ಈ ವರ್ಷದ ಮೊದಲ ಐದು ತಿಂಗಳುಗಳಲ್ಲಿ ಒಸ್ಮಾನಾಬಾದ್ ಜಿಲ್ಲೆಯ ಒಟ್ಟು ಐವತ್ತೈದು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಜಿಲ್ಲಾಧಿಕಾರಿಯವರ ಕಚೇರಿಯ ದಾಖಲೆಯೊಂದು ಹೇಳುತ್ತಿದೆ. ಅಂದರೆ ಪ್ರತೀ ಮೂರು ದಿನಗಳಿಗೊಮ್ಮೆ ಒಂದು ಆತ್ಮಹತ್ಯೆಯು ಸಂಭವಿಸಿದೆ ಎಂದಾಯಿತು. 2016 ರ ಮಳೆಗಾಲದಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಬರಗಾಲದ ತೀವ್ರತೆಯು ಕೊಂಚ ಕಮ್ಮಿಯಾದ ಹೊರತಾಗಿಯೂ ಈ ಸಂಖ್ಯೆಯಲ್ಲಿ ಹೇಳಿಕೊಳ್ಳುವಂತಹ ಇಳಿಕೆಯೇನೂ ಆಗಲಿಲ್ಲ. ತಕ್ಕಮಟ್ಟಿನ ಮಳೆಯ ಹೊರತಾಗಿಯೂ ಮರಾಠಾವಾಡದ ರೈತರ ಆತ್ಮಹತ್ಯೆಗಳು ಕಮ್ಮಿಯಾಗದ ಹಿಂದಿನ ಪ್ರಮುಖ ಕಾರಣವೆಂದರೆ ಮುಂದಿನ ಬಿತ್ತನೆಗಾಗಿ ಸಾಲವನ್ನು ಹೊಂದಿಸಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.
ರೈತರಾದರೂ ಸಾಲಕ್ಕಾಗಿ ಯಾರತ್ತ ತಮ್ಮ ಕೈಚಾಚಬಲ್ಲರು? ಬ್ಯಾಂಕುಗಳು ಸಾಲವನ್ನು ನೀಡುವ ರೀತಿಯೇ ಬೇರೆ. ಬ್ಯಾಂಕಿಂಗ್ ಕ್ಷೇತ್ರವು ಅದೆಷ್ಟು ಪ್ರಾದೇಶಿಕ ಅಸಮತೋಲನದಿಂದ ಕೂಡಿದೆ ಎಂಬುದರ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕಿನ ದಾಖಲೆಗಳು ಯಶಸ್ವಿಯಾಗಿ ಬೆಳಕನ್ನು ಚೆಲ್ಲುತ್ತವೆ. ಉದಾಹರಣೆಗೆ ಎಂಟು ಜಿಲ್ಲೆಗಳನ್ನು ಹೊಂದಿರುವ ಮರಾಠಾವಾಡದ ಒಟ್ಟು ಜನಸಂಖ್ಯೆ 18 ಮಿಲಿಯನ್. ಇದು ಪುಣೆಯ 9 ಮಿಲಿಯನ್ ಜನಸಂಖ್ಯೆಗಿಂತ ಎರಡು ಪಟ್ಟು ಹೆಚ್ಚು. ಆದರೆ ಮಾರ್ಚ್ 2016 ರವರೆಗೆ ಬ್ಯಾಂಕುಗಳಿಂದ (ರಾಷ್ಟ್ರೀಕೃತ ಮತ್ತು ಖಾಸಗಿ) ಮರಾಠಾವಾಡಾಗೆ ನೀಡಲಾದ ಸಾಲದ ಮೊತ್ತವು (ರೂ. 45795 ಕೋಟಿ) ಪುಣೆಗೆ ನೀಡಲಾದ ಸಾಲದ ಮೊತ್ತದ (ರೂ. 140,643 ಕೋಟಿ) ಮೂರನೇ ಒಂದು ಭಾಗಕ್ಕಿಂತಲೂ ಕಮ್ಮಿ. ಆರ್ಥಿಕತೆಯ ನೆಲೆಯಲ್ಲಿ ಅಷ್ಟೇನೂ ಲಾಭದಾಯಕವಲ್ಲದ ಪ್ರದೇಶಗಳ ಬಗ್ಗೆ ಬ್ಯಾಂಕುಗಳಿಗೆ ಅದೆಷ್ಟರ ಮಟ್ಟಿನ ಅಸಡ್ಡೆಯ ಭಾವನೆಯಿದೆ ಎಂಬುದಕ್ಕೆ ಇದಕ್ಕೊಂದು ಸ್ಪಷ್ಟ ನಿದರ್ಶನ. ಕೃಷಿ ಸಂಬಂಧಿ ಉದ್ಯಮಗಳು ಇಂತಹ ಭಾಗಗಳಲ್ಲೇಕೆ ತಲೆಯೆತ್ತುತ್ತಿಲ್ಲ ಎಂಬುದಕ್ಕೂ ಇಲ್ಲಿ ಸ್ಪಷ್ಟ ಉತ್ತರವಿದೆ.
ಆಲ್ ಇಂಡಿಯಾ ಎಂಪ್ಲಾಯೀಸ್ ಬ್ಯಾಂಕ್ ಅಸೋಸಿಯೇಷನ್ನಿನ ಜಂಟಿ ಕಾರ್ಯದರ್ಶಿಯಾಗಿರುವ ದೇವಿದಾಸ್ ತುಲಜಾಪೂರ್ಕರ್ ರವರು ಹೇಳುವ ಪ್ರಕಾರ ಮಹಾರಾಷ್ಟ್ರದ ತೊಂಭತ್ತು ಪ್ರತಿಶತ ಬ್ಯಾಂಕ್ ವಹಿವಾಟುಗಳು ನಡೆಯುವ ಪ್ರದೇಶಗಳೆಂದರೆ ಥಾಣೆ, ಮುಂಬೈ ಮತ್ತು ಪುಣೆ. ``ಆರ್ಥಿಕ ಸಮತೋಲನವನ್ನು ಕಾಯ್ದುಕೊಳ್ಳಲು ಅಭಿವೃದ್ಧಿ ಹೊಂದಿದ ಪ್ರದೇಶಗಳಿಂದ ಹಿಂದುಳಿದ ಪ್ರದೇಶಗಳ ಕಡೆಗೆ ಸಂಪನ್ಮೂಲಗಳು ಹರಿದುಬರಬೇಕಿತ್ತು. ಆದರೆ ನಾವು ಈ ಕಂದಕವನ್ನು ಮತ್ತಷ್ಟು ದೊಡ್ಡದಾಗಿಸುತ್ತಿದ್ದೇವೆ'', ಎನ್ನುತ್ತಿದ್ದಾರೆ ದೇವಿದಾಸ್.
ಇವೆಲ್ಲವೂ ಕಮ್ಮಿಯೆಂಬಂತೆ ಬ್ಯಾಂಕುಗಳು ರೈತರ ಕೃಷಿ ಸಾಲಗಳನ್ನು ಇತರ ಸಾಲಗಳೊಂದಿಗೆ ಜೋಡಿಸುತ್ತಾ ರೈತರ ಸಾಲಗಳನ್ನು ಮತ್ತಷ್ಟು ದೊಡ್ಡದಾಗಿಸುತ್ತಿವೆ. ಉದಾಹರಣೆಗೆ ಕೃಷಿ ಸಾಲಕ್ಕಿರುವ (ಕೃಷಿ ಸಂಬಂಧಿ ಚಟುವಟಿಕೆಗಳಾದ ಬೀಜಗಳ ಖರೀದಿ, ರಸಗೊಬ್ಬರಗಳ ಖರೀದಿ ಇತ್ಯಾದಿಗಳಿಗಾಗಿ) ಬಡ್ಡಿದರದ ಪ್ರಮಾಣ 7%. ಇದರಲ್ಲಿ 4% ಭಾಗವನ್ನು ರಾಜ್ಯ ಸರಕಾರವು ಸಂದಾಯ ಮಾಡುತ್ತದೆ. ಆದರೆ ಅವಧಿಯ ಸಾಲಗಳು (ಟ್ರಾಕ್ಟರ್ ಅಥವಾ ಇತರ ಯಂತ್ರೋಪಕರಣಗಳ ಖರೀದಿಗಾಗಿ ಮಾಡಲಾಗುವ ಬಂಡವಾಳ ಹೂಡಿಕೆಯ ಸಾಲಗಳು) ಬಡ್ಡಿದರದ ಎರಡರಷ್ಟನ್ನು ಬೇಡುತ್ತಿವೆ. ಈಗ ಇವೆರಡನ್ನೂ ಜೋಡಿಸಿ ಸಾಲಗಳ ಪುನರ್ರಚನೆಯನ್ನು ಮಾಡುತ್ತಿರುವ ಬ್ಯಾಂಕುಗಳು ರೈತರಿಗೆ ತಲೆನೋವಾಗಿ ಕಾಡುತ್ತಿವೆ. ಇವೆಲ್ಲದರ ನೇರ ಪರಿಣಾಮವೆಂದರೆ ರೈತನು ತೀರಿಸಬೇಕಾದ ಸಾಲದ ಮೊತ್ತವು ಮತ್ತಷ್ಟು ಹೆಚ್ಚಾಗಿ ಆತನಿಗೆ ಹೊಸ ಸಾಲಗಳು ಸಿಗದಂತಾಗಿಬಿಟ್ಟಿವೆ.
ಸಾಲಗಳ ಪುನರ್ರಚನೆಯನ್ನು ಮಾಡುವ ಗೋಜಿಗೆ ಹೋಗಬೇಡಿ ಎಂಬ ಸಲಹೆಯನ್ನು ನಾನು ಬಹಳಷ್ಟು ರೈತರಿಗೆ ನೀಡುತ್ತಿದ್ದೆ ಎನ್ನುತ್ತಾರೆ ಬ್ಯಾಂಕ್ ಆಫ್ ಮಹಾರಾಷ್ಟ್ರದ ನಿವೃತ್ತ ಬ್ಯಾಂಕ್ ಅಧಿಕಾರಿಯೊಬ್ಬರು. ``ಆದರೆ ಎಲ್ಲಾ ಬ್ಯಾಂಕುಗಳು ಸಾಲಗಳ ಪುನರ್ರಚನೆಯನ್ನು ಮಾಡುವುದಿಲ್ಲ ಎನ್ನುವುದೂ ಕೂಡ ಸತ್ಯ. ಅಷ್ಟಕ್ಕೂ ಆಗುವುದೇನೆಂದರೆ ಮನೆಗಳಿಗೆ ಬ್ಯಾಂಕ್ ಅಧಿಕಾರಿಗಳ ದಾಳಿಯನ್ನು ತಪ್ಪಿಸಲು ಇದನ್ನು ಮಾಡಲೇಬೇಕೆಂದು ಹಲವು ಬಾರಿ ರೈತರಿಗೆ ಅರೆಬೆಂದ ಮಾಹಿತಿಗಳು ಸಿಗುತ್ತವೆ. ಹೀಗಾಗಿ ಕಂಗಾಲಾಗುವ ರೈತರು ಸಾಲದ ಪುನರ್ರಚನೆಯನ್ನು ಮಾಡುವುದುಂಟು'', ಎನ್ನುತ್ತಾರೆ ಔರಂಗಾಬಾದಿನ ನಿವಾಸಿಯಾದ ಈ ನಿವೃತ್ತ ಅಧಿಕಾರಿ.
ಈ ಎಲ್ಲಾ ಬೆಳವಣಿಗೆಗಳಿಂದಾಗಿ ರೈತರು ಈಗಾಗಲೇ ತಮ್ಮ ಖಾತೆಗಳಿರುವ ಜಿಲ್ಲಾ ಸಹಕಾರಿ ಬ್ಯಾಂಕುಗಳ ಕದವನ್ನೇ ಮತ್ತೆ ತಟ್ಟುತ್ತಾರೆ. ಆದರೆ ಪ್ರಭಾವಿ ಡಿಫಾಲ್ಟರ್ ಗಳನ್ನು ಸಂಭಾಳಿಸಲಾಗದೆ ಒದ್ದಾಡುತ್ತಿರುವ ಆರು ಬ್ಯಾಂಕುಗಳು ಮರಾಠಾವಾಡಾದ ಆರು ಜಿಲ್ಲೆಗಳಲ್ಲಿವೆ. ಲಾತೂರ್ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿರುವ ಸಹಕಾರಿ ಬ್ಯಾಂಕುಗಳದ್ದೂ ಕೂಡ ಇದೇ ಕತೆ. ಹೀಗಾಗಿ ಬ್ಯಾಂಕುಗಳಿಂದ ಸಾಲವನ್ನು ಪಡೆದುಕೊಳ್ಳಲಾಗದ ಸಂದೀಪನಂತಹ ಕೃಷಿಕನೊಬ್ಬ ಕೇಳಿದ ಕೂಡಲೇ ಕಾಸು ಬಿಚ್ಚುವ ಖಾಸಗಿ ವ್ಯಕ್ತಿಗಳ ಬಳಿ ಹೋಗಿ ಹೆಚ್ಚಿನ ಬಡ್ಡಿದರದಲ್ಲಿ ಸಾಲವನ್ನು ಪಡೆದುಕೊಳ್ಳುತ್ತಾನೆ. ಮೂರರಿಂದ ಐದು ಪ್ರತಿಶತ ಮಾಸಿಕ ಬಡ್ಡಿಯಾದರೆ ನಲವತ್ತರಿಂದ ಅರವತ್ತು ಪ್ರತಿಶತದಷ್ಟಿನ ವಾರ್ಷಿಕ ಬಡ್ಡಿಯು ಇಂಥಾ ಮೂಲಗಳಿಂದ ರೈತರಿಗೆ ಸಾಲವಾಗಿ ಸಿಗುತ್ತದೆ. ಇವುಗಳು ದೊಡ್ಡ ಮೊತ್ತದ ಸಾಲಗಳಲ್ಲದಿದ್ದರೂ ಬಡ್ಡಿಯನ್ನು ಸೇರಿಸಿ ಲೆಕ್ಕ ಹಿಡಿದರೆ ಅಸಲಿನ ಮೊತ್ತಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸಾಲದ ಕುಣಿಕೆಯು ಮತ್ತಷ್ಟು ಬಿಗಿಯಾಗಿಬಿಟ್ಟಿರುತ್ತದೆ.
ಬೀದ್ ಜಿಲ್ಲೆಯ ಅಂಜನ್ವತಿ ಪ್ರದೇಶದ ನಿವಾಸಿಯಾದ ಅರವತ್ತೈದರ ಪ್ರಾಯದ ಭಗವಾನ್ ಯೇಡೆ ಮತ್ತು ಆತನ ಪತ್ನಿಯಾದ ಸಾಖರ್ ಬಾಯಿ ಕೂಡ ಸದ್ಯ ಖಾಸಗಿ ವ್ಯಕ್ತಿಯೊಬ್ಬನಿಂದ ಸಾಲವನ್ನು ಪಡೆದುಕೊಳ್ಳಲು ಅಣಿಯಾಗುತ್ತಿದ್ದಾರೆ. ``ಸದ್ಯ ಹೈದರಾಬಾದ್ ಬ್ಯಾಂಕಿನಲ್ಲಿ ಮೂರು ಲಕ್ಷದ ಸಾಲವಿದ್ದರೆ ಖಾಸಗಿ ಸಾಲವು ಸುಮಾರು ಒಂದೂವರೆ ಲಕ್ಷದಷ್ಟಿದೆ. ನನ್ನಿಬ್ಬರು ಗಂಡುಮಕ್ಕಳ ವಿದ್ಯಾಭ್ಯಾಸದ ಖರ್ಚಿಗೂ ದುಡ್ಡಿನ ಅವಶ್ಯಕತೆಯಿದೆ. ಪುಣೆಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದ ಇಬ್ಬರೂ ಈಗ ಉದ್ಯೋಗದ ತಲಾಶೆಯಲ್ಲಿದ್ದಾರೆ'', ಎನ್ನುತ್ತಿದ್ದಾರೆ ಭಗವಾನ್ ಯೇಡೆ.