ಮಳೆ, ನೀರಿನ ಅಭಾವಕ್ಕೆ ಕುಖ್ಯಾತವಾಗಿರುವ ಈ ಭಾಗದಲ್ಲಿ ‘ಸಿಹಿ ನೀರಿನ’ ಮಹತ್ವವನ್ನು ವಿವರಿಸುವ ಜಾನಪದ ಗೀತೆಯೊಂದು ಪ್ರಚಲಿತದಲ್ಲಿದೆ. ಹಾಡು ಕಚ್ (ಸಾಮಾನ್ಯವಾಗಿ ಕಛ್ಛ್ ಎಂದು ಕರೆಯಲಾಗುತ್ತದೆ) ಮತ್ತು ಪ್ರದೇಶದ ಜನರ ವಿಶಾಲವಾದ ಸಾಂಸ್ಕೃತಿಕ ವೈವಿಧ್ಯತೆಯನ್ನು ಉಲ್ಲೇಖಿಸುತ್ತದೆ.
ಸುಮಾರು ಒಂದು ಸಾವಿರ ವರ್ಷಗಳ ಹಿಂದೆ, ಲಾಖೋ ಫುಲಾನಿ (ಜನನ: ಕ್ರಿ.ಶ. 920) ಕಚ್, ಸಿಂಧ್ ಮತ್ತು ಸೌರಾಷ್ಟ್ರ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು ಮತ್ತು ಆಳುತ್ತಿದ್ದರು. ಪ್ರಜೆಗಳ ಬಗೆಗಿನ ಅವರ ಪ್ರೀತಿ ಮತ್ತು ಸೇವೆಯಿಂದಾಗಿ ಅವರು ಬಹಳಷ್ಟು ಗೌರವಿಸಲ್ಪಟ್ಟರು. ಅವರ ಉದಾರ ಆಡಳಿತ ನೀತಿಗಳನ್ನು ನೆನಪಿಸಿಕೊಳ್ಳುತ್ತಾ, ಜನರು ಈಗಲೂ ಹೇಳುತ್ತಾರೆ, “ಲಕ್ಖಾ ತೊ ಲಾಖೋ ಮಲಾಷೆ ಪಾನ್ ಫುಲಾನಿ ಇ ಫೆರ್ [ಲಾಖೊ ಎನ್ನುವ ಲೆಕ್ಕವಿಲ್ಲದಷ್ಟು ಹೆಸರಿನ ಜನರಿರುತ್ತಾರೆ, ಆದರೆ ನಮ್ಮ ಹೃದಯವನ್ನು ಆಳುವುದು ಲಾಖೊ ಫುಲಾನಿ ಮಾತ್ರ]”
ಈ ಜಾನಪದ ಗೀತೆಯಲ್ಲಿ ಅವರನ್ನು ವ್ಯಾಪಕವಾಗಿ ಉಲ್ಲೇಖಿಸಲಾಗಿದೆ, ಜೊತೆಗೆ ಈ ಗೀತೆಯು ಈ ಪ್ರದೇಶದ ಸಂಸ್ಕೃತಿಯ ಅಡಿಪಾಯದಲ್ಲಿರುವ ಧಾರ್ಮಿಕ ಸಹಿಷ್ಣುತೆ ಮತ್ತು ಸಾಮರಸ್ಯದ ವಿವರಣೆಯಾಗಿದೆ. ಕಚ್ನಲ್ಲಿರುವ ಹಾಜಿ ಪೀರ್ ದೇವಾಲಯ ಮತ್ತು ದೇಶದೇವಿಯಲ್ಲಿರುವ ಆಶಾಪುರದ ದೇವಾಲಯದಂತಹ ಅನೇಕ ಧಾರ್ಮಿಕ ಸ್ಥಳಗಳಿವೆ, ಇವುಗಳಿಗೆ ಹಿಂದೂಗಳು ಮತ್ತು ಮುಸ್ಲಿಮರು ಭೇಟಿ ನೀಡುತ್ತಾರೆ. ಈ ಜಾನಪದ ಗೀತೆಯು ಕರಕೋಟ್ ಗ್ರಾಮದಲ್ಲಿ ಫುಲಾನಿ ನಿರ್ಮಿಸಿದ ಕೋಟೆಯಂತಹ ಐತಿಹಾಸಿಕ ಉಲ್ಲೇಖಗಳನ್ನು ಸಹ ವ್ಯಕ್ತಪಡಿಸುತ್ತದೆ.
ಈ ಹಾಡು, ಸಂಗ್ರಹದಲ್ಲಿರುವ ಇತರ ಹಾಡುಗಳಂತೆ, ಪ್ರೀತಿ, ದುರಾಸೆ, ನಷ್ಟ, ಮದುವೆ, ಮಾತೃಭೂಮಿಯಿಂದ ಹಿಡಿದು ಲಿಂಗ ಜಾಗೃತಿ, ಪ್ರಜಾಪ್ರಭುತ್ವ ಹಕ್ಕುಗಳವರೆಗೆ ಪ್ರಮುಖ ವಿಷಯಗಳನ್ನು ಸ್ಪರ್ಶಿಸುತ್ತದೆ.
ಕಚ್ ಪ್ರದೇಶದ 341 ಹಾಡುಗಳನ್ನು ಒಳಗೊಂಡ ಕಚ್ಚಿ ಜಾನಪದ ಗೀತೆಗಳ ಮಲ್ಟಿಮೀಡಿಯಾ ಸಂಗ್ರಹವನ್ನು ಪರಿ ಪ್ರಕಟಿಸಲಿದೆ. ಈ ಲೇಖನದೊಂದಿಗೆ ಪ್ರಸ್ತುತಪಡಿಸಲಾದ ಆಡಿಯೊ ಫೈಲ್ ಸ್ಥಳೀಯ ಜಾನಪದ ಕಲಾವಿದರ ಹಾಡುಗಳ ಒಂದು ನೋಟವನ್ನು ಅವರ ಮೂಲ ಭಾಷೆಯಲ್ಲಿ ನೀಡುತ್ತದೆ. ಈ ಜಾನಪದ ಹಾಡುಗಳನ್ನು ಓದುಗರ ಅನುಕೂಲಕ್ಕಾಗಿ ಗುಜರಾತಿ ಲಿಪಿಯ ಜೊತೆಗೆ ಇಂಗ್ಲಿಷ್ ಮತ್ತು ಇತರ 14 ಭಾರತೀಯ ಭಾಷೆಗಳಿಗೆ ಅನುವಾದಿಸಲಾಗುತ್ತದೆ. ಪರಿ ಪ್ರಸ್ತುತ 14 ಭಾಷೆಗಳಲ್ಲಿ ತನ್ನ ಎಲ್ಲಾ ವರದಿಗಳನ್ನು ಪ್ರಕಟಿಸುತ್ತದೆ.
ಕಚ್ ಸೂಕ್ಷ್ಮ ಪರಿಸರ ವ್ಯವಸ್ಥೆಯ 45,612 ಚದರ ಕಿಲೋಮೀಟರ್ ಪ್ರದೇಶವನ್ನು ಒಳಗೊಂಡಿದೆ; ದಕ್ಷಿಣಕ್ಕೆ ಸಮುದ್ರ ಮತ್ತು ಉತ್ತರಕ್ಕೆ ಮರುಭೂಮಿ. ಭಾರತದ ಅತಿದೊಡ್ಡ ಜಿಲ್ಲೆಗಳಲ್ಲಿ ಒಂದಾದ ಇದು ಅರೆ-ಶುಷ್ಕ ವಲಯದಲ್ಲಿ ಬರುತ್ತದೆ, ಇದು ನೀರಿನ ಕೊರತೆ ಮತ್ತು ಬರಗಾಲದ ಸಮಸ್ಯೆಗಳೊಂದಿಗೆ ನಿಯಮಿತವಾಗಿ ಹೋರಾಡುತ್ತದೆ.
ವಿವಿಧ ಜಾತಿಗಳು, ಧರ್ಮಗಳು ಮತ್ತು ಸಮುದಾಯಗಳ ಜನರು ಕಚ್ನಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಕಳೆದ ಒಂದು ಸಾವಿರ ವರ್ಷಗಳಲ್ಲಿ ಸ್ಥಳಾಂತರಗೊಂಡ ನಂತರ ಈ ಪ್ರದೇಶಕ್ಕೆ ಬಂದು ನೆಲೆಸಿದ ವಲಸಿಗರ ವಂಶಸ್ಥರು. ಈ ಜನರಲ್ಲಿ ಹಿಂದೂ, ಮುಸ್ಲಿಂ ಮತ್ತು ಜೈನ ಪಂಥಗಳು ಮತ್ತು ರಬರಿ, ಗಧ್ವಿ, ಜಾಟ್, ಮೇಘವಾಲ್, ಮುತ್ವಾ, ಸೋಧಾ ರಜಪೂತ್, ಕೋಲಿ, ಸಿಂಧಿ ಮತ್ತು ದರ್ಬಾರ್ ಉಪಗುಂಪುಗಳ ಸದಸ್ಯರು ಸೇರಿದ್ದಾರೆ. ಕಚ್ನ ಜಾನಪದ ಜೀವನದ ಶ್ರೀಮಂತ ಮತ್ತು ಬಹುತ್ವದ ಪರಂಪರೆಯು ಅವರ ವಿಶಿಷ್ಟ ವೇಷಭೂಷಣಗಳು ಮತ್ತು ಉಡುಗೆ, ಕಸೂತಿ-ನೇಯ್ಗೆ, ಸಂಗೀತ ಮತ್ತು ಇತರ ಸಾಂಸ್ಕೃತಿಕ ಸಂಪ್ರದಾಯಗಳಲ್ಲಿ ಸುಲಭವಾಗಿ ಗೋಚರಿಸುತ್ತದೆ. 1989ರಲ್ಲಿ ಸ್ಥಾಪಿಸಲಾದ ಕಚ್ ಮಹಿಳಾ ವಿಕಾಸ್ ಸಂಘಟನೆ (KMVS), ಈ ಸಮುದಾಯಗಳನ್ನು ಮತ್ತು ಪ್ರದೇಶದ ಸಾಂಪ್ರದಾಯಿಕ ಪರಂಪರೆಯನ್ನು ಸಂಘಟಿಸಲು ಮತ್ತು ಬೆಂಬಲಿಸುವಲ್ಲಿ ಸಕ್ರಿಯವಾಗಿದೆ.



