ಈ ಪ್ಯಾನೆಲ್ 'ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು' ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನದ ಭಾಗವಾಗಿದ್ದು, ಇದರ ಅಡಿಯಲ್ಲಿ ಗ್ರಾಮೀಣ ಮಹಿಳೆಯರು ಮಾಡುವ ವಿವಿಧ ಕಾರ್ಯಗಳನ್ನು ಚಿತ್ರರೂಪದಲ್ಲಿ ದಾಖಲಿಸಲಾಗಿದೆ. ಈ ಎಲ್ಲಾ ಚಿತ್ರಗಳನ್ನು ಪಿ.ಸಾಯಿನಾಥ್ ಅವರು 1993ರಿಂದ 2002ರ ನಡುವೆ ತಮ್ಮ 10 ರಾಜ್ಯಗಳಲ್ಲಿನ ಓಡಾಟದಲ್ಲಿ ತೆಗೆದಿದ್ದಾರೆ. ಇಲ್ಲಿ, ಪರಿ ಈ ಛಾಯಾಚಿತ್ರ ಪ್ರದರ್ಶನದ ಡಿಜಿಟಲ್ ಪ್ರಾತಿನಿಧ್ಯವನ್ನು ಸೃಜನಾತ್ಮಕವಾಗಿ ರಚಿಸಿದೆ, ಇದನ್ನು ಹಲವು ವರ್ಷಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಪ್ರದರ್ಶಿಸಲಾಗಿದೆ.
ಎಂದಿಗೂ ತಮ್ಮದಾಗದ ಹೊಲದಲ್ಲಿ ದುಡಿದು ಸವೆಯುವವರು
ಹೊಲದ ಮಾಲಿಕ ಪೋಟೊ ತೆಗೆಸಿಕೊಳ್ಳುವ ಕುರಿತು ಹೆಮ್ಮೆ ಹೊಂದಿದ್ದ. ಅವನು ಹೊಲದ ಬದುವಿನಲ್ಲಿ ನೆಟ್ಟಗೆ ನಿಂತಿದ್ದರೆ ಉಳಿದ ಒಂಬತ್ತು ಕೆಲಸ ಮಾಡುತ್ತಿದ್ದ ಕೂಲಿ ಹೆಂಗಸರು ಸೊಂಟ ಮುರಿಯುವಂತೆ ಬಾಗಿಕೊಂಡು ನಾಟಿ ಕೆಲಸ ಮಾಡುತ್ತಿದ್ದರು. ಅವರು ಆ ಹೆಂಗಸರಿಗೆ ದಿನಕ್ಕೆ 40 ರೂಪಾಯಿ ಕೂಲಿ ಕೊಡುತ್ತಿರುವುದಾಗಿ ಹೇಳಿದ. ಆದರೆ ಆ ಹೆಂಗಸರು ನನ್ನ ಬಳಿ ಹೇಳಿದಂತೆ, ಅವನು ಅವರಿಗೆ ಕೊಡುತ್ತಿರುವುದು ದಿನಕ್ಕೆ 25 ರೂಪಾಯಿಗಳು ಮಾತ್ರ. ಇವರೆಲ್ಲರೂ ಒಡಿಶಾ ರಾಜ್ಯದ ರಾಯಗಢದ ಭೂರಹಿತ ಕಾರ್ಮಿಕರು.
ಭಾರತದ ಮಟ್ಟಿಗೆ, ಭೂಮಿಯ ಒಡೆತನವಿರುವ ಕುಟುಂಬಗಳಲ್ಲೂ ಹೆಣ್ಣಿಗೆ ಭೂಮಿಯ ಹಕ್ಕು ಸಿಗುವುದಿಲ್ಲ. ಅದು ತವರು ಮನೆಯಾದರೂ ಅಷ್ಟೇ, ಗಂಡನ ಮನೆಯಾದರೂ ಅಷ್ಟೇ. ಪರಿತ್ಯಕ್ತ, ವಿಚ್ಛೇದಿತ ಅಥವಾ ವಿಧವೆಯರಾದ ಹೆಣ್ಣು ಮಕ್ಕಳು ತಮ್ಮ ಉಳಿದ ಜೀವನವನ್ನು ಊರಿನವರ ಅಥವಾ ಸಂಬಂಧಿಕರ ಹೊಲಗಳಲ್ಲಿ ಕೂಲಿ ಮಾಡುತ್ತಲೇ ಕಳೆಯಬೇಕಿರುತ್ತದೆ.








