ಅಂದು ಸೈಯದ್ ಘನಿ ಖಾನ್ ಬಹುತೇಕ ಕುಸಿದೇಹೋಗಿದ್ದರು. ಗದ್ದೆಯ ಕೆಲಸದಲ್ಲಿ ನಿರತರಾಗಿದ್ದ ಅವರಿಗೆ ಅದೇಕೋ ಸಂಕಟವಾಗುತ್ತಿರುವ ಅನುಭವ. ಬೆಳೆಗಳಿಗೆ ಸಿಂಪಡಿಸುತ್ತಿದ್ದ ಕೀಟನಾಶಕದ ಹೊಗೆಯು ಅಂದು ತನ್ನನ್ನು ಪ್ರಜ್ಞಾಹೀನನನ್ನಾಗಿ ಮಾಡುತ್ತಿರುವಂತೆ ಖಾನ್ ಗೆ ಅನುಭವವಾಗಿತ್ತು. ''ಆಗಲೇ ನಾನು ಯೋಚಿಸಿದ್ದೆ: ಇದೇನು ಮಾಡುತ್ತಿದ್ದೇನೆ ನಾನು? ನನಗೇ ಇಂಥಾ ಅನುಭವವಾಗುತ್ತಿದ್ದರೆ ಬೆಳೆಗಳಿಗೆ ಕೀಟನಾಶಕಗಳನ್ನು ಬೆರೆಸುತ್ತಿರುವ ನಾನು ಸ್ವತಃ ಇದನ್ನು ತಿನ್ನಲಿರುವ ಜನರಿಗೆ ವಿಷವನ್ನುಣಿಸುತ್ತಿದ್ದೇನೆ ಎಂಬುದು ನನಗೆ ಖಚಿತವಾಗಿತ್ತು. ಇದಕ್ಕೊಂದು ಅಂತ್ಯ ಹಾಡಬೇಕೆಂದು ನಾನು ನಿರ್ಧರಿಸಿದ್ದೆ'', ಎನ್ನುತ್ತಿದ್ದಾರೆ ಖಾನ್.
ಹೀಗೆ ಇಂಥದ್ದೊಂದು ಮಹತ್ವದ ತಿರುವನ್ನು ತಂದ ಘಟನೆಗೆ ಕಾರಣವಾದ ಎರಡು ದಶಕಗಳಿಂದ, ಅಂದರೆ 1998 ರಿಂದ, ಬೆಳೆಗಳಿಗೆ ಯಾವುದೇ ಬಗೆಯ ಕೀಟನಾಶಕ ಅಥವಾ ರಾಸಾಯನಿಕ ಗೊಬ್ಬರಗಳನ್ನು ಬಳಸುವುದನ್ನು ಖಾನ್ ಸಂಪೂರ್ಣವಾಗಿ ನಿಲ್ಲಿಸಿದ್ದರು. ದೇಸಿ ಭತ್ತವು ಇವರ ಕೈಯಿಂದ ಜನ್ಮತಾಳಿದ್ದು ಹೀಗೆ. ''ನಮ್ಮಪ್ಪನೋ, ಕುಟುಂಬದ ಇತರ ಹಿರಿಯರೋ ಗದ್ದೆಗೆ ಹೋದರೆ ನಾನು ಅವರ ಜೊತೆಜೊತೆಗೇ ಹೋಗುತ್ತಿದ್ದೆ. ಅವರು ಬೆಳೆಯುತ್ತಿದ್ದ ತರಹೇವಾರಿ ಬೆಳೆಗಳಿಗೆ ಹೋಲಿಸಿದರೆ ದೇಸಿ ಭತ್ತದ ಪ್ರಮಾಣ ತೀರಾ ಕಮ್ಮಿಯಿತ್ತು'', ಎಂದು ಖಾನ್ ತನ್ನ ಕಳೆದುಹೋದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ.
42 ರ ಪ್ರಾಯದ ಖಾನ್ ಹೇಳುವ ಪ್ರಕಾರ 79961 ಹೆಕ್ಟೇರ್ ವಿಸ್ತೀರ್ಣ ಪ್ರದೇಶದಷ್ಟಿನ ಭತ್ತ ಬೆಳೆಯುವ ಮಂಡ್ಯದಲ್ಲಿ ಸಾವಯವ ವಿಧಾನಗಳನ್ನು ಬಳಸಿ ದೇಸಿ ಬೆಳೆಗಳನ್ನು ಬೆಳೆಯುವವರ ಸಂಖ್ಯೆಯು 10 ಕ್ಕೂ ಕಮ್ಮಿ. ಖಾನ್ ಕರ್ನಾಟಕದ ಮಂಡ್ಯ ಜಿಲ್ಲೆಯ ಕಿರುಗಾವಲು ಪ್ರದೇಶದ ಮೂಲದವರು. ''ತಮ್ಮ ನಿಧಾನಗತಿಯ ಬೆಳವಣಿಗೆಯಿಂದ ಮತ್ತು ದೀರ್ಘ ಕಾಯುವಿಕೆಯ ನಂತರವೂ [ಕೆಲಬಾರಿಯ] ಕಡಿಮೆ ಇಳುವರಿಯಿಂದಾಗಿ ಸ್ಥಳೀಯ ಭತ್ತತಳಿಯ ಪ್ರಭೇದಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡವು. ಬಹಳಷ್ಟು ಬಾರಿ ಇಲ್ಲಿ ಬೆಳೆಗಿಂತ ಕಳೆಯೇ ಹೆಚ್ಚು ಕಾಣಸಿಗುತ್ತಿತ್ತು'', ಎನ್ನುತ್ತಾರೆ ಖಾನ್.







