ಶೀತಲ್ ವಾಘ್ಮರೆ ಅವರು ಒಳಬರುವ ಫೋನ್ ಕರೆಯ ಶಬ್ದಕ್ಕೆ ಏಕಾಏಕಿ ಗಾಬರಿಯಾಗುತ್ತಾರೆ. ಹಲವು ದಿನಗಳವರೆಗೆ, ಅವರು ತಪ್ಪಿಸಲು ಬಯಸಿದ ಮೈಕ್ರೋ ಫೈನಾನ್ಸ್ ಇನ್ಸ್ಟಿಟ್ಯೂಶನ್ (MFI)ನ ಸಾಲ ವಸೂಲಿ ಪ್ರತಿನಿಧಿಯ ಸಂಖ್ಯೆಯನ್ನು ಹೊರತುಪಡಿಸಿ ಬೇರೆ ಯಾವುದೇ ಸಂಖ್ಯೆ ಇದ್ದಲ್ಲಿ ಆಗ ಅವರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು. "ಅವರು ಕೊರೊನಾ ವೈರಸ್ಗೆ ಹೆದರುವುದಿಲ್ಲ" ಎಂದು 31 ವರ್ಷದ ಶೀತಲ್ ಹೇಳುತ್ತಾರೆ. ಪುಣ್ಯಕ್ಕೆ ಕಳೆದ ಒಂದು ವಾರದಿಂದ ಕರೆಗಳು ಕಡಿಮೆಯಾಗಿವೆ. ಅದು ಏಕೆಂದು ಇದುವರೆಗೆ ಶೀತಲ್ ಅವರಿಗೆ ತಿಳಿದಿಲ್ಲ. ಆದರೆ 'ಅವು ಮತ್ತೆ ಶುರುವಾಗುತ್ತವೆ' ಎಂದು ಅವರು ಹೇಳುತ್ತಾರೆ.
ವಾಘ್ಮರೆಯವರ ಕುಟುಂಬ ಸದಸ್ಯರು ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಾರೆ ಮತ್ತು ಮಹಾರಾಷ್ಟ್ರದ ಮರಾಠವಾಡದ ಕೃಷಿ ಪ್ರದೇಶದಲ್ಲಿರುವ ಒಸ್ಮಾನಾಬಾದ್ನಲ್ಲಿ ವಾಸಿಸುತ್ತಿದ್ದಾರೆ. ಜುಲೈ 2019ರಲ್ಲಿ, ಶೀತಲ್ ಅವರ ತಾಯಿ ಮಂಗಳಾ ಅವರು ಜನಲಕ್ಷ್ಮಿ ಫೈನಾನ್ಶಿಯಲ್ ಸರ್ವಿಸಸ್ ಎಂಬ ಕಿರು ಹಣಕಾಸು ಸಂಸ್ಥೆಯಿಂದ 60,000 ಸಾಲವನ್ನು ತೆಗೆದುಕೊಂಡಿದ್ದಾರೆ. "ನಾವು ಹೊಲಿಗೆ ಯಂತ್ರವನ್ನು ಖರೀದಿಸಿದೆವು, ಈಗ ನಾನು ಬ್ಲೌಸ್ ಹೊಲಿಯುವ, ಕಸೂತಿ ಹಾಕುವ ಕೆಲಸವನ್ನು ಮಾಡುತ್ತಿದ್ದೇನೆ.ನನ್ನ ಪತಿ ಮತ್ತು ನನ್ನ ಮಗ ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ನಮಗೆ ನಮ್ಮದೇ ಆದ ಸ್ವಂತ ಜಮೀನು ಇಲ್ಲ” ಎಂದು 53 ವರ್ಷದ ಮಂಗಳಾ ಹೇಳುತ್ತಾರೆ.
ಅಂದಿನಿಂದ, ವಾಘ್ಮರೆ ಕುಟುಂಬವು ಶೇಕಡಾ 24 ಬಡ್ಡಿ ದರದ ಸಾಲದ ಮೇಲೆ ತಿಂಗಳಿಗೆ 3,230 ರೂ ದಂತೆ ಒಂದು ಕಂತನ್ನೂ ತಪ್ಪಿಸಿಲ್ಲ. "ಆದರೆ ಲಾಕ್ಡೌನ್ನಿಂದಾಗಿ ನಮ್ಮಲ್ಲಿ ಈಗ ಯಾವುದೇ ಸಂಪಾದನೆಯಿಲ್ಲ" ಎಂದು ಶೀತಲ್ ಹೇಳುತ್ತಾರೆ. "ನಮ್ಮ ಸುತ್ತಮುತ್ತ ಇರುವವರ ಬಳಿಯೂ ಹಣವಿಲ್ಲ. ಲಾಕ್ಡೌನ್ ಸಮಯದಲ್ಲಿ ಪ್ರತಿಯೊಬ್ಬರ ಖರೀದಿ ಸಾಮರ್ಥ್ಯ ಕಡಿಮೆಯಾಗಿದೆ (ಇದು ಮಾರ್ಚ್ 23ರಂದು ಮಹಾರಾಷ್ಟ್ರದಲ್ಲಿ ಆರಂಭವಾಯಿತು). ಯಾರೂ ನಮ್ಮನ್ನು ಕಾರ್ಮಿಕರನ್ನಾಗಿ ನೇಮಿಸಿಕೊಳ್ಳುವುದಿಲ್ಲ, ಮತ್ತು ಯಾರಿಗೂ ಕೂಡಾ ಬಟ್ಟೆಗಳನ್ನು ಹೊಲಿಸಿಕೊಳ್ಳುವ ಸಾಮರ್ಥ್ಯವೂ ಇಲ್ಲ” ಎಂದು ಹೇಳುತ್ತಾರೆ.
ಆದರೆ ಈ ಯಾವ ಸಂದರ್ಭಗಳನ್ನು ಗಣನೆಗೆ ತೆಗೆದುಕೊಳ್ಳದೆ ಎಮ್ಎಫ್ಐ ಸಾಲಗಾರರಿಗೆ ಫೋನ್ ಮಾಡುವುದು ಮತ್ತು ಅವರಿಗೆ ಕಂತುಗಳನ್ನು ಪಾವತಿಸಬೇಕೆಂದು ಒತ್ತಾಯಿಸುವ ಕಾರ್ಯ ಮಾತ್ರ ನಿಂತಿಲ್ಲ. "ಅವರು ಏನೇ ಆದರೂ ನಮಗೆ ಪಾವತಿಸಲು ಹೇಳುತ್ತಾರೆ. ನಿಮಗೆ ಬೇಕಾದುದನ್ನು ಮಾಡಿ, ಆದರೆ ತಿಂಗಳ ಕೊನೆಯಲ್ಲಿ ಪಾವತಿಸಿ ಎಂದು ಕಿರು ಬಂಡವಾಳ ಸಂಸ್ಥೆ ಪ್ರತಿನಿಧಿಗಳು ಹೇಳುತ್ತಾರೆ” ಎಂದು ಶೀತಲ್ ವಿವರಿಸಿದರು.





