1968ರ ಡಿಸೆಂಬರ್ ಕೊನೆಯ ವಾರದಲ್ಲಿ, ವೆನ್ಮಣಿ ಗ್ರಾಮದ ಕೀಳ್ವೆನ್ಮಣಿಯೆನ್ನುವ ದಲಿತ ಕೇರಿಯಲ್ಲಿ ಭೂಮಾಲಿಕರ ದಬ್ಬಾಳಿಕೆಯ ವಿರುದ್ಧ ಸಂಘಟಿತ ಕಾರ್ಮಿಕರ ದೀರ್ಘಕಾಲದ ಹೋರಾಟವೊಂದು ಆಸ್ಫೋಟಿಸಿತು. ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಈ ಗ್ರಾಮದ ದಲಿತ ಭೂಹೀನ ಕಾರ್ಮಿಕರು ಹೆಚ್ಚಿನ ವೇತನ, ಕೃಷಿ ಭೂಮಿಯ ಮಾಲಕತ್ವಕ್ಕಾಗಿ ಮತ್ತು ಊಳಿಗಮಾನ್ಯ ದಬ್ಬಾಳಿಕೆಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಮುಷ್ಕರ ನಡೆಸಿದರು. ಇದಕ್ಕೆ ಭೂಮಾಲಿಕರ ಪ್ರತಿಕ್ರಿಯೆ ಹೇಗಿತ್ತು? ಅವರು ದಲಿತ ಕೇರಿಯ 44 ದಲಿತ ಕಾರ್ಮಿಕರನ್ನು ಜೀವಂತ ದಹಿಸಿದರು. ಶ್ರೀಮಂತ ಮತ್ತು ಬಲಿಷ್ಟ ಭೂಮಾಲೀಕರು, ಪರಿಶಿಷ್ಟ ಜಾತಿಗಳಲ್ಲಿನ ಹೊಸ ರಾಜಕೀಯ ಜಾಗೃತಿಯನ್ನು ಎದುರಿಸಲು, ನೆರೆಹೊರೆಯ ಗ್ರಾಮಗಳಿಂದ ಕಾರ್ಮಿಕರನ್ನು ನೇಮಿಸಿಕೊಳ್ಳಲು ನಿರ್ಧರಿಸಿದರು ಜೊತೆಗೆ ಭಾರಿ ಪ್ರತೀಕಾರವನ್ನೂ ಯೋಜಿಸಿದರು.
ಡಿಸೆಂಬರ್ 25ರ ರಾತ್ರಿ, ಭೂಮಾಲೀಕರು ಊರನ್ನು ಸುತ್ತವರೆದು ಹೊರಹೋಗುವ ಎಲ್ಲ ದಾರಿಗಳನ್ನು ಮುಚ್ಚಿ ಊರಿನ ಮೇಲೆ ದಾಳಿಯೆಸಗಿದರು. ಗುಡಿಸಲುಗಳ ಒಳಗೆ ಓಡಿ ಹೋದ ಕಾರ್ಮಿಕರನ್ನು ಅವರ ಗುಡಿಸಲಿನಿಂದ ಹೊರಬರದಂತೆ ಚಿಲಕ ಹಾಕಿ ಭೂಮಾಲಿಕರ ಕಡೆಯ ದಾಳಿಕೋರರು ಗುಡಿಸಲುಗಳಿಗೆ ಬೆಂಕಿಯಿಟ್ಟರು. ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಸತ್ತವರಲ್ಲಿ ಅರ್ಧದಷ್ಟು ಸಂಖ್ಯೆಯಲ್ಲಿ ಮಕ್ಕಳೇ ಇದ್ದರು ಅವರಲ್ಲಿ 11 ಹುಡುಗಿಯರು ಮತ್ತು 11 ಹುಡುಗರು - 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಇಬ್ಬರು 70 ವರ್ಷ ಮೇಲ್ಪಟ್ಟವರು. ಒಟ್ಟಾರೆಯಾಗಿ, 29 ಮಹಿಳೆಯರು ಮತ್ತು 15 ಪುರುಷರು ಅಂದು ಮರಣ ಹೊಂದಿದ್ದರು. ಇವರೆಲ್ಲರೂ ದಲಿತರು ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಬೆಂಬಲಿಗರಾಗಿದ್ದರು.
1975ರಲ್ಲಿ ಮದ್ರಾಸ್ ಹೈಕೋರ್ಟ್ ಕೊಲೆ ಪ್ರಕರಣದ ಎಲ್ಲ 25 ಆರೋಪಿಗಳನ್ನು ಖುಲಾಸೆಗೊಳಿಸಿತು. ಆದರೆ ಈ ನಂಬಲಾಗದ ದೌರ್ಜನ್ಯದ ಕುರಿತು ದಾಖಲಿಸಿದ ಮಹಾನ್ ಚರಿತ್ರಕಾರರಲ್ಲಿ ಒಬ್ಬರಾದ ಮೈಥಿಲಿ ಶಿವರಾಮನ್, ಹತ್ಯಾಕಾಂಡವನ್ನು ಬೆಳಕಿಗೆ ತಂದಿದ್ದಲ್ಲದೆ, ವರ್ಗ ಮತ್ತು ಜಾತಿ ದಬ್ಬಾಳಿಕೆಗೆ ಆಧಾರವಾಗಿರುವ ಸಮಸ್ಯೆಗಳ ಕುರಿತಾಗಿಯೂ ಸಹ ಪ್ರಬಲ ಮತ್ತು ವ್ಯಾಪಕ ವಿಶ್ಲೇಷಣೆಯನ್ನು ಬರೆಯುತ್ತಲೇ ಇದ್ದರು. ವಾರದ ಹಿಂದೆ ತನ್ನ 81ನೇ ವಯಸ್ಸಿನಲ್ಲಿ ಕೋವಿಡ್ -19ಕ್ಕೆ ಬಲಿಯಾದ ಮೈಥಿಲಿ ಶಿವರಾಮನ್ ಅವರ ನೆನಪಿನಲ್ಲಿ ನಾವು ಈ ಕವಿತೆಯನ್ನು ಪ್ರಕಟಿಸುತ್ತಿದ್ದೇವೆ.



