ಅವರು ಮಾತನಾಡಲಾರಂಭಿಸಿದರು, ಆದರೆ ಮಧ್ಯದಲ್ಲೇ ನಿಲ್ಲಿಸಿದರು. ನಿಟ್ಟರುಸಿರನ್ನಿಟ್ಟು ಮತ್ತೆ ಮಾತನಾಡಲು ಯತ್ನಿಸಿದರು. ಆದರೆ ಅವರ ಮಾತು ಕಂಪಿಸುತ್ತಿತ್ತು. ಅವರು ಕೆಳಗೆ ನೋಡಿದರು, ಮಾತನಾಡುವಾಗ ಅವರ ಗಲ್ಲ ನಡುಗುತ್ತಿತ್ತು. ಕಳೆದ ಒಂದು ವರ್ಷದಿಂದ ಅನಿತಾ ಸಿಂಗ್ ಅತ್ಯಂತ ಸಾಹಸದಲ್ಲಿ ಬದುಕಿದ್ದರು. ಆದರೆ ಅವರ ಪತಿಯ ನೆನಪು ಮಾತ್ರ ಚಿತ್ತವನ್ನು ಕಲಕುತ್ತಿತ್ತು.
ಅನಿತಾ ಅವರ ಪತಿ 42 ವರ್ಷದ ಜೈಕರಣ್ ಸಿಂಗ್, ಉತ್ತರ ಪ್ರದೇಶದ ಬಲಂದ್ಶಹರ್ ನಗರದಿಂದ 20 ಕಿ.ಮೀ. ದೂರದಲ್ಲಿರುವ ಲಖಾವೊತಿ ಗ್ರಾಮದ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರು. 2021ರ ಏಪ್ರಿಲ್ ತಿಂಗಳಲ್ಲಿ ಅವರಲ್ಲಿ ಕೋವಿಡ್-19 ರೋಗ ಲಕ್ಷಣ ಕಂಡುಬಂದಿತ್ತು. “ಅವರಲ್ಲಿ ಕೆಮ್ಮು, ಚಳಿ ಮತ್ತು ಜ್ವರ ಕಾಣಿಸಿಕೊಂಡಿತ್ತು,” ಎಂದು ನಗರದಲ್ಲಿ ಅವರನ್ನು ಭೇಟಿ ಮಾಡಲು ಹೋದಾಗ ಅನಿತಾ ಹೇಳಿದರು. “ಎರಡನೇ ಅಲೆ ವ್ಯಾಪಕವಾಗಿರುವಾಗಲೂ ಶಿಕ್ಷಕರಿಗೆ ಅವರ ಶಾಲೆಗೆ ಹೋಗಿ ಪಾಠ ಮಾಡಲು ಸೂಚಿಸಲಾಗಿತ್ತು. ಆ ಅವಧಿಯ ದಿನಗಳಲ್ಲಿ ಅವರಿಗೆ ಸೋಕು ತಗಲಿರಬೇಕು,”
2021ರ ಏಪ್ರಿಲ್ 20ರಂದು ಜೈಕರಣ್ಗೆ ಕೊರೋನಾ ವೈರಸ್ ತಗಲಿರುವುದು ಖಚಿತವಾಗಿತ್ತು. ಅವರು ಉಸಿರಾಡಲಾಗದೆ ಏದುಸಿರು ಬಿಡಲಾರಂಭಿಸಿದಾಗ ನಗರದ ಯಾವುದೇ ಆಸ್ಪತ್ರೆಯಲ್ಲಿ ಆಮ್ಲಜನಕದ ಹಾಸಿಗೆ ಲಭ್ಯವಿರಲಿಲ್ಲ, “ನಾನು ಹಲವು ಆಸ್ಪತ್ರೆಗಳಲ್ಲಿ ವಿನಂತಿ ಮಾಡಿಕೊಂಡೆ, ಆದರೆ ಇಲ್ಲವೆಂಬುದೇ ಉತ್ತರವಾಗಿತ್ತು,” ಎಂದು ಅನಿತಾ ಹೇಳಿದರು. “ಅವರ ಆರೋಗ್ಯ ತೀವ್ರವಾಗಿ ಹದಗೆಡುತ್ತಿರುವುದರಿಂದ ನಾವು ಹಲವು ಬಾರಿ ದೂರವಾಣಿ ಕರೆಗಳನ್ನು ಮಾಡಿದೆವು. ಆದರೆ ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ನಾವು ಮನೆಯಲ್ಲೇ ಅವರಿಗೆ ಚಿಕಿತ್ಸೆ ನೀಡಬೇಕಾಯಿತು,”
ಸ್ಥಳೀಯ ವೈದ್ಯರು ಜೈಕರಣ್ ಅವರಿಗೆ ಕೆಮ್ಮು ಮತ್ತು ಜ್ವರಕ್ಕಾಗಿ ಚಿಕಿತ್ಸೆ ನೀಡಿದರು. ಹೇಗಾದರೂ ಮಾಡಿ ಅನಿತಾ ಅವರ ಸಂಬಂಧಿಕರು ಒಂದು ಆಮ್ಲಜನಕದ ಸಿಲಿಂಡರನ್ನು ವ್ಯವಸ್ಥೆ ಮಾಡಿದರು. “ನಮಗೆ ಅದನ್ನು ಹೇಗೆ ಬಳಸಬೇಕೆಂಬುದೂ ಗೊತ್ತಿರಲಿಲ್ಲ, ನಾವೇ ಸ್ವತಃ ಊಹಿಸಿಕೊಂಡು ಬಳಸಿದೆವು,” ಎಂದ ಅವರು ಹೇಳಿದರು, “ಆದರೆ ನಾವು ಆಸ್ಪತ್ರೆ ಹಾಸಿಗೆಯ ಹುಡುಕಾಟದಲ್ಲಿದ್ದೆವು,”
ಸಾಂಕ್ರಾಮಿಕ ರೋಗವು ಭಾರದಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮಗಳು ಮತ್ತು ಸಣ್ಣ ಪಟ್ಟಣಗಳಲ್ಲಿನ ಸಾರ್ವಜನಿಕ ಆರೋಗ್ಯ ಮೂಲಭೂತ ಸೌಲಭ್ಯಗಳು ಕುಸಿದು ಬಿದ್ದಿರುವುದನ್ನು ಬಯಲು ಮಾಡಿದೆ. ದೇಶದ ಜಿಡಿಪಿ (2015-16ರಲ್ಲಿ) ಯಲ್ಲಿ ಆರೋಗ್ಯದ ಬಗ್ಗೆ ಸಾರ್ವಜನಿಕ ವೆಚ್ಚ ಕೇವಲ 1.02 ಪ್ರತಿಶತ, ಜನರು ಅವಲಂಬಿಸುವಷ್ಟು ದೊಡ್ಡ ಪ್ರಮಾಣ ಇದಾಗಿಲ್ಲ. 2017ರ ರಾಷ್ಟ್ರೀಯ ಆರೋಗ್ಯ ವಿವರದ ಪ್ರಕಾರ ದೇಶದಲ್ಲಿ 10,189 ಜನರಿಗೆ ಒಬ್ಬ ಸರಕಾರಿ ಅಲೋಪಥಿ ಡಾಕ್ಟರ್ ಇದ್ದಾರೆ, ಮತ್ತು ಪ್ರತಿ 90,343 ಜನರಿಗೆ ಒಂದು ಸಾರ್ವಜನಿಕ ಆಸ್ಪತ್ರೆ ಇದೆ.







