ಗರಗರನೆ ತಿರುಗಿಸಿದರೆ ಟಕ್ ಟಕ್ ಟಕ್ ಸೌಂಡ್ ಮಾಡುವ, ಈ ಲಾಲಿಪಾಪ್ ಆಕಾರದ ಕಟ್ಕೆಟಿ ಎನ್ನುವ ಸಣ್ಣ ಆಟಿಕೆ ಬೆಂಗಳೂರಿನ ಬೀದಿಗಳಿಗೆ ಚಿರಪರಿಚಿತ. ಈ ಸದ್ದಿಗೆ ಸುತ್ತಲಿನ ಸಣ್ಣ ಮಕ್ಕಳ ಕಿವಿ ತಾನಾಗಿಯೇ ಚುರುಕಾಗಿ ತನಗೊಂದು ಆಟಿಕೆ ಬೇಕಂದು ಕೇಳತೊಡಗುತ್ತವೆ. ಈ ಹೊಳೆಯುವ ಆಟಿಕೆಯನ್ನು ನಗರಕ್ಕೆ 2,000 ಕಿಲೋಮೀಟರಿಗಿಂತಲೂ ಹೆಚ್ಚು ದೂರದಲ್ಲಿರುವ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಿಂದ ತರಲಾಗುತ್ತದೆ. "ನಮ್ಮ ಕೈಯಿಂದ ತಯಾರಾದ ಆಟಿಕೆಗಳು ಅಷ್ಟು ದೂರ ಪ್ರಯಾಣಿಸುತ್ತವೆನ್ನುವುದೇ ನಮಗೆ ಹೆಮ್ಮೆಯ ವಿಷಯ.." ಎಂದು ಒಬ್ಬ ಆಟಿಕೆ ತಯಾರಕರೊಬ್ಬರು ಹೆಮ್ಮೆಯಿಂದ ಹೇಳುತ್ತಾರೆ. "ನಾವು ಹೋಗಲು ಬಯಸಿದರೂ ಸಹ ನಮ್ಮಿಂದ ಅಲ್ಲಿಗೆಲ್ಲಾ ಹೋಗಲು ಸಾಧ್ಯವಿಲ್ಲ... ಆದರೆ ನಮ್ಮ ಆಟಿಕೆಗಳು ಪ್ರಯಾಣಿಸುತ್ತವೆ... ಇದು ಅದೃಷ್ಟ."
ಮುರ್ಷಿದಾಬಾದ್ನ ಹರಿಹರಪಾರಾ ಬ್ಲಾಕಿನಲ್ಲಿರುವ ರಾಂಪಾರಾ ಗ್ರಾಮದಲ್ಲಿ, ಪುರುಷ ಮತ್ತು ಮಹಿಳೆಯರು ಕಟ್ಕೆಟಿ (ಬಂಗಾಳಿ ಭಾಷೆಯಲ್ಲಿ ಕೊಟ್ಕೊಟಿ ಎಂದೂ ಕರೆಯುತ್ತಾರೆ) ತಯಾರಿಸುವಲ್ಲಿ ತೊಡಗಿಕೊಂಡಿದ್ದಾರೆ. ಹಳ್ಳಿಯ ಭತ್ತದ ಗದ್ದೆಗಳಿಂದ ಜೇಡಿಮಣ್ಣು ಮತ್ತು ಇನ್ನೊಂದು ಹಳ್ಳಿಯಿಂದ ಖರೀದಿಸಿದ ಸಣ್ಣ ಬಿದಿರಿನ ಕಡ್ಡಿಗಳನ್ನು ಕಟ್ಕೆಟಿ ತಯಾರಿಸಲು ಬಳಸಲಾಗುತ್ತದೆ ಎಂದು ರಾಮಪಾರಾದ ಮನೆಯಲ್ಲಿ ಅವುಗಳನ್ನು ತಮ್ಮ ಕರಕುಶಲತೆಯನ್ನು ತಯಾರಿಸುವ ತಪನ್ ಕುಮಾರ್ ದಾಸ್ ಹೇಳುತ್ತಾರೆ. ಅವರ ಇಡೀ ಕುಟುಂಬವು ಅದರ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಅವರು ಬಣ್ಣಗಳು, ತಂತಿ, ಬಣ್ಣದ ಕಾಗದ ಮತ್ತು ಹಳೆಯ ಫಿಲ್ಮ್ ರೀಲುಗಳನ್ನು ಸಹ ಇದಕ್ಕಾಗಿ ಬಳಸುತ್ತಾರೆ. "ಸುಮಾರು ಒಂದು ಅಂಗುಲದಷ್ಟು ಗಾತ್ರದಲ್ಲಿ ಕತ್ತರಿಸಿದ ಎರಡು ಫಿಲ್ಮ್ ಪಟ್ಟಿಗಳನ್ನು (ಬಿದಿರಿನ ಕೋಲಿನಲ್ಲಿ) ಸೀಳುಗಳ ನಡುವೆ ಸಿಕ್ಕಿಸುತ್ತಾರೆ. ಇದು ನಾಲ್ಕು ರೆಕ್ಕೆಗಳಂತೆ ಕೆಲಸ ಮಾಡುತ್ತದೆ" ಎಂದು ಕೆಲವು ವರ್ಷಗಳ ಹಿಂದೆ ಕೋಲ್ಕತ್ತಾದ ಬಾರಾಬಜಾರಿನಿಂದ ಫಿಲ್ಮ್ ರೀಲುಗಳ ಸಂಗ್ರಹವನ್ನು ಖರೀದಿಸುತ್ತಿದ್ದ ದಾಸ್ ಹೇಳುತ್ತಾರೆ. ಈ ಫಿಲ್ಮ್ ರೆಕ್ಕೆಗಳು ಕಟ್ಕೆಟಿಯ ಚಲನೆ ಮತ್ತು ಶಬ್ದಕ್ಕೆ ತಮ್ಮ ಕೊಡುಗೆ ನೀಡುತ್ತವೆ.


