"ನಮ್ಮ ಹಳ್ಳಿಯಲ್ಲಿ ಅಥವಾ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವುದೇ ಕೆಲಸವಿಲ್ಲ" ಎನ್ನುತ್ತಾರೆ ಜಂಗಮ್ ಧನಲಕ್ಷ್ಮಿ. "ಇರುವ ಕೃಷಿ ಭೂಮಿಯನ್ನೆಲ್ಲ ಮೀನಿನ ಕೆರೆಗಳಾಗಿ ಪರಿವರ್ತಿಸಲಾಗಿದೆ."
40 ವರ್ಷದ ಧನಲಕ್ಷ್ಮಿ (ಮೇಲಿನ ಮುಖ್ಯ ಚಿತ್ರದಲ್ಲಿ), ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ತಮಿರಿಸ ಗ್ರಾಮದಲ್ಲಿ ಸುಮಾರು 450 ಜನರಿರುವ ಅಂಕೆನಗುಡೆಮ್ ಎನ್ನುವ ದಲಿತ ಕುಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಅವರು ತನ್ನ ದೈನಂದಿನ ಕೂಲಿಯಾದ 200 ರೂ.ಗಳ ನಾಲ್ಕನೇ ಒಂದು ಭಾಗವನ್ನು ಒಂದು ಆಟೋರಿಕ್ಷಾ ಬಾಡಿಗೆಗೆ ಖರ್ಚು ಮಾಡುತ್ತಾರೆ, ಕೃಷಿ ಕೆಲಸದ ಸ್ಥಳಗಳಿಗೆಂದು ದಿನಕ್ಕೆ ಸುಮಾರು 60 ಕಿಲೋಮೀಟರ್ ದೂರವನ್ನು ಪ್ರಯಾಣಿಸುತ್ತಾರೆ.
"ಇಷ್ಟೊಂದು ಪ್ರಯಾಣದ ನಂತರವೂ, ನಾವು ವರ್ಷಕ್ಕೆ ಸುಮಾರು 30 ದಿನಗಳಷ್ಟು ಮಾತ್ರವೇ ಕೆಲಸವನ್ನು ಪಡೆಯುತ್ತೇವೆ – ಏಪ್ರಿಲ್ ತಿಂಗಳಿನಲ್ಲಿ 10 ದಿನಗಳು, ಆಗಸ್ಟಿನಲ್ಲಿ 10 ದಿನಗಳು ಮತ್ತು ಡಿಸೆಂಬರಿನಲ್ಲಿ ಇನ್ನೂ 10 ದಿನಗಳು," ಎಂದು ಧನಲಕ್ಷ್ಮಿ ಅವರ ನೆರೆಹೊರೆಯವರಾದ 60 ವರ್ಷದ ಗಂಟಾ ಸರೋಜಾ ಹೇಳುತ್ತಾರೆ. ಈ ಊರಿನ ಜನರು ಕೃಷಿ ಕೆಲಸಗಳಿಂದ ವಾರ್ಷಿಕ 5,000-6,000 ರೂ.ಗಳನ್ನು ಮಾತ್ರ ಗಳಿಸಬಹುದಾದ್ದರಿಂದ, ಅನೇಕರು ವಲಸೆ ಹೋಗಿದ್ದಾರೆ. "ಸುಮಾರು 10 ವರ್ಷಗಳ ಹಿಂದೆ, ಈ ಗ್ರಾಮದಲ್ಲಿ 150 ಕುಟುಂಬಗಳು ಇದ್ದವು. ಈಗ, ಕೇವಲ 60 ಕುಟುಂಬಗಳಷ್ಟೇ ಇವೆ" ಎಂದು ಸರೋಜಾ ಅಂದಾಜಿಸುತ್ತಾರೆ. ಕೆಲವರು ಗುಡಿವಾಡಾ, ವಿಜಯವಾಡ ಮತ್ತು ಹೈದರಾಬಾದ್ ಕಡೆ ವಲಸೆ ಹೋಗಿದ್ದಾರೆ, ಮತ್ತೆ ಕೆಲವರು ಕೆಲಸ ಹುಡುಕಿಕೊಂಡು ತಮ್ಮ ಅತ್ತೆ-ಮಾವಂದಿರ ಹಳ್ಳಿಗಳಿಗೆ ಹೋಗಿದ್ದಾರೆ.
ಸುಮಾರು 36,000 ಜನಸಂಖ್ಯೆಯನ್ನು ಹೊಂದಿರುವ ನಂದಿವಾಡಾ ಮಂಡಲದಲ್ಲಿ ಅಂಕೆನಗುಡೆಮ್ ಇದೆ. ನಂದಿವಾಡಾವು ಆಂಧ್ರಪ್ರದೇಶದಲ್ಲಿಯೇ ಎರಡನೇ ಅತಿದೊಡ್ಡ ತಲಾ ಆದಾಯವನ್ನು ಹೊಂದಿದೆ (ವಿಶಾಖಪಟ್ಟಣಂ ಜಿಲ್ಲೆಯ ಅಚ್ಚುತಪುರಂ ಮಂಡಲದ ನಂತರ) ಏಕೆಂದರೆ ಇಲ್ಲಿ ಮೀನು ಕೆರೆಗಳಿಂದ ಹೆಚ್ಚಿನ ಆದಾಯ ಬರುತ್ತದೆ. ಇಲ್ಲಿನ ಮೀನುಗಳನ್ನು ಅಕ್ವಾ ಸಂಸ್ಕರಣಾ ಘಟಕಗಳಲ್ಲಿ ಬಳಸಲಾಗುತ್ತದೆ ಮತ್ತು ನಂತರ ಮುಖ್ಯವಾಗಿ ಪೂರ್ವ ಏಷ್ಯಾ ಮತ್ತು ಯುರೋಪಿಯನ್ ದೇಶಗಳಿಗೆ ರಫ್ತು ಮಾಡಲಾಗುತ್ತದೆ. 2014-15ರಲ್ಲಿ, ರಾಜ್ಯದ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಂಕಿಅಂಶಗಳ ಪ್ರಕಾರ, ನಂದಿವಾಡದಲ್ಲಿ ವಾರ್ಷಿಕ ತಲಾ ಆದಾಯವು 308,371 ರೂ.ಗಳಾಗಿತ್ತು - ಅದೇ ವರ್ಷ ಕೃಷ್ಣಾ ಜಿಲ್ಲೆಯ ಒಟ್ಟಾರೆ ಆದಾಯವು 140,628 ರೂ. ಆಗಿತ್ತು.






