“ಎಲ್ಲರೂ ಅದನ್ನೇ ಮಾಡುತ್ತಿದ್ದು ನಾವೂ ಸಹ ಹಾಗೆಯೇ ಮಾಡುತ್ತಿದ್ದೇವೆ”, ಎನ್ನುತ್ತಾರೆ ರೂಪ ಪಿರಿಕಕ.
ಅನುವಂಶಿಕವಾಗಿ ಮಾರ್ಪಡಿಸಲಾದ (ಜಿ.ಎಂ) ಬಿಟಿ ಹತ್ತಿಯ ಬೀಜಗಳು ಸ್ಥಳೀಯ ಮಾರುಕಟ್ಟೆಗಳಲ್ಲಿ ಅಥವ ರೈತರ ಸ್ವಂತ ಗ್ರಾಮಗಳಲ್ಲಿ ಈಗ ಸುಲಭವಾಗಿ ದೊರೆಯುತ್ತಿವೆ. ಈಕೆಯಂತೆಯೇ ಎಣಿಕೆಗೆ ನಿಲುಕದಷ್ಟು ರೈತರು ಒಡಿಶಾ ರಾಯಗಡ ಜಿಲ್ಲೆಯ ಸುತ್ತಲಿನ ಇತರೆ ಗ್ರಾಮಗಳಲ್ಲಿ ಈ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.
"ಅವರ ಕೈಗೆ ದುಡ್ಡು ಸಿಗುತ್ತಿದೆ", ಎನ್ನುತ್ತಾರೆ ಆಕೆ.
40 ರ ಪಿರಿಕಕ ಕೊಂಧ್ ಆದಿವಾಸಿ ರೈತ ಮಹಿಳೆ. ಸುಮಾರು ಎರಡು ದಶಕಗಳಿಂದಲೂ ಪ್ರತಿ ವರ್ಷ ಆಕೆಯು ದೊಂಗರ್ ಛಾಸ್ ಎಂಬ ಪರ್ವತೀಯ ಕೃಷಿಯನ್ನು (ಸ್ಥಳಾಂತರ ಬೇಸಾಯ) ಕೈಗೊಳ್ಳಲು ಬೆಟ್ಟದಲ್ಲಿ ಇಳಿಜಾರನ್ನು ನಿರ್ಮಿಸುತ್ತಾರೆ. ಶತಮಾನಗಳಿಂದಲೂ ಸದರಿ ಪ್ರದೇಶದಲ್ಲಿನ ರೈತರು ಪಾಲಿಸಿಕೊಂಡು ಬಂದ ಸಂಪ್ರದಾಯದಂತೆ, ಪಿರಿಕಕ ಹಿಂದಿನ ವರ್ಷದ ಫಸಲಿನಲ್ಲಿ ಉಳಿಸಿದ ಬೀಜಗಳನ್ನು ಜಮೀನಿನ ತುಂಡು ನೆಲದಲ್ಲಿ ಬಿತ್ತನೆ ಮಾಡುತ್ತಾರೆ. ಇದರಿಂದ ಗೂಡೆಯ ತುಂಬ ಮಂಡಿಯ, ಕಂಗು, ಬಟಾಣಿ, ಉದ್ದು, ಸಾಂಪ್ರದಾಯಿಕ ಪ್ರಕಾರಗಳಾದ ಉದ್ದನೆಯ ಹುರುಳಿ, ಹುಚ್ಚೆಳ್ಳು, ಎಳ್ಳು ಮುಂತಾದ ಆಹಾರದ ಬೆಳೆಗಳು ದೊರೆಯುತ್ತವೆ.
ಈ ಜುಲೈನಲ್ಲಿ ಮೊದಲ ಬಾರಿ ಪಿರಿಕಕ ಬಿಟಿ ಹತ್ತಿಯ ಕೃಷಿಯಲ್ಲಿ ತೊಡಗಿದರು. ಬಿಶಮಕಟಕ್ ವಿಭಾಗದ ತನ್ನ ಗ್ರಾಮದಲ್ಲಿ ಬೆಟ್ಟದ ಇಳಿಜಾರಿನಲ್ಲಿ ರಾಸಾಯನಿಕಗಳಿಂದ ತೋಯಿಸಲ್ಪಟ್ಟ ಕಡು ಗುಲಾಬಿ ಬಣ್ಣದ ಬೀಜಗಳನ್ನು ಬಿತ್ತುವ ಸಂದರ್ಭದಲ್ಲಿ ಆಕೆಯನ್ನು ನಾವು ಭೇಟಿಯಾದೆವು. ಆದಿವಾಸಿಗಳ ಸ್ಥಳಾಂತರ ಬೇಸಾಯದ ಪರಂಪರೆಯಲ್ಲಿ ಹತ್ತಿಯ ಈ ಆಕ್ರಮಣವು ಗಮನಾರ್ಹವಾಗಿದ್ದು ಈ ಹಠಾತ್ ಬದಲಾವಣೆಯ ಬಗ್ಗೆ ನಾವು ಆಕೆಯನ್ನು ವಿಚಾರಿಸಿದೆವು.
"ಅರಿಶಿನದಂತಹ ಇತರೆ ಬೆಳೆಗಳೂ ಹಣವನ್ನು ತರುತ್ತವೆಯಾದರೂ ಯಾರೂ ಅವನ್ನು ಬೆಳೆಯುತ್ತಿಲ್ಲ. ಎಲ್ಲರೂ ಆಹಾರ ಧಾನ್ಯಗಳ ಕೃಷಿಯನ್ನು ತ್ಯಜಿಸಿ ಹತ್ತಿಯನ್ನು ಹಿಂಬಾಲಿಸುತ್ತಿದ್ದಾರೆ", ಎಂದರು ಪಿರಿಕಕ.
ಕೇವಲ 16 ವರ್ಷಗಳಲ್ಲಿ ರಾಯಗಡ ಜಿಲ್ಲೆಯಲ್ಲಿ ಹತ್ತಿಯ ಕೃಷಿಯನ್ನು ಕೈಗೊಳ್ಳಲಾದ ಪ್ರದೇಶದ ವ್ಯಾಪ್ತಿ ಶೇ. 5,200 ಕ್ಕಿಂತಲೂ ಹೆಚ್ಚಾಗಿದೆ. ಸರ್ಕಾರಿ ದತ್ತಾಂಶದ ಪ್ರಕಾರ 2002-03 ರಲ್ಲಿ ಕೇವಲ 1,631 ಎಕರೆ ಪ್ರದೇಶದಲ್ಲಿ ಮಾತ್ರವೇ ಹತ್ತಿಯ ಕೃಷಿಯನ್ನು ಕೈಗೊಳ್ಳಲಾಗಿದೆ. ಜಿಲ್ಲಾ ವ್ಯವಸಾಯ ಕಛೇರಿಯ ಪ್ರಕಾರ 2018-19 ರಲ್ಲಿ ಇದರ ಪ್ರಮಾಣ 86,907 ಎಕರೆಗಳಷ್ಟಿದೆ.
ಸುಮಾರು 1 ಮಿಲಿಯನ್ ಜನಸಂಖ್ಯೆಯ ರಾಯಗಡವು ಕೊರಾಪುಟ್ ಪ್ರದೇಶದ ಒಂದು ಭಾಗವಾಗಿದೆ. ಇದು ಪ್ರಪಂಚದ ಬೃಹತ್ ಜೀವವೈವಿಧ್ಯವನ್ನುಳ್ಳ ಸಂವೇದನಾಶೀಲ ಹಾಗೂ ಅಕ್ಕಿಯ ವಿವಿಧ ಪ್ರಕಾರಗಳನ್ನುಳ್ಳ ಐತಿಹಾಸಿಕ ಪ್ರದೇಶವಾಗಿದೆ. ಸೆಂಟ್ರಲ್ ರೈಸ್ ರಿಸರ್ಚ್ ಇನ್ಸ್ಟಿಟ್ಯೂಟ್ ನ 1959 ರ ಸಮೀಕ್ಷೆಯು ಸದರಿ ಪ್ರದೇಶದಲ್ಲಿ ಆ ಸಮಯದಲ್ಲಿನ್ನೂ 1,700 ಅಕ್ಕಿಯ ಪ್ರಕಾರಗಳಿವೆಯೆಂಬುದಾಗಿ ತಿಳಿಸುತ್ತದೆ. ಈಗ ಅದು ಸುಮಾರು 200 ಕ್ಕೆ ಕ್ಷೀಣಿಸಿದೆ. ಕೆಲವು ಸಂಶೋಧಕರು ಅಕ್ಕಿಯ ಬೇಸಾಯದ ಜನ್ಮಭೂಮಿಯೆಂಬುದಾಗಿ ಇದನ್ನು ಪರಿಗಣಿಸಿದ್ದಾರೆ.








