ಕೊರೊನ ವೈರಸ್ ಕುರಿತ ತಮ್ಮ ಮೊದಲ ಭಾಷಣದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು; ಜನರು ತಟ್ಟೆ ಮುಂತಾದುವುಗಳಿಂದ ಗಂಟೆಯ ಶಬ್ದವನ್ನು ಹೊರಡಿಸಿ, ಕೆಟ್ಟ ಚೇತನಗಳನ್ನು ಹೆದರಿಸಿ ಓಡಿಸುವಂತೆ ಕರೆ ನೀಡಿದರು.
ತಮ್ಮ ಎರಡನೆ ಭಾಷಣದಲ್ಲಿ, ನಮ್ಮೆಲ್ಲರಲ್ಲೂ ಅವರು ಭಯವನ್ನು ಹುಟ್ಟಿಸಿದರು.
ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಬಡವರು, ಆಹಾರ ಮತ್ತಿತರ ಅವಶ್ಯಕ ವಸ್ತುಗಳನ್ನು ಮುಂದಿನ ದಿನಗಳಲ್ಲಿ ಪಡೆಯುವುದು ಹೇಗೆ ಎಂಬುದರ ಕುರಿತು ಅವರ ಭಾಷಣದಲ್ಲಿ ಒಂದು ಪದವನ್ನೂ ಉಚ್ಛರಿಸಲಿಲ್ಲ. ಹೀಗಾಗಿ ಎಲ್ಲೆಡೆ ಆತಂಕದ ವಾತಾವರಣ ದಿಢೀರನೆ ವ್ಯಾಪಿಸತೊಡಗಿತು. ಮಧ್ಯಮ ವರ್ಗದವರು ಅಂಗಡಿ ಮತ್ತು ಮಾರುಕಟ್ಟೆಗಳಲ್ಲಿ ಕಿಕ್ಕಿರಿದು ಸೇರತೊಡಗಿದರು – ಬಡವರಿಗೆ, ನಗರವನ್ನು ತೊರೆದು ತಮ್ಮ ಹಳ್ಳಿಗಳತ್ತ ಹೊರಟ ವಲಸಿಗರಿಗೆ, ಸಣ್ಣಪುಟ್ಟ ಮಾರಾಟಗಾರರಿಗೆ, ಮನೆಗೆಲಸದವರಿಗೆ, ಕೃಷಿ ಕಾರ್ಮಿಕರಿಗೆ, ರಬಿ ಫಸಲಿನ ಕಟಾವನ್ನು ಪೂರೈಸಲು ಸಾಧ್ಯವಾಗದ ರೈತರಿಗೆ, ಕಟಾವನ್ನೂ ಪೂರೈಸಿದ್ದಾಗ್ಯೂ, ಸಂಬಂಧಿತ ಇತರೆ ಕೆಲಸಗಳನ್ನು ಬಾಕಿಯುಳಿಸಿಕೊಂಡವರಿಗೆ, ನೂರಾರು, ಮಿಲಿಯಗಟ್ಟಲೆ ಭಾರತೀಯ ಅಂಚಿನ ಸಮುದಾಯಗಳಿಗೆ ಇದು ಸುಲಭ ಸಾಧ್ಯವಾಗಿರಲಿಲ್ಲ.
ಮಾರ್ಚ್ 26 ರಂದು ಹಣಕಾಸು ಸಚಿವರು ಪ್ರಕಟಿಸಿದ ಪ್ಯಾಕೇಜ್ನಲ್ಲಿ, ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಈಗಾಗಲೇ ವಿತರಿಸಲ್ಪಟ್ಟಿರುವ 5 ಕೆ.ಜಿ ಧಾನ್ಯದ ಜೊತೆಗೆ ಪ್ರತಿಯೊಬ್ಬರಿಗೂ 3 ತಿಂಗಳವರೆಗೆ 5 ಕೆ.ಜಿ ಗೋಧಿ ಅಥವಾ ಅಕ್ಕಿಯನ್ನು ಉಚಿತವಾಗಿ ಹಂಚಲಾಗುತ್ತದೆಯೆಂದು ಪ್ರಕಟಿಸಲಾಯಿತು. ಆದರೆ, ಈ ಮೊದಲಿನ ಅಥವಾ ಪ್ರಸ್ತುತದ 5 ಕೆ.ಜಿ.ಗಳು ಉಚಿತವೇ ಅಥವ ಅದಕ್ಕೆ ಹಣವನ್ನು ಪಾವತಿಸಬೇಕೆ ಎಂಬುದು ಸ್ಪಷ್ಟವಿರಲಿಲ್ಲ. ಇದಕ್ಕೆ ಹಣವನ್ನು ಪಾವತಿಸಬೇಕೆಂದಾದರೆ ಇದು ಸಾಧ್ಯವಾಗದ ಮಾತು. ‘ಪ್ಯಾಕೇಜ್ನಲ್ಲಿನ’ ಹಲವಾರು ಅಂಶಗಳು ಈಗಾಗಲೇ ಅಸ್ತಿತ್ವದಲ್ಲಿರುವ ಯೋಜನೆಗಳಿಗೆ ನಿಗದಿಸಲ್ಪಟ್ಟ ಮೊತ್ತವಾಗಿದೆ. 20 ರೂ.ಗಳ MGNREGA ಕೂಲಿಯಲ್ಲಿನ ಹೆಚ್ಚಳವು, ಬಾಕಿಯುಳಿದಿದ್ದ ಮೊತ್ತವೇ ಹೌದು. ಹೆಚ್ಚುವರಿ ದಿನಗಳ ಮಾತೇ ಇಲ್ಲವಲ್ಲ? ಒಂದೇ ಬಾರಿಗೆ ಅವರು ಕೆಲಸದಲ್ಲಿ ತೊಡಗಿದ್ದೇ ಆದರೆ, ಅವರು ಯಾವ ಪ್ರಕಾರದ ಕೆಲಸದಲ್ಲಿ ತೊಡಗತಕ್ಕದ್ದು? ಸಾಮಾಜಿಕ ದೂರವನ್ನು ಕಾಯ್ದುಕೊಳ್ಳಲು ಅವರಿಗೆ ಸಾಧ್ಯವಾಗುತ್ತದೆಯೇ? ಕೆಲಸದ ಪರಿಮಾಣವು ನಿರೀಕ್ಷಿಸಬಹುದಾದ ಅನೇಕ ವಾರಗಳ ಅವಧಿಯನ್ನು ಜನರು ನಿಭಾಯಿಸುವುದಾದರೂ ಹೇಗೆ? ಅವರ ಆರೋಗ್ಯವು ಇದನ್ನು ಸಾಧ್ಯವಾಗಿಸುತ್ತದೆಯೇ? ಕೆಲಸವಿರಲಿ ಇಲ್ಲದಿರಲಿ, ಈ ಸಂಕಷ್ಟವು ಎಲ್ಲಿಯವರೆಗೆ ಮುಂದುವರಿಯುವುದೋ ಅಲ್ಲಿಯವರೆಗೂ ಪ್ರತಿಯೊಬ್ಬ ಕೆಲಸಗಾರ ಹಾಗೂ ರೈತನಿಗೂ ದಿನಂಪ್ರತಿ MGNREGA ಕೂಲಿಯನ್ನು ಪಾವತಿಸತಕ್ಕದ್ದು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಈಗಾಗಲೇ 2,000 ರೂ.ಗಳ ಸೌಲಭ್ಯವಿದ್ದು, ಅದಿನ್ನೂ ಬಾಕಿಯಿರುವ ಕಾರಣ, ಇದರಲ್ಲಿ ಹೊಸದೇನನ್ನೂ ಸೇರಿಸಲ್ಪಟ್ಟಿಲ್ಲ. ತ್ರಿಮಾಸದ (quarter) ಅಂತಿಮ ತಿಂಗಳಿನಲ್ಲಿ ಪಾವತಿಸುವುದಕ್ಕೆ ಬದಲಾಗಿ, ಅದನ್ನು ಮೊದಲ ತಿಂಗಳಿನಲ್ಲಿ ಮುಂಗಡವಾಗಿ ನೀಡಲಾಗುತ್ತಿದೆ. ಈ ಸಂಕಷ್ಟದ ಪರಿಸ್ಥಿತಿಯ ನಿಭಾವಣೆ ಹಾಗೂ ಲಾಕ್ಡೌನ್ ನಿಮಿತ್ತ ವ್ಯಯಿಸಲು ಇಚ್ಛಿಸಿರುವ 1.7 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ನ ಹಣದ ವಿಂಗಡಣೆಯ ಯಾವುದೇ ವಿವರಣೆಯನ್ನು ಹಣಕಾಸು ಸಚಿವರು ಪ್ರಕಟಿಸಿರುವುದಿಲ್ಲ. ಇದರಲ್ಲಿನ ಹೊಸ ಅಂಶಗಳೇನು? ಈ ಮೊತ್ತದಲ್ಲಿನ ಹಳೆಯ ಬಾಬ್ತು ಎಷ್ಟಿದೆ ಅಥವ ಪ್ರಸ್ತುತ ಯೋಜನೆಗಳನ್ನು ಒಟ್ಟುಗೂಡಿಸಿ ಈ ಮೊತ್ತವನ್ನು ನಿರ್ಧರಿಸಲಾಗಿದೆಯೇ? ಅವು, ತುರ್ತುಪರಿಸ್ಥಿತಿಗಳ ನಿಭಾವಣೆ ಮಾಡಲಾರವು. ಪಿಂಚಣಿದಾರರು, ವಿಧವೆಯರು ಮತ್ತು ಅಂಗವಿಕಲರಿಗೆ ಎರಡು ಕಂತಿನಲ್ಲಿ 1,000 ರೂಗಳನ್ನು ಮೂರು ತಿಂಗಳಿನಲ್ಲಿ ಕೊಡಲಾಗುತ್ತದೆ? 20 ಕೋಟಿ ಮಹಿಳೆಯರಿಗೆ ಜನ್ ಧನ್ ಯೋಜನೆಯಡಿ ಮೂರು ತಿಂಗಳವರೆಗೆ 500 ರೂ.ಗಳನ್ನು ಪಾವತಿಸಲಾಗುತ್ತದೆ? ಇದು ಗುರುತಿನ ಚೀಟಿಗಿಂತಲೂ ಕಡೆಯಾದುದು. ಇದು ಭಂಡತನವೇ ಸರಿ.
ಸ್ವಸಹಾಯ ಗುಂಪುಗಳು ಪ್ರಸ್ತುತದಲ್ಲಿನ ಸಾಲದ ಹಣವನ್ನು ಪಡೆಯುವುದೇ ದುಸ್ವಪ್ನವೆನಿಸಿರುವಾಗ, ಸಾಲದ ಮಿತಿಯಲ್ಲಿನ ಹೆಚ್ಚಳವು ಪರಿಸ್ಥಿತಿಯನ್ನು ಹೇಗೆ ತಾನೇ ಮಾರ್ಪಾಡುಗೊಳಿಸೀತು? ತಮ್ಮ ಸ್ವಂತ ಹಳ್ಳಿಗಳಿಗೆ ವಾಪಸ್ಸು ತೆರಳುವ ಪ್ರಯತ್ನದಲ್ಲಿ ದೂರದಲ್ಲೆಲ್ಲೋ ಸಿಲುಕಿಕೊಂಡಿರುವ ಎಣಿಸಲಾರದಷ್ಟು ಸಂಖ್ಯೆಯ ವಲಸೆ ಕಾರ್ಮಿಕರಿಗೆ ಈ ‘ಪ್ಯಾಕೇಜ್ನಿಂದಾಗುವ’ ಸಹಾಯವಾದರೂ ಏನು? ವಲಸಿಗರಿಗೆ ಇದರಿಂದ ಸಹಾಯವಾಗುತ್ತದೆಂಬ ಸಮರ್ಥನೆಯು ಆಧಾರ ರಹಿತವಾದುದು. ಗಂಭೀರ ಸ್ವರೂಪದ ತುರ್ತುಪರಿಸ್ಥಿತಿ ನಿಭಾವಣಾ ಕ್ರಮಗಳನ್ನು ರೂಪಿಸುವಲ್ಲಿನ ವೈಫಲ್ಯವು ಅಪಾಯಕಾರಿಯಾಗಿದ್ದು, ಪ್ಯಾಕೇಜ್ಗಳನ್ನು ರೂಪಿಸುವವರ ನಿಲುವು ಗಾಬರಿ ಹುಟ್ಟಿಸುವಂತಿದೆ. ಈ ನೆಲದಲ್ಲಿ ಈಗ ಉದ್ಭವವಾಗುತ್ತಿರುವ ಪರಿಸ್ಥಿತಿಗಳ ಬಗ್ಗೆ ಅವರಿಗೆ ಯಾವುದೇ ಅಂದಾಜುಗಳಿಲ್ಲವೆಂಬುದು ಗೋಚರವಾಗುತ್ತಿದೆ.






