ಆ ರಾತ್ರಿ ವಿಕ್ರಮ್ ಮನೆಗೆ ಬರದೆ ಹೋದಾಗ, ಅವನ ತಾಯಿ ಪ್ರಿಯಾ ಆ ಕುರಿತು ಹೆಚ್ಚು ಚಿಂತಿಸಲಿಲ್ಲ. ಯಾಕೆಂದರೆ ಅವನು ಕಾಮಾಟಿಪುರದ ಮತ್ತೊಂದು ಲೇನ್ನಲ್ಲಿರುವ ಘರ್ವಾಲಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಸಾಮಾನ್ಯವಾಗಿ ಬೆಳಗಿನ ಜಾವದ 2 ಗಂಟೆಯ ಹೊತ್ತಿಗೆ ಮನೆಗೆ ಮರಳುತ್ತಿದ್ದ ಅಥವಾ ಮರುದಿನ ಬೆಳಿಗ್ಗೆ ಅವನ ಕೆಲಸದ ಸ್ಥಳದಲ್ಲೇ ಮಲಗುತ್ತಿದ್ದ.
ಪ್ರಿಯಾ ಅವನಿಗೆ ಕರೆ ಮಾಡಲು ಪ್ರಯತ್ನಿಸಿದ್ದರು, ಆದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಮರುದಿನ ಆಗಸ್ಟ್ 8ರಂದು ಸಂಜೆಯೂ ಮನೆಗೆ ಬಾರದಿದ್ದ ಕಾರಣ, ಅವರು ಆತಂಕಕ್ಕೊಳಗಾಗಿ ಸೆಂಟ್ರಲ್ ಮುಂಬೈ ಹತ್ತಿರದ ನಾಗಪಾಡಾ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಕುರಿತು ದೂರು ದಾಖಲಿಸಿದರು. ಮರುದಿನ ಬೆಳಿಗ್ಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಪ್ರಾರಂಭಿಸಿದರು. "ಅವನು ಮುಂಬೈ ಸೆಂಟ್ರಲ್ನ ಫುಟ್ಬ್ರಿಡ್ಜ್ ಬಳಿ ಮಾಲ್ ಬಳಿ ಕಾಣಿಸಿದ್ದ" ಎಂದು ಪ್ರಿಯಾ ಹೇಳುತ್ತಾರೆ.
ಅವರ ಆತಂಕ ಹೆಚ್ಚಾಯಿತು. ಅವರನ್ನು "ಯಾರಾದರೂ ಅವನನ್ನು ಕರೆದುಕೊಂಡು ಹೋಗಿದ್ದರೆ ಏನು ಮಾಡುವುದು?" ಅವನಿಗೆ ಈ ಹೊಸ ಕಾಯಿಲೆ [ಕೋವಿಡ್] ಏನಾದರೂ ಬಂದಿರಬಹುದೇ?" ಎನ್ನುವ ಚಿಂತೆ ಕಾಡತೊಡಗಿತು. "ಈ ಪ್ರದೇಶದಲ್ಲಿ ಯಾರಿಗಾದರೂ ಏನಾದರೂ ಆದರೂ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಅವರು ಹೇಳುತ್ತಾರೆ.
ವಿಕ್ರಮ್ ತನ್ನದೇ ಆದ ಪ್ರಯಾಣದಲ್ಲಿದ್ದನು, ಅವನು ತನ್ನ ಪ್ರಾಯಣವನ್ನು ಮೊದಲೇ ಯೋಜಿಸಿದ್ದನು. 30ರ ಹರೆಯದಲ್ಲಿರುವ ಲೈಂಗಿಕ ಕಾರ್ಯಕರ್ತೆಯಾಗಿರುವ ಅವನ ತಾಯಿ ಲಾಕ್ಡೌನ್ ಸಮಯದಲ್ಲಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ, ಮತ್ತು ಆಕೆಯ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿರುವುದು ಮತ್ತು ಸಾಲಗಳು ಬೆಳೆಯುತ್ತಿರುವುದನ್ನು ಅವನು ನೋಡುತ್ತಿದ್ದನು. ಅವನ ಒಂಬತ್ತು ವರ್ಷದ ಸಹೋದರಿ ರಿದ್ಧಿ ಹತ್ತಿರದ ಮದನ್ಪುರದ ತನ್ನ ಹಾಸ್ಟೆಲ್ನಿಂದ ಮನೆಗೆ ಮರಳಿದ್ದಳು, ಮತ್ತು ಕುಟುಂಬವು ಎನ್ಜಿಒಗಳು ವಿತರಿಸುವ ಪಡಿತರ ಕಿಟ್ಗಳನ್ನು ಅವಲಂಬಿಸಿತ್ತು. (ಈ ವರದಿಯಲ್ಲಿನ ಎಲ್ಲಾ ಹೆಸರುಗಳನ್ನು ಬದಲಾಯಿಸಲಾಗಿದೆ.)
ಮತ್ತು ಮಾರ್ಚ್ ತಿಂಗಳಿನಲ್ಲಿ ಲಾಕ್ ಡೌನ್ ಆಗಿದ್ದರಿಂದ, ಬೈಕುಲ್ಲಾದಲ್ಲಿ ವಿಕ್ರಮ್ ಓದುತ್ತಿದ್ದ ಮುನ್ಸಿಪಲ್ ಶಾಲೆ ಕೂಡ ಮುಚ್ಚಲ್ಪಟ್ಟಿತು. ಆದ್ದರಿಂದ 15 ವರ್ಷದ ವಿಕ್ರಮ್ ಸಣ್ಣ-ಪುಟ್ಟ ಕೆಲಸಗಳನ್ನು ಮಾಡಲು ಪ್ರಾರಂಭಿಸಿದ.
ಕುಟುಂಬಕ್ಕೆ ಆಹಾರ ಬೇಯಿಸಲು ದಿನವೊಂದಕ್ಕೆ 60-80 ರೂಪಾಯಿಗಳ ಸೀಮೆಎಣ್ಣೆ ಬೇಕಾಗುತ್ತದೆ. ಜೊತೆಗೆ ಕಾಮಾಟಿಪುರದ ತಮ್ಮ ಪುಟ್ಟ ಕೋಣೆಗೆ ಬಾಡಿಗೆ ಪಾವತಿವುದಕ್ಕೂ ಅವರು ಹೆಣಗಾಡುತ್ತಿದ್ದರು. ಅವರಿಗೆ ಔಷಧಿಗಳಿಗಾಗಿ ಮತ್ತು ಹಳೆಯ ಸಾಲಗಳನ್ನು ತೀರಿಸಲು ಹಣದ ಅಗತ್ಯವಿತ್ತು. ಪ್ರಿಯಾ ತನ್ನ ಗ್ರಾಹಕರಿಂದ ಅಥವಾ ಸ್ಥಳೀಯರಿಂದ ಹೆಚ್ಚಿನ ಸಾಲಗಳನ್ನು ತೆಗೆದುಕೊಳ್ಳುತ್ತಲೇ ಇದ್ದರು. ಇತ್ತೀಚಿನ ವರ್ಷಗಳಲ್ಲಿ ಲೇವಾದೇವಿದಾರರಿಂದ ಪಡೆದ ಸಾಲವು ಬಡ್ಡಿ ಸೇರಿ 62,000 ರೂಪಾಯಿಗಳಷ್ಟಾಗಿತ್ತು. ಅದರಲ್ಲಿ ಅರ್ಧದಷ್ಟನ್ನು ಮಾತ್ರ ಅವರಿಂದ ತೀರಿಸಲು ಸಾಧ್ಯವಾಗಿತ್ತು. ಇದರೊಂದಿಗೆ ಘರ್ವಾಲಿಗೆ (ಮನೆ ಮತ್ತು ವೇಶ್ಯಾವಾಟಿಕೆಯ ಮಾಲಕಿ) ತಿಂಗಳಿಗೆ 6,000 ರೂಪಾಯಿಗಳಂತೆ ಆರು ತಿಂಗಳಿಗೂ ಹೆಚ್ಚಿನ ಬಾಡಿಗೆ ಬಾಕಿಯಾಗಿದೆ. ಜೊತೆಗೆ ಆಕೆಯಿಂದಲೂ 7,000 ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದಾರೆ.











