“ಮನೆಯ ಮಾಡಿನಿಂದ ಇಲಿಗಳು ಬಿದ್ದು ಸಾಯುತ್ತಿದ್ದ ದಿನಗಳು ಈಗಲೂ ನೆನಪಿದೆ. ಇದು ನಾನು ಕಂಡ ಅತ್ಯಂತ ಕೆಟ್ಟ ಶಕುನವಾಗಿತ್ತು. ಇದನ್ನು ಕೇಳಿ ನೀವು ನಗಬಹುದು ಆದರೆ ಆ ದಿನಗಳಲ್ಲಿ ಹಾಗೆ ಇಲಿಗಳು ಬಿದ್ದು ಸತ್ತರೆ ನಾವು ಮನೆಯನ್ನು ತೊರೆಯಬೇಕಿತ್ತು. ಮತ್ತೆ ಮನೆಗೆ ಮರಳುವುದು ಯಾವಾಗಲೆಂದು ನಮಗೆ ತಿಳಿದಿರುತ್ತಿರಲಿಲ್ಲ.”
ಈ ಸ್ಪಷ್ಟ ಚಿತ್ರಣವನ್ನು ಕೊಟ್ಟವರು ಕೊಯಮತ್ತೂರಿನ ಕಳಪಟ್ಟಿಯ ನಿವಾಸಿಯಾದ ಕುಳಂದೈ ಅಮ್ಮಾಳ್ ಅವರು. ಈಗ 80ರ ಪ್ರಾಯದವರಾಗಿರುವ ಅವರು 1940ರ ದಶಕದ ಆರಂಭದಲ್ಲಿ ಕೊನೆಯ ಬಾರಿಗೆ ತಮಿಳುನಾಡಿನ ಈ ನಗರವನ್ನು ಪ್ಲೇಗ್ ಆಕ್ರಮಿಸಿದಾಗ ಅವರಿನ್ನೂ ಹದಿಹರೆಯ ತಲುಪಿರಲಿಲ್ಲ.
ಕೊಯಮತ್ತೂರು ಅಂಟುರೋಗಗಳ ವಿಷಯದಲ್ಲಿ ಬಹಳಷ್ಟು ನೋವಿನ ಇತಿಹಾಸವನ್ನು ಹೊಂದಿದೆ. ಇಲ್ಲಿ ಸಿಡುಬಿನಿಂದ ಹಿಡಿದು ಪ್ಲೇಗ್, ಕಾಲರಾ ತನಕ ಬೇರೆಡೆಗಿಂತಲೂ ಹೆಚ್ಚು ತನ್ನ ಪರಿಣಾಮ ಬೀರಿವೆ. ಈ ನಗರದಲ್ಲಿರುವ ಪ್ಲೇಗ್ ಮಾರಿಯಮ್ಮನ್ (ಕರಿ ಮಾರಿಯಮ್ಮ ಎಂದೂ ಕರೆಯಲಾಗುತ್ತದೆ) ದೇವಸ್ಥಾನಗಳ ಸಂಖ್ಯೆ ಇದಕ್ಕೆ ಇಂಬು ನೀಡುತ್ತದೆ. ಈ ನಗರದಲ್ಲಿ ಒಟ್ಟು 16 ಪ್ಲೇಗ್ ಮಾರಿಯಮ್ಮನ್ ದೇವಸ್ಥಾನಗಳಿವೆ.
ಮತ್ತು ಸಹಜವಾಗಿ ಕೊರೋನಾ ಆಗಮನದೊಂದಿಗೆ ಕೊರೋನಾ ದೇವಿಯ ಆಗಮನವೂ ಆಗಿದೆ. ಆದರೆ ಪ್ಲೇಗ್ ಮಾರಿಯಮ್ಮನ್ ಕೊರೋನಾ ದೇವಿಗಿಂತಲೂ ಹೆಚ್ಚಿನ ಭಕ್ತರನ್ನು ಹೊಂದಿದೆ. ಪಕ್ಕ ತಿರುಪ್ಪೂರ್ ಜಿಲ್ಲೆಯಲ್ಲೂ ಕೆಲವು ದೇವಸ್ಥಾನಗಳಿದ್ದು ಅಲ್ಲಿ ಈಗಲೂ ಜಾತ್ರೆಗಳನ್ನು ನಡೆಸಲಾಗುತ್ತದೆ ಮತ್ತು ಭಕ್ತರು ಅಲ್ಲಿಗೆ ಬರುತ್ತಿರುತ್ತಾರೆ.
1903ರಿಂದ 1942ರವರೆಗೆ, ಕೊಯಮತ್ತೂರು ಕನಿಷ್ಠ 10 ಪ್ಲೇಗ್ ದಾಳಿಗಳನ್ನು ಎದುರಿಸಿತು, ಸಾವಿರಾರು ಜನರನ್ನು ಈ ಕಾಯಿಲೆಗೆ ಕಳೆದುಕೊಂಡಿತು. ಅದು ಇಲ್ಲವಾದ ದಶಕಗಳ ನಂತರವೂ, ಪ್ಲೇಗ್ ಈ ನಗರದ ಜನರ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಕುಳಂದೈ ಅಮ್ಮಾಳ್ ಅವರಂತಹ ಅನೇಕ ಹಳೆಯ ಕಾಲದ ಜನರಿಗೆ, ಪ್ಲೇಗ್ ಎನ್ನುವುದು ನಗರವು ಐತಿಹಾಸಿಕವಾಗಿ ಅನುಭವಿಸಿದ ಕರಾಳ ದಿನಗಳ ನಡುಕಹುಟ್ಟಿಸುವ ನೆನಪು.
ಸದಾ ಗಿಜಿಗುವ ಟೌನ್ಹಾಲ್ ಪ್ರದೇಶದಲ್ಲಿರುವ ಪ್ಲೇಗ್ ಮಾರಿಯಮ್ಮನ್ ದೇವಸ್ಥಾನ ಬಹುಶಃ ಈ ನಗರದ ಹೆಚ್ಚು ಹೆಸರುವಾಸಿ ದೇವಸ್ಥಾನ. ಅಲ್ಲಿ ಹೂವಿನ ವ್ಯಾಪಾರಿಯೊಬ್ಬರು ಅಂದಿನ ಗಡಿಬಿಡಿಯ ಸಂಜೆಗೆ ತಯಾರಾಗುತ್ತಿದ್ದರು. “ಇಂದು ಶುಕ್ರವಾರ. ವ್ಯಾಪಾರ ಚೆನ್ನಾಗಿ ಆಗುತ್ತದೆ,” ಎಂದು 40ರ ಹರೆಯದ ಕಣ್ಣಮ್ಮಾಳ್ ಕಟ್ಟುತ್ತಿದ್ದ ಹೂವಿನಿಂದ ಕಣ್ಣೆತ್ತದೆ ಹೇಳಿದರು.
“ಈ ದೇವರು ಬಹಳ ಶಕ್ತಿವಂತೆ. ಈಗ ನಮ್ಮಲ್ಲಿ ಕೊರೋನಾ ದೇವಿ ದೇವಸ್ತಾನ ಇರಬಹುದು, ಆದರೆ ಕರುಮಾರಿಯಮ್ಮ ನಮ್ಮಲ್ಲಿ ಒಬ್ಬಳು. ನಾವು ಅವಳನ್ನು ಪೂಜಿಸುವುದನ್ನು ಮುಂದುವರೆಸಿದ್ದೇವೆ. ವಿಶೇಷವಾಗಿ ನಮಗೆ ಮೈಯಲ್ಲಿ ಹುಷಾರಿಲ್ಲದ ಸಮಯಗಳಲ್ಲಿ. ಇದಲ್ಲದೆ ಸಾಮಾನ್ಯ ಪ್ರಾರ್ಥನೆಗಳನ್ನೂ ದೇವಿಗೆ ಸಲ್ಲಿಸುತ್ತೇವೆ.“ ಇಲ್ಲಿ ʼಸಾಮಾನ್ಯ ಪ್ರಾರ್ಥನೆಗಳೆಂದರೆ ಭಕ್ತರ ಮಾಮೂಲಿ ಕೋರಿಕೆಗಳಾದ ಸಮೃದ್ಧಿ, ಯಶಸ್ಸು ಮತ್ತು ದೀರ್ಘಾಯುಷ್ಯ. ಪ್ಲೇಗ್ ಕಾಲವು ಕೊನೆಗೊಂಡ ನಾಲ್ಕು ದಶಕಗಳ ನಂತರ ಜನಿಸಿದ ಕಣ್ಣಮ್ಮಾಳ್ ಅವರ ಪೀಳಿಗೆಯ ಜನರೂ ಸಹಾಯಕ್ಕಾಗಿ ಮಾರಿಯಮ್ಮನ ಮೊರೆಹೋಗುತ್ತಾರೆ.












