“ನನ್ನ ಇಬ್ಬರು ಹೆಣ್ಣು ಮಕ್ಕಳಿಗೆ ನನ್ನ ಈ ಬದುಕು ಬೇಡ. ಅವರು ಬದುಕನ್ನು ಬೇರೆ ರೀತಿ ಕಟ್ಟಿಕೊಳ್ಳಲಿ” ಒಣ ಹಾಕುತ್ತಿದ್ದ ಬಿಳಿ ಮೀನು ರಾಶಿಗೆ ಉಪ್ಪು ಹಾಕುತ್ತಿದ್ದ ವಿಶಾಲಾಕ್ಷಿ ನಿಟ್ಟುಸಿರಿಡುತ್ತಾ ಹೇಳಿದರು. 42 ವರ್ಷದ ಈ ಮಹಿಳೆ ತಮಿಳುನಾಡಿನ ಕಡಲೂರು ಓಲ್ಡ್ ಟೌನ್ ಬಂದರಿನಲ್ಲಿ 20 ವರ್ಷಗಳಿಂದ ಮೀನುಗಳನ್ನು ಒಣಗಿಸುತ್ತಿದ್ದಾರೆ.
“ನಾನು ಭೂರಹಿತ ದಲಿತ ಕುಟುಂಬದಲ್ಲಿ ಜನಿಸಿದವಳು. ನನ್ನ ತಂದೆ ತಾಯಿ ಓದಿದವರಲ್ಲ. ಕೃಷಿ ಕೂಲಿಯಾಗಿ ಕೆಲಸ ಮಾಡುತ್ತಿದ್ದರು. ನಾನು ಅವರಿಗೆ ಸಹಾಯ ಮಾಡುತ್ತಿದ್ದೆ” ಎನ್ನುವ ವಿಶಾಲಾಕ್ಷಿಯವರಿಗೆ ಅವರ 15 ವಯಸ್ಸಿನಲ್ಲಿ ಶಕ್ತಿವೇಲ್ ಎನ್ನುವವರ ಜೊತೆ ಮದುವೆ ಮಾಡಿಸಲಾಯಿತು. ಅವರ ಮೊದಲ ಮಗಳಾದ ಶಾಲಿನಿ ಮದುವೆಯಾದ ಕೇವಲ ಎರಡು ವರ್ಷಗಳ ನಂತರ ಕಡಲೂರು ಜಿಲ್ಲೆಯ ಭೀಮಾ ರಾವ್ ನಗರದಲ್ಲಿ ಜನಿಸಿದರು.
ಭೀಮರಾವ್ ನಗರದಲ್ಲಿ ಕೃಷಿ ಕೂಲಿ ಕೆಲಸ ಸಿಗದ ಕಾರಣ ವಿಶಾಲಕ್ಷಿ ಕೆಲಸ ಹುಡುಕಿಕೊಂಡು ಕಡಲೂರು ಓಲ್ಡ್ ಟೌನ್ ಬಂದರಿಗೆ ಬಂದರು. ಅಲ್ಲಿ ಅವರು ಕಮಲವೇಣಿಯವರನ್ನು ಭೇಟಿಯಾದರು. ಆಗ ವಿಶಾಲಕ್ಷಿಯವರಿಗೆ 17 ವರ್ಷ. ಕಮಲವೇಣಿ ಇವರಿಗೆ ಮೀನು ಒಣಗಿಸುವುದು ಮತ್ತು ಅದರ ವ್ಯಾಪಾರದ ಕೌಶಲವನ್ನು ಕಲಿಸಿದರು. ಈ ವ್ಯವಹಾರ ಅವರ ಕೈ ಹಿಡಿಯಿತು.
ಬಯಲಿನಲ್ಲಿ ಮೀನುಗಳನ್ನು ಒಣಗಿಸುವುದು ಮೀನು ಸಂಸ್ಕರಣೆಯ ಅತ್ಯಂತ ಹಳೆಯ ರೂಪವಾಗಿದೆ ಮತ್ತು ಉಪ್ಪು ಹಾಕುವುದು, ಹೊಗೆಯಲ್ಲಿಡುವುದು, ಉಪ್ಪಿನಲ್ಲಿ ನೆನೆ ಹಾಕುವುದು ಮತ್ತು ಹೆಚ್ಚಿನ ಚಟುವಟಿಕೆಗಳನ್ನು ಒಳಗೊಂಡಿದೆ. ಕೊಚ್ಚಿಯ ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಹೊರತಂದ 2016ರ ಸಾಗರ ಮೀನುಗಾರಿಕೆ ಗಣತಿಯ ಪ್ರಕಾರ, ಕಡಲೂರು ಜಿಲ್ಲೆಯ 5,000ಕ್ಕೂ ಹೆಚ್ಚು ಸಕ್ರಿಯ ಮೀನುಗಾರ ಮಹಿಳೆಯರಲ್ಲಿ ಸರಿಸುಮಾರು 10 ಪ್ರತಿಶತದಷ್ಟು ಜನರು ಮೀನುಗಳನ್ನು ಒಣಗಿಸುವುದು, ಕ್ಯೂರಿಂಗ್ ಮಾಡುವುದು ಮತ್ತು ಚರ್ಮ ಸುಲಿಯುವಲ್ಲಿ ತೊಡಗಿಸಿಕೊಂಡಿದ್ದಾರೆ.
2020-2021ರಲ್ಲಿ ತಮಿಳುನಾಡಿನಲ್ಲಿ ಸಮುದ್ರ ಮೀನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಮಹಿಳೆಯರ ಸಂಖ್ಯೆ ಸುಮಾರು 2.6 ಲಕ್ಷ ಎಂದು ಮೀನುಗಾರಿಕೆ ಇಲಾಖೆಯ ರಾಜ್ಯ ವೆಬ್ಸೈಟ್ ಹೇಳುತ್ತದೆ.

















