"ಎಲ್ಲವೂ ಚೆನ್ನಾಗಿತ್ತು, ಯಾವುದೇ ತೊಂದರೆಗಳಿಲ್ಲದೆ ಬದುಕು ಸಹಜವಾಗಿ ನಡೆಯುತ್ತಿತ್ತು." ತನ್ನ ಕುಟುಂಬಕ್ಕೆ ಸಂಬಂಧಿಸಿದ ಕಡತಗಳು ಮತ್ತು ವರದಿಗಳ ನಡುವೆ ಕುಳಿತು ತನ್ನ ಕುಟುಂಬದ ಮೇಲೆ ಅನಿರೀಕ್ಷಿತ ಆಘಾತವೊಂದು ಎರಗುವ ಮೊದಲು ಬದುಕು ಹೇಗಿತ್ತು ಎನ್ನುವುದನ್ನು ಹೀಗೆ ವಿವರಿಸುತ್ತಾರೆ 33 ವರ್ಷದ ದಿನೇಶ್ ಚಂದ್ರ ಸುತಾರ್.
ರಾಜಾಸ್ಥಾನದ ಬನ್ಸಿ ಗ್ರಾಮದ ಸುತಾರ್ನಲ್ಲಿರುವ ಅವರ ಮನೆ ಗೋಡೆಯ ಮೇಲೆ ಮೃತ ಪತ್ನಿಯ ಫೋಟೊ ನೇತು ಹಾಕಲಾಗಿತ್ತು. ಭಾವನಾ ದೇವಿಯವರ ಅಂತಹದ್ದೇ ಚಿತ್ರ ದಿನೇಶ್ ಅವರ ಬಳಿಯಿದ್ದ ಫೈಲ್ನಲ್ಲೂ ಇತ್ತು. ಆ ಫೋಟೊ ಅವರ ಮದುವೆಯಾದ ಕೆಲವೇ ತಿಂಗಳುಗಳ ನಂತರ ಯಾವುದೋ ಸರ್ಕಾರಿ ಯೋಜನೆಯೊಂದರ ಅರ್ಜಿಯೊಂದಿಗೆ ಲಗತ್ತಿಸಲು ತೆಗೆಸಲಾಗಿತ್ತು.
ಐದು ವರ್ಷಗಳ ನಂತರವೂ ದಿನೇಶ್ ತನ್ನ ಅಲ್ಪಕಾಲದ ದಾಂಪತ್ಯದ ಕುರುಹಾದ ಈ ಕಾಗದಗಳು ಮತ್ತು ಫೋಟೊಗಳನ್ನು ನೆನಪಿಗಾಗಿ ತನ್ನೊಂದಿಗೆ ಇರಿಸಿಕೊಂಡಿದ್ದಾರೆ. ಅವರು ಎರಡು ಗಂಡು ಮಕ್ಕಳ ತಂದೆ. ದೊಡ್ಡವನು ಮೂರು ವರ್ಷದ ಚಿರಾಗ್, ಚಿಕ್ಕವ ದೇವಾನ್ಶ್ ಇವನು ಇಪ್ಪತ್ತೊಂಬತ್ತು ದಿನದ ಮಗುವಿದ್ದಾಗ ಅವನ ತಾಯಿ ಸಂತಾನ ಹರಣ ಚಿಕಿತ್ಸೆಯ ನಂತರ ಕರುಳಿನಲ್ಲಾದ ರಂಧ್ರದಿಂದಾಗಿ ಮೃತಪಟ್ಟರು. ಆಗಿನ್ನೂ ಅವನಿಗೆ ಹೆಸರಿಟ್ಟಿರಲಿಲ್ಲ. ದೇವಾನ್ಶನ ತಾಯಿಯ ಸಾವಿಗೆ ಕಾರಣವಾದ ಐವತ್ತು ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ(ಸಿಎಚ್ಸಿ) ಇರುವುದು ಬರಿ ಸದ್ರಿ ಮುನ್ಸಿಪಾಲ್ಟಿಯಲ್ಲಿ.
ದಿನೇಶ್ ಬಿಎಡ್ ಪದವೀಧರರಾಗಿದ್ದು ಬನ್ಸಿಯಿಂದ ಆರು ಕಿಲೋಮೀಟರ್ ದೂರದಲ್ಲಿರುವ ಬದ್ವಾಲ್ನ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ 15 ಸಾವಿರ ತಿಂಗಳ ಸಂಬಳವಿದೆ. ದಿನೇಶ್ ತನ್ನ ಬದುಕನ್ನು ನಾಶಗೊಳಿಸಿದ ಸರಣಿ ಘಟನೆಗಳನ್ನು ಒಂದೇ ದಾರದಲ್ಲಿ ಪೋಣಿಸಲು ಹೊರಟು ಸೋಲುತ್ತಾರೆ. ಮತ್ತೆ ಎಲ್ಲಿ ತಪ್ಪಾಗಿದೆಯೆಂದು ಹುಡುಕುತ್ತಾ ತನ್ನನ್ನೇ ತಾನು ದೂಷಿಸಿಕೊಳ್ಳುವುದರೊಂದಿಗೆ ಮುಗಿಸುತ್ತಾರೆ.
"ನಾನು ಆಪರೇಷನ್ಗೆ ಒಪ್ಪಿದ್ದು, ಡಾಕ್ಟರ್ಗಳು ಎಲ್ಲವೂ ಸರಿಯಾಗಿದೆ ಎಂದಾಗ ನಂಬಿದ್ದೇ ಇದಕ್ಕೆಲ್ಲ ಕಾರಣವಾಯಿತಾ? ನಾನು ಆಪರೇಷನ್ಗೆ ಒಪ್ಪಬಾರದಿತ್ತು ಇನ್ನಷ್ಟು ಮಾಹಿತಿ ಪಡೆಯಬೇಕಿತ್ತು ಮತ್ತು ಯಾರನ್ನೂ ನಂಬಬಾರದಿತ್ತು. ಹೀಗೆ ನಂಬಿದ್ದು ನನ್ನದೇ ತಪ್ಪು." ಹೀಗೆ ಹೇಳುತ್ತಾ ಹೋಗುತ್ತಾರೆ ದಿನೇಶ್. ಅವರ ಪತ್ನಿ ಜುಲೈ 24, 2019ರಂದು ನಿಧನರಾದ ನಂತರ ದಿನವೂ ಅವರು ಇಂತಹ ಮಾನಸಿಕ ತೊಳಲಾಟಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ.
ಜುಲೈ 25, 2019ರಂದು, ತಾನು ಸಾಯುವ ಒಂದು ತಿಂಗಳ ಮೊದಲು, 25 ವರ್ಷದ ಭಾವನಾ ದೇವಾನ್ಶ್ ಎಂಬ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಎರಡನೆಯ ಗರ್ಭಧಾರಣೆ ಮತ್ತು ಹೆರಿಗೆ, ಮೊದಲಿನದರಂತೆ ಸುರಕ್ಷಿತವಾಗಿ ನಡೆದಿತ್ತು. ಬರಿ ಸದ್ರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಕೆಯ ಎಲ್ಲಾ ತಪಾಸಣೆ, ರಿಪೋರ್ಟ್ಗಳು ಮತ್ತು ಹೆರಿಗೆಗಳು ಯಾವುದೇ ತೊಂದರೆಯಿಲ್ಲದೆ ಸಹಜ ರೀತಿಯಲ್ಲಿ ನಡೆದಿತ್ತು. ಈ ಆರೋಗ್ಯ ಕೇಂದ್ರವು ಅವರ ಗ್ರಾಮದಿಂದ 60 ಕಿ.ಮೀ ದೂರದಲ್ಲಿರುವ ಚಿತ್ತೋರ್ಗಢ್ ಜಿಲ್ಲೆಯ ಬರಿ ಸದ್ರಿ ತಾಲ್ಲೂಕಿನಲ್ಲಿದೆ.







