಕೆ. “ಹೋರಾಟದ ವಿಷಯದಲ್ಲಿ ನಾನು ಏನೂ ಮಾಡಿಲ್ಲ. ಎಲ್ಲವೂ ನನ್ನ ಗಂಡ ಬೈದ್ಯನಾಥ್ ಮಹತೊ ಮಾಡಿದ್ದು. ನಾನು ಕೇವಲ ನಮ್ಮ ದೊಡ್ಡ ಕುಟುಂಬ, ಆ ಜನರು, ನಾನು ಮಾಡಬೇಕಿರುವ ಅಡುಗೆ – ದಿನವೂ ಊಟಕ್ಕಿರುವ ಜನರ ಸಂಖ್ಯೆ ಹೆಚ್ಚುತ್ತಲೇ ಇತ್ತು!” ಎನ್ನುತ್ತಾರೆ ಭವಾನಿ. “ನೆನಪಿರಲಿ, ಇದೆಲ್ಲದರ ಜೊತೆಗೆ ಬೇಸಾಯವನ್ನು ಸಹ ನೋಡಿಕೊಳ್ಳುತ್ತಿದ್ದೆ.”
ನಾವು ದಂಗಾಗಿ ಹೋಗಿದ್ದೆವು. ನಮ್ಮ ಮುಖದಲ್ಲಿ ನಿರಾಶೆಯ ಗೆರೆಗಳು ಮೂಡುತ್ತಿದ್ದವು. ನಾವು ಬಂಗಾಳದ ಈ ಮೂಲೆಗೆ ನಮ್ಮ ನಡುವೆ ಜೀವಂತವಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕಿಕೊಂಡು ಬಹಳ ದೂರದಿಂದ ಬಂದಿದ್ದೆವು. ಆದರೆ ಈ ಮಹಾನ್ ನಾಯಕಿ ಈ ಪಾತ್ರದಲ್ಲಿ ತನ್ನನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಚೆಪುವಾ ಗ್ರಾಮದ 1ನೇ ಬ್ಲಾಕ್ನ ಮನ್ ಬಜಾರ್ನ ನಿವಾಸಿಯಾದ ಈ ಮಹಿಳೆ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹೋರಾಟದಲ್ಲಿ ತನ್ನದೇನೂ ಪಾಲಿಲ್ಲವೆಂದು ನಿರಾಕರಿಸಿಬಿಟ್ಟಿದ್ದರು.
ಸುಮಾರು 101ರಿಂದ 104 ವರ್ಷಗಳ ನಡುವಿನ ವಯಸ್ಸಿನವರಿರಬಹುದಾದ ಭವಾನಿ ಮಹತೋ ಬಹಳ ಸ್ಪಷ್ಟತೆ ಮತ್ತು ನಿರ್ಣಾಯಕವಾಗಿ ಮಾತನಾಡುತ್ತಾರೆ. ಹಳ್ಳಿಗಳಲ್ಲಿನ ಬಡಜನರ ಹುಟ್ಟಿದ ದಿನವನ್ನು ದಾಖಲಿಸುವುದು ಬಹಳ ಕಷ್ಟದ ಕೆಲಸ. ಸುಮಾರು ನೂರು ವರ್ಷಗಳ ಹಿಂದೆ, ಅವರು ಹುಟ್ಟಿದ ಸಮಯದಲ್ಲಿ ಅದೆಲ್ಲ ಅಸ್ತಿತ್ವದಲ್ಲಿರಲಿಲ್ಲ. ಆದರೆ ನಾವು ಅವರ ದಿವಂಗತ ಪತಿಯ ದಾಖಲೆಯ ಮೂಲಕ ಅವರ ವಯಸ್ಸನ್ನು ಅಂದಾಜಿಸಿದೆವು. ಜೊತೆಗೆ ಅವರ ದೊಡ್ಡ ಕುಟುಂಬದ ಸದಸ್ಯರ ವಯಸ್ಸುಗಳನ್ನೂ ಪರಿಗಣಿಸಿದೆವು. ಅವರಲ್ಲಿ 70 ವರ್ಷದ ಭವಾನಿಯವರ ಮಗನೂ ಒಬ್ಬರು. ಜೊತೆಗೆ ನಾವು ಭೇಟಿ ನೀಡಿದ ಪುರುಲಿಯಾದ ಕೆಲವು ಹಳ್ಳಿಗಳ ಅವರ ಕೆಲವು ಸಮಕಾಲೀನ ಕಿರಿಯರ ವಯಸ್ಸನ್ನೂ ನಮ್ಮ ಊಹೆಗೆ ಪರಿಗಣಿಸಿದೆವು.
ಅದೇನೇ ಇರಲಿ, ಇದು ಇಲ್ಲಿನ ನಿಷ್ಕ್ರಿಯ ಆಧಾರ್ ವ್ಯವಸ್ಥೆಯು ಅವರ ಪೀಳಿಗೆಯ ಜನರಿಗೆ ನೀಡಲಾಗಿರುವ ವಯಸ್ಸಿಗಿಂತಲೂ ನಾವು ಅಂದಾಜಿಸಿದ ವಯಸ್ಸು ಹೆಚ್ಚು ವಿಶ್ವಾಸಾರ್ಹವಾಗಿದೆ. ಅದರಲ್ಲಿ ಭವಾನಿಯವರಿಗೆ 1925ನೇ ಇಸವಿಯನ್ನು ಹುಟ್ಟಿದ ವರ್ಷವನ್ನಾಗಿ ದಾಖಲಿಸಲಾಗಿದೆ. ಅದರ ಪ್ರಕಾರ ಅವರ ವಯಸ್ಸು 97.
ಅವರ ಕುಟುಂಬ ಆಕೆಗೆ 104 ವರ್ಷವೆನ್ನುತ್ತಾರೆ.









