“ಗೀತಾ ನೋವಿನಿಂದ ಬಳಲುತ್ತಿದ್ದರು, ಅವರಿಗೆ ತೀವ್ರ ಜ್ವರ ಬಂದಿತ್ತು, ಇದರಿಂದಾಗಿ ಅವರು ಮೂರ್ಛೆ ಹೋಗಿದ್ದರು.ಮರುದಿನ ಅವರು ವಾಂತಿಯನ್ನು ಸಹ ಮಾಡಿಕೊಳ್ಳುತ್ತಿದ್ದರು, ಇದರಿಂದಾಗಿ ನಾನು ಸಹಜವಾಗಿ ಭಯಬೀತನಾಗಿದ್ದೆ” ಎಂದು ಸತೇಂದರ್ ಸಿಂಗ್ ಹೇಳುತ್ತಾರೆ.
ಮರುದಿನ, ಮೇ 17ರ ಭಾನುವಾರದ ಹೊತ್ತಿಗೆ, ಮುಂದೆ ಏನು ಮಾಡಬೇಕೆಂದು ಸತೇಂದರ್ ಅವರಿಗೆ ತೋಚಿರಲಿಲ್ಲ. ಆಗ ಟಾಟಾ ಮೆಮೋರಿಯಲ್ ಆಸ್ಪತ್ರೆಗೆ ತಲುಪಲು ಚಾರಿಟಬಲ್ ಟ್ರಸ್ಟ್ನೊಂದಿಗೆ ಕೆಲಸ ಮಾಡುವ ಆಂಬ್ಯುಲೆನ್ಸ್ ಚಾಲಕನಿಗೆ ಫೋನ್ ಮಾಡಿದರು. ಅವರು ಅಲ್ಲಿಗೆ ಬಂದ ಕೂಡಲೇ ಗೀತಾ ಅವರನ್ನು ಅಪಘಾತದ ವಾರ್ಡ್ಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆಕೆಗೆ ಕೋವಿಡ್ -19 ಪರೀಕ್ಷೆಗೆ ಒಳಪಡಿಸಿದರು. ಸೋಮವಾರದಂದು ಆಕೆಯ ಫಲಿತಾಂಶ ಪಾಸಿಟಿವ್ ಎಂದು ಧೃಡಪಟ್ಟಿತು.
ಗೀತಾ ಅವರಿಗೆ ಉದರ ಕ್ಯಾನ್ಸರ್ ಇದೆ. ಸುಮಾರು ಎರಡು ವಾರಗಳ ಹಿಂದೆ ಅವರು ಮತ್ತು ಸತೇಂದರ್ ಸೆಂಟ್ರಲ್ ಮುಂಬಯಿಯ ಪರೇಲ್ ಪ್ರದೇಶದ ಟಾಟಾ ಆಸ್ಪತ್ರೆಯ ಬಳಿಯ ಫುಟ್ಪಾತ್ಗೆ ವಾಪಸ್ಸಾಗಿದ್ದರು. ಅದಕ್ಕೂ ಕೆಲವು ವಾರಗಳ ಮೊದಲು, ಅವರು ಆಸ್ಪತ್ರೆಯಿಂದ 50 ಕಿಲೋಮೀಟರ್ ದೂರದಲ್ಲಿರುವ ಡೊಂಬಿವಿಲಿಯಲ್ಲಿ ಸಂಬಂಧಿಕರ ಮನೆಯಲ್ಲಿ ತಂಗಿದ್ದರು. ಅದೂ ಅವರಿಗೆ ಸಾಕಷ್ಟು ಮನವಿ ಮಾಡಿಕೊಂಡಿದ್ದಲ್ಲದೆ ಸಂಬಂಧಿಕರಿಗೆ ಆಹಾರದ ಖರ್ಚು ಮತ್ತು ಬಾಡಿಗೆ ಹಣ ನೀಡುವ ಭರವಸೆ ನೀಡಿದ ನಂತರವೇ ಅವರಿಗೆ ಉಳಿದುಕೊಳ್ಳಲು ಅವಕಾಶ ನೀಡಲಾಯಿತು.
ಗೀತಾ (40) ಮತ್ತು ಸತೇಂದರ್ ಸಿಂಗ್ (42) ನವೆಂಬರ್ನಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಇಚಲಕರಂಜಿ ಪಟ್ಟಣದಿಂದ ಮುಂಬೈಗೆ ಆಗಮಿಸಿದ್ದಾರೆ. ಅವರ 16 ವರ್ಷದ ಮಗ ಬಾದಲ್ ಮತ್ತು 12 ವರ್ಷದ ಮಗಳು ಖುಷಿ, ಸತೇಂದರ್ ಅವರ ಹಿರಿಯ ಸಹೋದರ ಸುರೇಂದ್ರ ಅವರೊಂದಿಗೆ ಇಚಲಕರಂಜಿಯಲ್ಲಿ ವಾಸಿಸುತ್ತಿದ್ದಾರೆ. ಸುಮಾರು ಒಂದು ದಶಕದ ಹಿಂದೆ ಈ ಕುಟುಂಬವು ಬಿಹಾರದ ರೋಹ್ತಾಸ್ ಜಿಲ್ಲೆಯ ದಿನಾರಾ ಬ್ಲಾಕ್ನ ಕಾನಿಯರಿ ಗ್ರಾಮದಿಂದ ಮಹಾರಾಷ್ಟ್ರಕ್ಕೆ ವಲಸೆ ಬಂದಿತ್ತು. ಸತೇಂದರ್ ಇಚಲಕರಂಜಿಯ ಪವರ್ಲೂಮ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಗೀತಾ ಅವರ ಜೊತೆ ಮುಂಬೈಗೆ ತೆರಳುವ ಮೊದಲು ಅವರು ತಿಂಗಳಿಗೆ 7000 ರೂ.ಗಳಂತೆ ದುಡಿಯುತ್ತಿದ್ದರು.
"ನಾವು ಶೀಘ್ರದಲ್ಲೇ ಹಿಂದಿರುಗುತ್ತೇವೆ ಎಂದು ನಾವು ನಮ್ಮ ಮಕ್ಕಳಿಗೆ ಭರವಸೆ ನೀಡಿದ್ದೇವೆ, ಆದರೆ ಅವರ ಮುಖಗಳನ್ನು ನಾವು ಯಾವಾಗ ನೋಡುತ್ತೇವೆ ಎನ್ನುವುದು ಈಗ ಗೊತ್ತಾಗುತ್ತಿಲ್ಲ" ಎಂದು ಗೀತಾ ಮಾರ್ಚ್ ತಿಂಗಳಲ್ಲಿ ಹೇಳಿದ್ದರು.
ನವೆಂಬರ್ನಲ್ಲಿ ಮುಂಬೈಗೆ ಬಂದಾಗ, ಅವರು ಉತ್ತರ ಉಪನಗರ ಗೋರೆಗಾಂವ್ನಲ್ಲಿ, ಸತೇಂದರ್ ಅವರ ಸೋದರ ಸಂಬಂಧಿಯೊಂದಿಗೆ ಉಳಿದುಕೊಂಡಿದ್ದರು. ಆದರೆ ಕೋವಿಡ್-19ರ ಭಯದಿಂದ, ಅವರ ಸೋದರ ಸಂಬಂಧಿ ಹೊರಹೋಗುವಂತೆ ವಿನಂತಿಸಿದ್ದರು. ಮಾರ್ಚ್ 20ರಂದು ನಾನು ಅವರನ್ನು ಭೇಟಿಯಾದಾಗ "ನಾವು ನಿಲ್ದಾಣಗಳಲ್ಲಿ ಮತ್ತು ಈ ಫುಟ್ಪಾತ್ನಲ್ಲಿದ್ದೆವು" ಎಂದು ಗೀತಾ ಹೇಳಿದ್ದರು. ನಂತರ ಅವರು ಡೊಂಬಿವಲಿಗೆ ತೆರಳಿದ್ದರು. (ನೋಡಿ: Locked down with cancer on Mumbai’s footpaths )





