ಎಸ್. ರಾಮಸ್ವಾಮಿ ನನಗೆ ಅವರ ಹಿರಿಯ ಸ್ನೇಹಿತನೊಬ್ಬನನ್ನು ಪರಿಚಯಿಸುತ್ತಿದ್ದರು. ಅವರು ತಮ್ಮ ಸ್ನೇಹಿತನ ಕುರಿತು ಬಹಳ ಹೆಮ್ಮೆಯಿಂದ ವಿವರಿಸುತ್ತಿದ್ದರು. ದಿನಪತ್ರಿಕೆಗಳು, ಐಎಎಸ್. ಐಪಿಎಸ್ ಅಧಿಕಾರಿಗಳು ಮತ್ತು ಇನ್ನೂ ಅನೇಕರು ಅವರ ಈ ಹೆಮ್ಮೆಯ ಗೆಳೆಯನನ್ನು ಭೇಟಿಯಾಗಿ ಹೋಗಿದ್ದಾರೆ. ಅವರು ತಾನು ಹೇಳುತ್ತಿರುವ ವಿಷಯದಲ್ಲಿ ಯಾವ ವಿವರವೂ ತಪ್ಪಿ ಹೋಗದಂತೆ ಎಚ್ಚರವಹಿಸುತ್ತಿದ್ದರು. ಅಷ್ಟಕ್ಕೂ ಅವರು ನನಗೆ ಪರಿಚಯಿಸಲು ಹೊರಟಿದ್ದು ಓರ್ವ ಸೆಲೆಬ್ರಿಟಿಯನ್ನು.
ಅವರ ಸ್ನೇಹಿತನೆಂದರೆ 200 ವರ್ಷಗಳಷ್ಟು ಹಳೆಯದಾದ ಮರ: ಮಾಲಿಗಂಪಟ್ಟುವಿನ ದೊಡ್ಡ ಆಯಿರಂಕಾಚಿ
ಆಯಿರಂಕಾಚಿ ಎನ್ನುವುದು ಒಂದು ಪಳಂ ಮರ, ಹಲಸಿನ ಮರ. ಮತ್ತು ಈ ಮರ ಅಗಲ ಮತ್ತು ಎತ್ತರಕ್ಕಿದೆ. ಜೊತೆಗೆ ಫಲವತ್ತಾಗಿಯೂ ಇದೆ. ಮರಕ್ಕೆ ಒಂದು ಸುತ್ತು ಬರಲು 25 ಸೆಕೆಂಡ್ ಬೇಕಾಗುತ್ತದೆ. ಅದರ ಅತ್ಯಂತ ಹಳೆಯ ಕಾಂಡದಲ್ಲಿ ನೂರಕ್ಕೂ ಹೆಚ್ಚು ಹಸಿರು ಹಲಸಿನ ಕಾಯಿಗಳು ನೇತಾಡುತ್ತಿದ್ದವು. ಇಂತಹ ಮರದ ಮುಂದೆ ನಿಲ್ಲುವುದೇ ಒಂದು ಗೌರವ. ಅದರ ಸುತ್ತ ನಡೆಯುವುದು ನಮ್ಮ ಪಾಲಿನ ಸುಯೋಗ. ನನ್ನ ಪ್ರತಿಕ್ರಿಯೆಯನ್ನು ಕೇಳಿ ರಾಮಸ್ವಾಮಿ ನಸುನಕ್ಕರು. ಸಂತೋಷ ಮತ್ತು ಹೆಮ್ಮೆ ಅವರ ಸಮೃದ್ಧ ಮೀಸೆಯನ್ನೊಮ್ಮೆ ತಿರುವಿ ಕಣ್ಣುಗಳಿಗೆ ತಲುಪಿತು. ಅವರು ತಮ್ಮ ಬದುಕಿನ 71 ವರ್ಷಗಳಲ್ಲಿ ನನ್ನಂತಹ ಹಲವು ಅತಿಥಿಗಳನ್ನು ನೋಡಿದ್ದಾರೆ. ಅವರು ಮರದ ಕುರಿತು ಇನ್ನಷ್ಟು ಹೇಳತೊಡಗಿದರು.
“ನಾವು ಕಡಲೂರು ಜಿಲ್ಲೆ, ಪನ್ರುಟ್ಟಿ ಬ್ಲಾಕಿನ ಮಾಲಿಂಗಂಪಟ್ಟು ಎನ್ನುವ ಸಣ್ಣ ಊರಿನಲ್ಲಿದ್ದೇವೆ,” ಎಂದು ಖಾವಿಯ ಪಂಚೆ ಮತ್ತು ಬಡ ಹೆಗಲ ಮೇಲೊಂದು ಶಾಲು ಧರಿಸಿದ್ದ ಅವರು ಮರದ ಮುಂದೆ ನಿಂತು ಹೇಳತೊಡಗಿದರು. “ಈ ಮರವನ್ನು ನೆಟ್ಟವರು ನನ್ನ ಹಿರಿಯರು. ಸುಮಾರು ಐದು ತಲೆಮಾರಿನ ಹಿಂದಿನದು ಈ ಮರ. ನಾವು ಇದನ್ನು ʼಆಯಿರಂಕಾಚಿʼ, ಸಾವಿರ ಹಣ್ಣಿನ ಮರ ಎಂದು ಕರೆಯುತ್ತೇವೆ. ಈ ಮರ ವರ್ಷಕ್ಕೆ 200, 300 ಹಣ್ಣು ಬಿಡುತ್ತದೆ. ಮತ್ತು ಅವು 8 ರಿಂದ 10 ದಿನಗಳಲ್ಲಿ ಹಣ್ಣಾಗುತ್ತವೆ. ತೊಳೆಗಳು ರುಚಿಕರವಾಗಿರುತ್ತವೆ, ಬಣ್ಣವು ಸುಂದರವಾಗಿರುತ್ತದೆ, ಮತ್ತು ಹಣ್ಣಾಗದ ಕಾಯಿಗಳನ್ನು ಬಿರಿಯಾನಿಯಲ್ಲಿ ಬೇಯಿಸಬಹುದು." ಅವರು ಅರ್ಧ ನಿಮಿಷದಲ್ಲಿ ತನ್ನ ಮರದ ಸದ್ಗುಣಗಳನ್ನು ವಿವರಿಸಿದರು. ಅವರ ವಿವರಣೆಯೂ ಈ ಮರದಂತೆ ಹಲವು ವರ್ಷಗಳಿಂದ ಹದಗೊಳ್ಳುತ್ತಲೇ ಬಂದಿದೆ.


















