ಕೆಲವೇ ವರ್ಷಗಳ ಹಿಂದಿನವರೆಗೂ ಕಾಳಿ ಕಲಾಕ್ಷೇತ್ರದ ಹೆಸರನ್ನೂ ಕೇಳಿರಲಿಲ್ಲ. ಕೋವಲಂ ನಲ್ಲಿ ಒಂದು ಸುನಾಮಿ ಪುನರ್ವಸತಿ ಕೇಂದ್ರದಲ್ಲಿ ಕಾಳಿ ನರ್ತಿಸಿದ್ದನ್ನು ನೋಡಿದ ಸಾರಾ ಚಂದ, ನೃತ್ಯ ಅವನ ಆತ್ಮವಾಗಿರುವುದನ್ನು ಗುರುತಿಸಿ ಅವನು ಕಲಾಕ್ಷೇತ್ರದಲ್ಲಿ ಶಾಸ್ತ್ರೀಯವಾಗಿ ನೃತ್ಯ ಕಲಿಯಬೇಕೆಂದು ಹೇಳಿದ್ದಲ್ಲದೇ ತಾವೇ ಅವನ ನೃತ್ಯಕ್ಕೆ ಪ್ರಾಯೋಜಕರೂ ಆಗುತ್ತಾರೆ. ಮನೆಯವರು, ದೂರದ ನೆಂಟರು ಎಲ್ಲರೂ ಭರತನಾಟ್ಯದಂತಹ ಹೆಣ್ಣುಕಲೆಯನ್ನು ಕಲಿಯುವುದರ ಬಗ್ಗೆ ಅಪಹಾಸ್ಯ ಮಾಡಿದರೂ ಕಾಳಿ ಹಿಂದೆ ಸರಿಯುವುದಿಲ್ಲ. ಸಂದರ್ಶನದಲ್ಲಿ ಎಲ್ಲಾ ಪರೀಕ್ಷೆಗಳಲ್ಲೂ ತೇರ್ಗಡೆಯಾಗುತ್ತಾನೆ. ಅಲ್ಲಿ ಪ್ರವೇಶವನ್ನೂ ಸಂಪಾದಿಸಿಕೊಳ್ಳುತ್ತಾನೆ. ಅವನು ಒಂದು ತಡೆಯನ್ನೇನೋ ದಾಟುತ್ತಾನೆ, ಆದರೆ ಅಂತಹ ಅನೇಕ ತಡೆಗಳು ಅವನ ಹಾದಿಯಲ್ಲಿ ಕಾಯುತ್ತಿರುತ್ತವೆ.
ಕಾಳಿ ತಮಿಳು ಮೀಡಿಯಂನಲ್ಲಿ ಓದಿದ ಹುಡುಗ. ಭರತನಾಟ್ಯ, ಶಾಸ್ತ್ರೀಯ ಸಂಗೀತದ ಪರಿಚಯ ಇಲ್ಲದ ಇವನನ್ನು ಮೊದಮೊದಲಿಗೆ ಕಲಾಕ್ಷೇತ್ರದ ಶಾಸ್ತ್ರೀಯ ಪರಿಸರ ಬೆದರಿಸಿಬಿಟ್ಟಿತ್ತು. ಅಲ್ಲಿನ ಊಟ ಶುದ್ಧ ಸಸ್ಯಾಹಾರಿ, ಅವನೋ ಖುಷಿಯಾಗಿ ಮಾಂಸಾಹಾರ ಸವಿಯುತ್ತಿದ್ದ ಹುಡುಗ. ’ನಾನಾಗ ಡುಮ್ಮನಾಗಿದ್ದೆ!’ ಅವನ ಹಿಂಬಾಗವನ್ನು ಹೊರಚಾಚಿ, ಕಾಲುಗಳನ್ನು ಅಗಲಿಸಿ, ಕೈಗಳನ್ನು ತೂಗಾಡಿಸಿ ತಾನು ಆಗ ಹೇಗೆ ಭರತನಾಟ್ಯ ಮಾಡುತ್ತಿದ್ದೆ ಎನ್ನುವುದನ್ನು ತೋರಿಸಿ ಕಾಳಿ ನಕ್ಕಿದ್ದ. ಅಲ್ಲಿ ಕಲಿಯುತ್ತಿದ್ದ ಅನೇಕ ವಿದೇಶಿ ವಿದ್ಯಾರ್ಥಿಗಳಿಗಿಂತ ಒಂದಿಷ್ಟು ಮೇಲು ಎನ್ನುವುದು ಬಿಟ್ಟರೆ ಇವನೂ ಸಹ ಕಲಾಕ್ಷೇತ್ರದ ಸಂಸ್ಕೃತಿಗೆ ಅವರಷ್ಟೇ ಅಪರಿಚಿತನಾಗಿದ್ದ. ಎಲ್ಲಕ್ಕಿಂತಲೂ ಹೆಚ್ಚಾಗಿ ಎಲ್ಲರಂತೆ ಇಂಗ್ಲಿಷಿನಲ್ಲಿ ಸಂವಹಿಸಲಾಗದ ಕೀಳರಿಮೆ ಅವನನ್ನು ಬೇಟೆಯಾಡುತ್ತಿತ್ತು.
ಹಾಗಾಗಿ ಅವನು ಅಭಿನಯದ ಮೂಲಕ ಸಂಭಾಷಿಸಲಾರಂಭಿಸುತ್ತಾನೆ. ಪದಗಳ ಸ್ಥಾನದಲ್ಲಿ ಆಂಗಿಕವನ್ನು ಬಳಸುತ್ತಾನೆ. ಸ್ವಲ್ಪ ಸಮಯದಲ್ಲೇ ತನ್ನ ನಾಚಿಕೆಯನ್ನು ಮೀರಿ ವಿದೇಶಿಯರೊಂದಿಗೆ ದೋಸ್ತಿ ಮಾಡಿಕೊಳ್ಳುತ್ತಾನೆ. ಮೊದಲ ವರ್ಷದ ವಿದ್ಯಾರ್ಥಿಗಳ ದಿನದ ಸಮಾರಂಭದಲ್ಲಿ ರಷ್ಯಾ ಮತ್ತು ದಕ್ಷಿಣ ಆಫ್ರಿಕಾದ ಹುಡುಗಿಯರಿಗೆ ಒಯಿಲಾಟ್ಟಮ್ ಹೇಳಿಕೊಟ್ಟು ಅದ್ಭುತವಾದ ಪ್ರದರ್ಶನವನ್ನೂ ಕೊಡುತ್ತಾನೆ. ಕಲಾಕ್ಷೇತ್ರದ ಆಗಿನ ನಿರ್ದೇಶಕಿಯಾಗಿದ್ದ ಲೀಲಾ ಸಾಮ್ಸನ್ ಅವನ ಈ ಪ್ರಯತ್ನವನ್ನು ತುಂಬು ಹೃದಯದಿಂದ ಪ್ರಶಂಸಿಸುತ್ತಾರೆ. ಇವೆಲ್ಲಕ್ಕೂ ಕಳಶವಿಟ್ಟಂತೆ ಅವನು ತನ್ನ ತರಗತಿಗೇ ಮೊದಲಿಗನಾಗಿ ಉತ್ತೀರ್ಣನಾಗುತ್ತಾನೆ. ಅವನ ಆತ್ಮವಿಶ್ವಾಸ ಬೆಳೆಯುತ್ತದೆ ಹಾಗೆಯೇ ಅವನ ತಿಳುವಳಿಕೆಯೂ ವಿಕಸಿತವಾಗುತ್ತದೆ.
ಈಗ ಕಾಳಿ ಒಂದು ಕ್ಷಣದಲ್ಲಿ ರಾಗಗಳನ್ನು ಗುರ್ತಿಸಬಲ್ಲ. ರುಕ್ಮಿಣಿ ಅರಂಗಮ್ ನಲ್ಲಿ ನಡೆಯುವ ಪ್ರದರ್ಶನಗಳಲ್ಲಿ ಆತ ರಾಗಗಳನ್ನು ಗುರ್ತಿಸಿ, ಸರಿಯೇ ಎಂದು ಅವನ ದೊಡ್ಡ ಗೆಳೆಯರ ಗುಂಪಿನಲ್ಲಿ ಯಾರನ್ನಾದರೂ ಕೇಳುತ್ತಾನೆ. ಸಾಧಾರಣವಾಗಿ ಅವನು ಸರಿಯಾಗಿಯೇ ಗುರುತಿಸಿರುತ್ತಾನೆ. ಮೊದಲ ದಿನಗಳ ಅವನ ಹುಚ್ಚುಕುಣಿತದ ಭರತನಾಟ್ಯ ಇಂದು ಒಂದು ಪೂರ್ಣತೆಯತ್ತ ಬಂದಿದೆ. ಈಗ ಅವನ ಅಡುವಾ(ಹೆಜ್ಜೆ)ಗಳು ನಿಖರವಾಗಿರುತ್ತವೆ, ಅವನ ಭಾವ (ಅಭಿವ್ಯಕ್ತಿ) ಪರಿಪೂರ್ಣವಾಗಿರುತ್ತದೆ.