"ನನ್ನ ಬೆರಳುಗಳು ಮತದಾನ ಮಾಡಲು ಯೋಗ್ಯವೆನ್ನುವುದಾದರೆ ಆಧಾರ್ ಕಾರ್ಡ್ ಪಡೆಯುವಷ್ಟು ಯೋಗ್ಯತೆಯನ್ನೇಕೆ ಪಡೆದಿಲ್ಲ?" ಎಂದು ಕೇಳುತ್ತಿದ್ದಾಳೆ ಪಾರ್ವತಿ ದೇವಿ. ಐವತ್ತೊಂದರ ಪ್ರಾಯದ ಈಕೆ ವೋಟರ್ ಐಡಿ ಕಾರ್ಡ್ ಎಂದು ಸಾಮಾನ್ಯವಾಗಿ ಕರೆಯಲಾಗುವ ತನ್ನ ಭಾವಚಿತ್ರವುಳ್ಳ ಎಲೆಕ್ಟರ್ಸ್ ಫೋಟೋ ಐಡೆಂಟಿಟಿ ಕಾರ್ಡ್ (ಇ.ಪಿ.ಐ.ಸಿ) ಅನ್ನು ಎತ್ತಿಹಿಡಿದು ನಮಗೆ ತೋರಿಸುತ್ತಿದ್ದಾಳೆ. 1995 ರಿಂದ ಹಿಡಿದು ಇಂದಿನವರೆಗೂ ಪ್ರತೀ ಚುನಾವಣೆಯಲ್ಲೂ ಈ ವೋಟರ್ ಐಡಿ ಕಾರ್ಡಿನ ದಾಖಲೆಯಿಂದಾಗಿ ಆಕೆ ಮತದಾನ ಮಾಡಿದ್ದಾಳಂತೆ.
ಮೂರು ವರ್ಷದ ಹಿಂದೆ ಆದ ಕುಷ್ಠರೋಗದ ಸೋಂಕು ಪಾರ್ವತಿಯ ಬೆರಳುಗಳನ್ನು ವಿರೂಪಗೊಳಿಸಿದೆ. ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ 2016-17 ರ ವಾರ್ಷಿಕ ವರದಿ ಯಲ್ಲಿ ಹೇಳಿರುವಂತೆ ಅಜಮಾಸು 86,000 ಮಂದಿ ಭಾರತೀಯರು ಕುಷ್ಠರೋಗಪೀಡಿತರಾಗಿದ್ದಾರೆ. ಈ ಸಂಖ್ಯೆಯು ದಾಖಲಾದ ಪ್ರಕರಣಗಳ ಸಂಖ್ಯೆ ಮಾತ್ರ ಎಂಬುದು ಗಮನಾರ್ಹ ಅಂಶ. ಇದಲ್ಲದೆ ಪ್ರತೀವರ್ಷವೂ ಹೊಸ ಕುಷ್ಠರೋಗದ ಪ್ರಕರಣಗಳು ಪತ್ತೆಯಾಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯು ಹೇಳುವ ಪ್ರಕಾರ ಜಗತ್ತಿನಾದ್ಯಂತ ಐದರಲ್ಲಿ ಮೂರಕ್ಕೂ ಹೆಚ್ಚು ಕುಷ್ಠರೋಗದ ಪ್ರಕರಣಗಳು ಭಾರತದಲ್ಲೇ ಪ್ರತೀವರ್ಷವೂ ಬೆಳಕಿಗೆ ಬಂದಿವೆ.
ಹೀಗಾಗಿ ನ್ಯಾಯಯುತವಾಗಿ ದಕ್ಕಬೇಕಿರುವ 2500 ರೂಪಾಯಿಗಳ ವಿಕಲಚೇತನರ ಪಿಂಚಣಿಯನ್ನೂ ಸೇರಿದಂತೆ ರಾಜ್ಯ ಸರಕಾರದಿಂದ ನೀಡಲಾಗುವ ಬಹುತೇಕ ಸೌಲಭ್ಯಗಳತ್ತ ಕೈಚಾಚಲು ಒಂದು ಪವಾಡದ ಕೀಲಿಯಂತಿದ್ದ ಆಧಾರ್ ಕಾರ್ಡು ಪಾರ್ವತಿ ದೇವಿಗೀಗ ಅಕ್ಷರಶಃ ಗಗನಕುಸುಮವಾಗಿಬಿಟ್ಟಿದೆ.
"ಆಧಾರ್ ಕಾರ್ಡಿದ್ದರೆ ನನಗೆ ಪಿಂಚಣಿ ಸಿಗುತ್ತದೆ ಎಂದು ಎರಡು ವರ್ಷದ ಹಿಂದೆ ನನ್ನ ಮಗ ಹೇಳಿದ್ದ. ಅಂದಿನಿಂದ ಈ ಕಾರ್ಡನ್ನು ಪಡೆಯಲು ನಾನು ಮಾಡಿದ ನಿರಂತರ ಪ್ರಯತ್ನಗಳು ಅಷ್ಟಿಷ್ಟಲ್ಲ. ಆದರೆ ಇವರೆಲ್ಲಾ ಹೇಳುವ ಪ್ರಕಾರ ನನ್ನ ಬೆರಳುಗಳು ಸರಿಯಾಗಿಲ್ಲದ ಕಾರಣದಿಂದಾಗಿ ನನಗೆ ಕಾರ್ಡು ಸಿಗೋದಿಲ್ಲವಂತೆ," ಎನ್ನುತ್ತಾರೆ ಪಾರ್ವತಿ.





