ಸಥಿ ಮಣಿಯವರು, ರಾತ್ರಿಯ ಸಿದ್ಧತೆಗಳಲ್ಲಿ ತೊಡಗಿದ್ದು, ಮನೆಯ ಸುತ್ತಲೂ ಕಣ್ಣಾಡಿಸಿ, ಕ್ಷಿಪ್ರ ಪರಶೀಲನೆ ನಡೆಸಿದ್ದಾರೆ: ಅವರ ಮುಖ್ಯ ದಾಖಲೆ ಪತ್ರಗಳು ಮತ್ತು ಅತ್ಯುತ್ತಮ ಬಟ್ಟೆಗಳನ್ನು ಪ್ಲಾಸ್ಟಿಕ್ನಲ್ಲಿ ಸುತ್ತಿ, ಗೋಡೆಗಳ ಮೇಲೆ ನೇತುಹಾಕಲಾಗಿದೆ; ನೆಲದಿಂದ ಎರಡು ಅಡಿ ಎತ್ತರದಲ್ಲಿನ ಸಿಮೆಂಟ್ ಚಪ್ಪಡಿಯ ಮೇಲೆ, ಅಡಿಗೆಯ ಪಾತ್ರೆಗಳಿವೆ.
“ಅನೇಕ ಬಾರಿ ರಾತ್ರಿ ೨ ಗಂಟೆಗೆ ನನ್ನ ಮನೆಯೊಳಗೆ ನೀರು ನುಗ್ಗಿದಾಗ ಎಚ್ಚರಗೊಂಡಿದ್ದೇನೆ. ನಾನು ಬಿಸಾಡಿದ ದಿಂಬು ಹಾಗೂ ಹೊದಿಕೆಗಳಿಗೆ ಲೆಕ್ಕವೇ ಇಲ್ಲ. ಒಗೆದ ನಂತರವೂ ಅವುಗಳಲ್ಲಿನ ಕಪ್ಪು ಕಲೆ ಹಾಗೂ ಹೊಲಸು ವಾಸನೆ ಹೋಗುತ್ತಿರಲಿಲ್ಲ” ಎಂದರು ಸಥಿ. ಕೇರಳದ ಕೊಚ್ಚಿನ್ನಲ್ಲಿನ ಥೆವರ-ಪೆರಂದೂರ್ (ಟಿಪಿ) ಕಾಲುವೆಯ ಒಂದು ಭಾಗದಲ್ಲಿರುವ ಗಾಂಧಿ ನಗರದ ಪಿ ಅಂಡ್ ಟಿ ಕಾಲೋನಿಯ ನಿವಾಸಿಯಾದ ಇವರ ವಯಸ್ಸು ೬೫ ವರ್ಷ.
ಟಿಪಿ ಕಾಲುವೆಯು, ಉತ್ತರದ ಪೆರಂದೂರ್ ಪುಜದಿಂದ, ದಕ್ಷಿಣ ಕೊಚ್ಚಿನ್ನ ಥೆವರಕ್ಕೆ ಹರಿಯುತ್ತದೆ. ಜಿಲ್ಲೆಯ ಹಿನ್ನೀರಿನಲ್ಲಿ ಹರಿಯುವ ಮುನ್ನ ಅದು ಸುಮಾರು 9.84 ಕಿ. ಮೀ.ಗಳಷ್ಟು ದೂರವನ್ನು ಕ್ರಮಿಸುತ್ತದೆ. ಕೊಚ್ಚಿನ್ ಮೂಲಕ ಹರಿಯುವ 11 ಪ್ರಮುಖ ಜಲಮಾರ್ಗಗಳಲ್ಲಿ ಈ ಕಾಲುವೆಯೂ ಒಂದೆನಿಸಿದ್ದು, ಎರ್ನಾಕುಲಂ ಹಾಗೂ ಅದರ ಸುತ್ತಮುತ್ತಲಿನ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು, ಸರ್ಕಾರವು ಇವುಗಳಲ್ಲಿನ ಕೆಲವನ್ನು ಜಲಮಾರ್ಗಗಳಾಗಿ ಉನ್ನತೀಕರಿಸುವ ಏರ್ಪಾಟಿನಲ್ಲಿದೆ.
ಕಳೆದ ಮೂರು ದಶಕಗಳಿಂದ, ಕೊಚ್ಚಿನ್ ಜನಸಂಖ್ಯೆ, 2.1 ಮಿಲಿಯನ್ನಷ್ಟು ದ್ವಿಗುಣಗೊಂಡಿದೆ. ಒಂದು ಮೀಟರ್ಗಿಂತಲೂ ಕಡಿಮೆ ಆಳವಿರುವ ಟಿಪಿ ಕಾಲುವೆಯು ತೆರೆದ ಗಟಾರದಂತೆ ಹದಗೆಟ್ಟಿದ್ದು; ಮೆಟ್ರೊ ನಿರ್ಮಾಣದ ಕಾಮಗಾರಿ ಹಾಗೂ ಒಳಹರಿವಿನ ಕೊರತೆಯಿಂದಾಗಿ ಎರಡು ಜಾಗಗಳಲ್ಲಿ ಅದಕ್ಕೆ ಅಡಚಣೆಯುಂಟಾಗಿದೆ. ಆಸ್ಪತ್ರೆಗಳು, ಸ್ಥಳೀಯ ಮಾರುಕಟ್ಟೆಗಳು, ಕೈಗಾರಿಕೆಗಳು ಹಾಗೂ ಮನೆಗಳ ತ್ಯಾಜ್ಯವು ಇದಕ್ಕೆ ನೇರವಾಗಿ ಬಂದು ಸೇರುತ್ತದೆ. ನಿರ್ಗಮನದ ಸುಮಾರು 632 ಪೈಪುಗಳು ಮತ್ತು ಬೀದಿಯ ೨೧೬ ಚರಂಡಿ ಮಾರ್ಗಗಳೆಲ್ಲವೂ ಸಂಸ್ಕರಿಸದ ಮಲಿನ ಪದಾರ್ಥಗಳು, ಕೈಗಾರಿಕೆಯ ಹೊರಹರಿವುಗಳು ಮತ್ತು ಮಳೆ ನೀರನ್ನು ಕಾಲುವೆಗೆ ಹರಿಸುತ್ತವೆ. ದಡದಲ್ಲಿ ಸಾಲುಗಟ್ಟಿರುವ ಒಣ ಕಸದಿಂದಾಗಿ, ಕಾಲುವೆಯ ವಿಸ್ತಾರವು, ಕೆಲವೆಡೆಗಳಲ್ಲಿ ಕೇವಲ ೮ ಮೀಟರ್ಗೆ ಕುಗ್ಗಿದೆ.
ಪಿ ಅಂಡ್ ಟಿ ಕಾಲೋನಿಯ ಇತರೆಲ್ಲರಂತೆ, ಸಥಿ ಅವರ ಮನೆಯು. ಎರ್ನಾಕುಲಂ ರೈಲು ನಿಲ್ದಾಣದ ಹಿಂದೆ, ಕಾಲುವೆಯ ದಡದಲ್ಲಿದೆ. ಕಾಲೋನಿಯು ಸುಮಾರು 250 ಮೀಟರ್ ವ್ಯಾಪ್ತಿಯ ಪೊರಂಬೊಕ್ ಜಾಗವನ್ನು ಆವರಿಸಿದೆ (ಸರ್ಕಾರಕ್ಕೆ ಸೇರಿದ ಅಥವಾ ಸಾರ್ವಜನಿಕ ಉದ್ದೇಶಗಳಿಗಾಗಿ ಮೀಸಲಾದ ಖಾಲಿ ಜಾಗ). ಬಾಡಿಗೆಯ ಮನೆಗಿಂತಲೂ ಕಡಿಮೆ ವೆಚ್ಚದಲ್ಲಿ ಪೊರಂಬೊಕ್ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಮನೆಯನ್ನು ನಿರ್ಮಿಸಬಹುದೆಂದು ಇಲ್ಲಿನ ನಿವಾಸಿಗಳು ತಿಳಿಸುತ್ತಾರೆ. ಎರಡು ದಶಕಗಳ ಹಿಂದೆ ಸ್ಥಳೀಯ ಜನರ ಸಹಾಯಪಡೆಯು ದಾನವಾಗಿ ನೀಡಿದ ಕಾಂಕ್ರೀಟಿನ ದೊಡ್ಡ-ತುಂಡುಗಳನ್ನು ಮತ್ತು ತಗಡಿನ ಛಾವಣಿಯನ್ನು ಬಳಸಿ ಅವರು, ತಮ್ಮ ಹುಲ್ಲುಮಾಡು ಅಥವಾ ಟಾರ್ಪಾಲಿನ್ ಮನೆಗಳನ್ನು ಅರೆ-ಕಚ್ಚಾ ಮನೆಗಳಾಗಿ ಬದಲಿಸಿದರು.










