" ಈ ತಗಡಿನ ಹಲಗೆ ಬಹಳ ಉಪಯುಕ್ತ. ಆದರೆ, ನಮ್ಮ ಪಾಡಾ ಮಾತ್ರ ಇನ್ನೂ ಕತ್ತಲಲ್ಲೇ ಮುಳುಗಿದೆ. ಹಾಗಾಗಿ, ನಾನು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆ. ಈಗಲಾದರೂ ನಮಗೆ ಬೆಳಕು ನೀಡಿ ಎಂದು ಫೆಬ್ರವರಿ 20-21ರಂದು ನಾಸಿಕ್ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಂಗಲ್ ಘಾಡ್ಗೆ ಹೇಳಿದರು. ತನ್ನ ತಲೆ ಮೇಲೆ ಇಟ್ಟುಕೊಂಡಿದ್ದ ಸೌರ ಫಲಕ ಜಾರಿ ಬೀಳದಂತೆ ಜಾಗ್ರತೆ ವಹಿಸುತ್ತಲೇ ಆಕೆ ಮಾತನಾಡಿದ ಆಕೆ, “ಸೂರ್ಯನ ಕಿರಣ ಈ ಹಲಗೆ ಮೇಲೆ ಬಿದ್ದಾಗ ಅದು ಶಾಖವನ್ನು ಹೀರಿಕೊಳ್ಳುತ್ತದೆ. ಇದನ್ನು ಪ್ರತಿದಿನ ಸಾಯಂಕಾಲ ಮೊಬೈಲ್ ಅಥವಾ ಟಾರ್ಚ್ ರಿಚಾರ್ಜ್ ಮಾಡಲು ಬಳಸುತ್ತೇವೆ. ಇದರಿಂದ ಒಂದಿಷ್ಟು ಅನುಕೂಲ ಆಗಿದೆ” ಎಂದರು.
ಮಂಗಲ್ (ಮೇಲೆ ಕವರ್ ಫೋಟೊದಲ್ಲಿ ಕಾಣಿಸುವ ಮಹಿಳೆ) ನಾಸಿಕ್ ಜಿಲ್ಲೆಯ ದಿಂಡೋರಿ ತಾಲೂಕಿನ ಶಿಂದ್ವಾಡಾ ಗ್ರಾಮದಿಂದ ಅರ್ಧ ಕಿ.ಮಿ. ದೂರದಲ್ಲಿರುವ ಕುಗ್ರಾಮವೊಂದರ ಮಹಿಳೆಯಾಗಿದ್ದು, ಮನೆಗಳನ್ನು ಹೊಂದಿರುವ ಇಲ್ಲಿ ಆಕೆಯ ಹಾಗೆ ಇತರ ಹಲವರು ಇಂತಹ ಸೌರ ಫಲಕಗಳನ್ನು ಹೊಂದಿದ್ದಾರೆ. ಇಲ್ಲಿನ ಎಲ್ಲ ನಿವಾಸಿಗಳು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಾದೇವ್ ಕೋಳಿ ಸಮುದಾಯಕ್ಕೆ ಸೇರಿದ್ದು, ಜೀವನೋಪಾಯಕ್ಕಾಗಿ ಅರಣ್ಯ ಭೂಮಿಯಲ್ಲಿ ಭತ್ತ, ರಾಗಿ ಮತ್ತು ತೊಗರಿ ಬೆಳೆಯುತ್ತಾರೆ. ೨೦೧೮ರ ಅನಾವೃಷ್ಟಿಯಿಂದ ಹೆಚ್ಚಿನ ರೈತರ ಬೆಳೆ ನಾಶವಾಗಿದೆ. ಕೆಲವರಿಗೆ ಒಂದಿಷ್ಟು ಬಳೆ ಕೈಗೆ ಬಂದಿದೆಯಾದರೂ, ಅದರ ಪ್ರಮಾಣ ನಗಣ್ಯ.
ಮಂಗಲ್ ತನ್ನ ಬಳಿ ಇರುವ ಸೌರ ಫಲಕವನ್ನು ಒಂದು ವರ್ಷ ಹಿಂದೆ ಖರೀದಿಸಿದ್ದಳು. “ನಮ್ಮ ಪಾಡಾದವರ ಪೈಕಿ ಒಬ್ಬರು ಇದನ್ನು ತಂದಿದ್ದರು. ನನಗೂ ಒಂದು ಕೊಡು ಎಂದು ಹೇಳಿದೆ. ಆಬಳಿಕ ಇತರರು ಕೂಡ ಖರೀದಿಸಲು ಮುಂದೆ ಬಂದರು. ಇದರ ಬೆಲೆ ರೂ. 250- ನಮ್ಮ ಒಂದು ದಿನದ ಗಳಿಕೆಗೆ ಸಮ” ಎಂದಾಕೆ ತಿಳಿಸಿದರು.




