ಒಮ್ಮೆ ನಾಯಿ ಬೊಗಳಿದ ಸದ್ದು, ಇನ್ನೊಮ್ಮೆ ಹುಲಿ ಘರ್ಜಿಸಿದ ಸದ್ದು, ಮತ್ತೊಮ್ಮೆ ಮನುಷ್ಯರು ಕೂಗುತ್ತಿರುವ ಸದ್ದು ಗಾಳಿಯಲ್ಲಿ ತುಂಬಿಕೊಳ್ಳುತ್ತದೆ.
ಚಂದ್ರಾಪುರದ ತಡೋಬಾ ಅಂಧಾರಿ ಹುಲಿ ಮೀಸಲು ಪ್ರದೇಶದಿಂದ (ಟಿಎಟಿಆರ್) ನಾವು ಸರಿಸುಮಾರು 100 ಕಿಲೋಮೀಟರ್ ದೂರದಲ್ಲಿರುವುದರಿಂದ ಈ ಸದ್ದುಗಳು ಅಸಾಮಾನ್ಯವೇನಲ್ಲ.
ಇಲ್ಲಿ ವಿಚಿತ್ರವೇನೆಂದರೆ ಆ ಸದ್ದುಗಳು ನಿಜವಾದ ಸದ್ದುಗಳಲ್ಲ. ಅದು ರೆಕಾರ್ಡ್ ಮಾಡಲಾದ ಸದ್ದುಗಳು. ಅದು ಬರುತ್ತಿರುವುದು ಮಂಗಿ ಗ್ರಾಮದಲ್ಲಿ ಆಳವಡಿಸಲಾಗಿರುವ ಲೌಡ್ ಸ್ಪೀಕರುಗಳಿಂದ. ಈ ಸ್ಪೀಕರುಗಳನ್ನು ಬಿದಿರಿನ ಕೋಲಿನ ತುದಿಗೆ ಕಟ್ಟಲಾಗಿದೆ. ಬ್ಯಾಟರಿಯಿಂದ ನಡೆಯುವ ಸ್ಪ್ರೇ ಪಂಪಿಗೆ ಅದರ ವೈರನ್ನು ಕನೆಕ್ಟ್ ಮಾಡಲಾಗಿದೆ.
"ನಾನು ರಾತ್ರಿಯಲ್ಲಿ ಈ ಸದ್ದುಗಳನ್ನು ನುಡಿಸದಿದ್ದರೆ, ಕಾಡು ಹಂದಿಗಳು [ನಿಶಾಚರ ಜೀವಿಗಳು] ಬೆಳೆಗಳನ್ನು ತಿನ್ನುತ್ತವೆ" ಎಂದು 48 ವರ್ಷದ ರೈತ ಸುರೇಶ್ ರೆಂಘೆ ಹೇಳುತ್ತಾರೆ. "ಅವು ವಿಶೇಷವಾಗಿ ತೊಗರಿ ಮತ್ತು ಕಡಲೆ [ಕಪ್ಪು ಕಡಲೆ] ಯನ್ನು ಹೆಚ್ಚು ತಿನ್ನುತ್ತವೆ" ಇದು ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ.
ಸೋಲಾರ್ ವಿದ್ಯುತ್ ಇರುವ ತಂತಿ ಬೇಲಿಯು ಪ್ರಾಣಿಗಳನ್ನು ದೂರವಿಡುವಲ್ಲಿ ಸೋತ ಕಾರಣ ಅವರು ಸಾಧನದ ಎರಡು ಪಿನ್ನುಗಳನ್ನು ಬ್ಯಾಟರಿ ಚಾಲಿತ ಸ್ಪ್ರೇಯಿಂಗ್ ಪಂಪಿನ ಸಾಕೆಟ್ಟಿಗೆ ಸಿಕ್ಕಿಸಿದರು. ಅದು ತಕ್ಷಣ ಸುತ್ತಲಿನ ವಾತಾವರಣದಲ್ಲಿ ದೊಡ್ಡ ಪ್ರಾಣಿ ಮತ್ತು ಮಾನವ ಶಬ್ದಗಳನ್ನು ವಾತಾವರಣದಲ್ಲಿ ಹರಡುತ್ತದೆ.















