ಒಂದು ಕಾಲದಲ್ಲಿ ಕ್ಯಾಥರೀನ್ ಕೌರ್, ಬೋಧಿ ಮುರ್ಮು ಮತ್ತು ಮೊಹಮ್ಮದ್ ತುಳಸಿರಾಮ್ ಎನ್ನುವವರು ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದರು. ಕ್ಯಾಥಿ ಓರ್ವ ರೈತ ಮಹಿಳೆ; ಬೋಧಿ ಸೆಣಬಿನ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಮೊಹಮ್ಮದ್ ಒಬ್ಬ ದನಗಾಹಿಯಾಗಿದ್ದ. ಆ ಸಮಯದಲ್ಲಿ ನಗರದಲ್ಲಿ ಅನೇಕ ಕಲಿತ ಜನರು ಸಂವಿಧಾನದ ಕುರಿತು ಚರ್ಚಿಸುತ್ತಿದ್ದರು. ಆದರೆ ಈ ಮೂವರಿಗೆ ಈ ದೊಡ್ಡ ಪುಸ್ತಕದ ಕುರಿತು ನಿರ್ಣಯಕ್ಕೆ ಬರಲು ಕಷ್ಟವಾಗುತ್ತಿತ್ತು. ಕ್ಯಾಥಿಗೆ ಇದು ನಿಷ್ಪ್ರಯೋಜಕ ಎನ್ನಿಸಿದರೆ, ಬೋಧಿ ಬಹುಶಃ ಅದು ದೈವಿಕವಾದ ಪುಸ್ತಕವಿರಬಹುದೆಂದು ಭಾವಿಸಿದ. ಮೊಹಮ್ಮದನನ್ನು ಕಾಡಿದ ಪ್ರಶ್ನೆಯೆಂದರೆ, "ಈ ಪುಸ್ತಕದಿಂದ ನನ್ನ ಮಕ್ಕಳಿಗೆ ಅನ್ನ ಹುಟ್ಟುತ್ತದೆಯೇ?"
ಗಡ್ಡದವನೊಬ್ಬ ರಾಜನಾಗಿ ಚುನಾಯಿತನಾಗಿದ್ದಾನೆ ಎನ್ನುವ ಸಂಗತಿ ಆ ಮೂವರ ಆಸಕ್ತಿಯನ್ನು ಕೆರಳಿಸುವಲ್ಲಿ ವಿಫಲವಾಯಿತು. "ಅಷ್ಟಕ್ಕೂ ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವಷ್ಟು ಸಮಯವಾದರೂ ಯಾರ ಬಳಿಯಿತ್ತು?" ನಂತರದ ದಿನಗಳಲ್ಲಿ ಮಳೆ ಬಾರದೆ ಹೋಯಿತು. ಸಾಲ ಬೆಳೆಯತೊಡಗಿತು. ಈ ನಡುವೆ ಕ್ಯಾತರೀನ್ ತನ್ನದೇ ಹೆಸರನ್ನು ಹೊಂದಿರುವ ಕೀಟನಾಶಕದ ಬಾಟಲಿ ಕೊಂಡಳು. ಒಂದು ದಿನ ಸೆಣಬಿನ ಗಿರಣಿ ದಿವಾಳಿಯಾಯಿತು. ಪ್ರತಿಭಟನಾ ನಿರತ ಕಾರ್ಮಿಕರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು ಮತ್ತು ಬೋಧಿ ಮುರ್ಮು ಕಾರ್ಮಿಕರನ್ನು ಸಂಘಟಿಸಿದ್ದಕ್ಕಾಗಿ ಅವರ ಮೇಲೆ ಭಯೋತ್ಪಾದನೆಯ ಆರೋಪಗಳನ್ನು ಹೊರಿಸಲಾಯಿತು. ಕೊನೆಗೆ ಮೊಹಮ್ಮದ್ ತುಳಸಿರಾಮ್ ಸರದಿ ಬಂದಿತು. ಒಂದು ಒಳ್ಳೆಯ ಸನಾತನ ಸಂಜೆಯಂದು ಎರಡು ಕಾಲಿನ ಕಡಸುಗಳು ಅವನ ಮನೆಯ ಮುಂದೆ ಬಂದು "ಜೈ ಶ್ರೀ ರಾಮ್, ಜೈ ಶ್ರೀರಾಮ್" ಎಂದು ಕೂಗತೊಡಗಿದವು.
ರಾಕ್ಷಸ ಘೋಷಣೆಗಳ ನಡುವೆ, ಎಲ್ಲೋ ಕೆಲವು ಪುಟಗಳು ಸದ್ದು ಮಾಡಿದವು, ನೀಲಿ ಸೂರ್ಯ ಉದಯಿಸಿದನು, ತತ್ತರಿಸುತ್ತಿರುವ ಪಿಸುಮಾತು ಕೇಳಿಸಿತು:
"ನಾವು, ಭಾರತದ ಜನರು, ಗಂಭೀರವಾಗಿ ನಿರ್ಧರಿಸಿದಂತೆ...


