ಆ ಮೇಜು ಹಳ್ಳಿಯ ಸರಪಂಚರಿಗೆ ಸೇರಿದ್ದಾಗಿತ್ತು. 2011 ರಲ್ಲಿ 44 ರ ಪ್ರಾಯದ ಶಾಲೂಬಾಯಿ ಐದು ವರ್ಷಗಳ ಅವಧಿಗೆ ಆಯ್ಕೆಯಾಗಿ ಬಂದಾಗ ವಾಘೋಲಿಯ ಕೆಲ ಯುವಕರು ಛತ್ರಪತಿ ಶಿವಾಜಿಯ ದೊಡ್ಡ ಪ್ರತಿಮೆಯೊಂದನ್ನು ಪ್ರಯಾಸಪಟ್ಟು ಪಂಚಾಯತ್ ಆಫೀಸಿನವರೆಗೆ ಹೊತ್ತುಕೊಂಡು ಬಂದಿದ್ದರು. ಪ್ರತಿಮೆಯನ್ನು ಆ ಮೇಜಿನ ಮೇಲೆಯೇ ಇಡಬಹುದು ಎಂದು ಅವರುಗಳು ನಿರ್ಧರಿಸಿಯಾಗಿತ್ತು.
ಹೀಗೆ ಈ ಪ್ರತಿಮೆಯಿಂದಾಗಿ ಒಸ್ಮಾನಾಬಾದ್ ಜಿಲ್ಲೆಯ ಹಳ್ಳಿಯೊಂದರ ಪಂಚಾಯತ್ ಅಧ್ಯಕ್ಷಳಾಗಿ ಆಯ್ಕೆಯಾಗಿ ಬಂದ ಈ ದಲಿತ ಮಹಿಳೆಯು ತನ್ನ ಐದು ವರ್ಷಗಳ ಅವಧಿಯುದ್ದಕ್ಕೂ ಮೇಜನ್ನು ಬಳಸುವ ಭಾಗ್ಯವಿಲ್ಲದೆ ಕುರ್ಚಿಯಲ್ಲಿ ಕುಳಿತುಕೊಂಡೇ ಕಳೆದಿದ್ದರು. ಶಾಲೂಬಾಯಿಯ ವಿಚಾರದಲ್ಲಿ ಅಧಿಕಾರದ ಚಿಹ್ನೆಯೆಂಬಂತೆ ಇಲ್ಲಿಯ ಮೇಲ್ಜಾತಿಯವರು ಒಪ್ಪಿಕೊಂಡ ಒಂದೇ ಒಂದು ಅಂಶವೆಂದರೆ ಕಾಗದಪತ್ರಗಳಲ್ಲಿ ಈಕೆ ಅಧಿಕೃತವಾಗಿ ಹಾಕುತ್ತಿದ್ದ ಸಹಿ. ಇನ್ನು ಮೇಜಿಲ್ಲದ ಪರಿಣಾಮ ಸಹಿಯನ್ನೂ ಕೂಡ ಸಾಮಾನ್ಯ ಜನರು ಕುಳಿತುಕೊಳ್ಳುವ ಜಾಗದಲ್ಲೇ ಕುಳಿತು ಇವರು ಹಾಕಬೇಕಿತ್ತು. ಇದಕ್ಕಾಗಿ ಕೋಣೆಯ ಇನ್ನೊಂದು ಭಾಗದಲ್ಲಿ ಕುಳಿತುಕೊಂಡು ಕಚೇರಿಯ ರಿಜಿಸ್ಟರ್ ಗಳನ್ನು ನೋಡಿಕೊಳ್ಳುತ್ತಿದ್ದ ಗುಮಾಸ್ತನೊಬ್ಬನ ಮೇಜನ್ನೂ ಇವರು ಬಳಸಿಕೊಂಡ ದಿನಗಳಿವೆ.
ಮುಂದೆ ಶಾಲೂಬಾಯಿಯ 'ಡೆಪ್ಯೂಟಿ' ಆಗಲಿದ್ದ ಸತೀಶ್ ಖಡ್ಕೆಯವರು ಸರಪಂಚ್ ಹುದ್ದೆಗಾಗಿ ಚುನಾವಣೆಗೆ ನಿಲ್ಲಬೇಕೆಂದು ಅಂದು ಶಾಲೂಬಾಯಿಯವರಲ್ಲಿ ಕೇಳಿಕೊಂಡಾಗ ಆಕೆಯ ಪತಿ ಮತ್ತು ಮಗಂದಿರಿಂದಲೇ ಅಸಮಾಧಾನವು ವ್ಯಕ್ತವಾಗಿತ್ತು. ಅಭಿವೃದ್ಧಿ ಕೆಲಸಗಳ ಗುತ್ತಿಗೆಗಳ ದಾಖಲೆಗಳ ಮೇಲೆ ಮತ್ತು ಇತರ ಕಾಗದಪತ್ರಗಳ ಮೇಲೆ ಸಹಿಯನ್ನು ಹಾಕಲು ಈಕೆ ಒಂದು ಸಾಂಕೇತಿಕ ರಬ್ಬರ್ ಸ್ಟಾಂಪ್ ಆಗಿಯಷ್ಟೇ ಇರಬಲ್ಲಳೇ ಹೊರತು ಪಂಚಾಯತ್ ಅನ್ನು ಸಂಭಾಳಿಸುವುದು ಇವಳಿಂದಾಗುವ ಕೆಲಸವಲ್ಲ ಎಂಬುದು ಅವರಿಗೆ ಅದಾಗಲೇ ತಿಳಿದಿತ್ತು. ಸೂಕ್ಷ್ಮವಾಗಿ ಅವಲೋಕಿಸಿದರೆ ಖಡ್ಕೆಯವರು ಮಂಜೂರಾತಿಗಾಗಿ ಕಾಗದಪತ್ರಗಳನ್ನು ಮೇಲಕ್ಕೆ ಶಾಲೂಬಾಯಿಯವರತ್ತ ಕಳಿಸುವುದರ ಹೊರತಾಗಿ ಉಳಿದ ಎಲ್ಲಾ ಚಟುವಟಿಕೆಗಳು ಅವರ ಹಿಡಿತದಲ್ಲೇ ಇರುವುದು ಸತ್ಯವಾಗಿತ್ತು. ಅನಕ್ಷರಸ್ಥೆಯಾಗಿರುವ ಶಾಲೂಬಾಯಿ ಸಹಿಯಾಗಿ ತನ್ನ ಹೆಸರನ್ನಷ್ಟೇ ಬರೆಯಬಲ್ಲಳು ಎಂಬ ಸಂಗತಿಯು ಇಲ್ಲಿ ಹೆಚ್ಚಿನ ಉಪಯೋಗಕ್ಕೇನೂ ಬರುವಂಥದ್ದಾಗಿರಲಿಲ್ಲ.








