“21 ವರ್ಷಗಳ ನನ್ನ ರೈತಾಪಿ ಜೀವನದಾಗ ನಾನೆಂದು ಇಂತಾ ಕಷ್ಟ ಎದುರಿಸಿಲ್ಲ ನೋಡ್ರಿ" ಎಂದು ಚಿತ್ತಾರಕಾಡು ಗ್ರಾಮದ ಕಲ್ಲಂಗಡಿ ಕೃಷಿಕ ಎ. ಸುರೇಶ್ ಕುಮಾರ್ ಹೇಳುತ್ತಿದ್ದರು. ಈ ಪ್ರದೇಶದ ಇತರ ರೈತರಂತೆ, 40 ವರ್ಷದ ಸುರೇಶ್ ಕುಮಾರ್ ಪ್ರಮುಖವಾಗಿ ಭತ್ತವನ್ನು ಬೆಳೆಯುತ್ತಾರೆ, ಆದರೆ ತಮ್ಮ ಐದು ಎಕರೆ ಜಮೀನಿನಲ್ಲಿ ಹಾಗೂ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಚಿತ್ತಮೂರ್ ಬ್ಲಾಕ್ನಲ್ಲಿರುವ 1,859 ಜನಸಂಖ್ಯೆಯನ್ನು ಹೊಂದಿರುವ ತಮ್ಮ ಹಳ್ಳಿಯಲ್ಲಿ ಸ್ನೇಹಿತರು ಮತ್ತು ಕುಟುಂಬದಿಂದ 18.5 ಎಕರೆಗಳನ್ನು ಗುತ್ತಿಗೆ ಪಡೆದಿರುವ ಜಮೀನಿನಲ್ಲಿ ಚಳಿಗಾಲದ ವೇಳೆ ಕಲ್ಲಂಗಡಿಯನ್ನು ಬೆಳೆಯುತ್ತಾರೆ.
“ಕಲ್ಲಂಗಡಿಗಳು 65 ರಿಂದ 70 ದಿನಗಳಲ್ಲಿ ಸಿದ್ಧವಾಗುತ್ತವೆ.ಮಾರ್ಚ್ 25 ರಂದು ಲಾಕ್ಡೌನ್ ಘೋಷಿಸಿದಾಗ ತಮಿಳುನಾಡು, ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಹಣ್ಣುಗಳನ್ನು ಕಟಾವು ಮಾಡಲು ಮತ್ತು ಕಳುಹಿಸಲು ನಾವೆಲ್ಲರೂ ಸಿದ್ಧವಾಗಿದ್ದೆವು ಎಂದು ಅವರು ಹೇಳಿದರು. "ಈಗ ಅವು ಕೊಳೆಯುವ ಹಂತದಲ್ಲಿವೆ. ನಾವು ಸಾಮಾನ್ಯವಾಗಿ ಖರೀದಿದಾರರಿಂದ ಪ್ರತಿ ಟನ್ಗೆ 10,000,ರೂ ಪಡೆಯುತ್ತೇವೆ, ಆದರೆ ಈ ವರ್ಷ ಯಾರೂ ಕೂಡ 2,000,ರೂ ಗಿಂತ ಹೆಚ್ಚಿಗೆ ನೀಡುತ್ತಿಲ್ಲ" ಎಂದರು.
ತಮಿಳುನಾಡಿನಲ್ಲಿ, ಕಲ್ಲಂಗಡಿ ಬೆಳೆಯನ್ನು ತಮಿಳು ಕ್ಯಾಲೆಂಡರ್ ತಿಂಗಳುಗಳಾದ ಮಾರ್ಗಜಿ ಮತ್ತು ಥಾಯ್ ನಲ್ಲಿ ಮಾತ್ರ ನಾಟಿ ಮಾಡಲಾಗುತ್ತದೆ, ಇದು ಸರಿಸುಮಾರು ಡಿಸೆಂಬರ್ ನಿಂದ ಫೆಬ್ರವರಿವರೆಗಿನ ಅವಧಿಗೆ ಅನುಗುಣವಾಗಿರುತ್ತದೆ. ಈ ಋತುವಿನಲ್ಲಿ ಇದು ಈ ಪ್ರದೇಶದಲ್ಲಿ ಉತ್ತಮವಾಗಿ ಬೆಳೆಯುತ್ತದೆ, ಮತ್ತು ಉರಿಯುವ ದಕ್ಷಿಣ ಬೇಸಿಗೆ ಆರಂಭವಾದಾಗ ಬೆಳೆಯು ಕೊಯ್ಲಿಗೆ ಸಿದ್ಧವಾಗುತ್ತದೆ.ಕಲ್ಲಂಗಡಿ ಉತ್ಪಾದಿಸುವ ರಾಜ್ಯಗಳಲ್ಲಿಯೇ ತಮಿಳುನಾಡಿಗೆ ಎಂಟನೇ ಸ್ಥಾನವಿದೆ - ಇಲ್ಲಿ 162.74 ಸಾವಿರ ಮೆಟ್ರಿಕ್ ಟನ್ ಹಣ್ಣುಗಳನ್ನು 6.93 ಸಾವಿರ ಹೆಕ್ಟೇರ್ ಭೂ ಪ್ರದೇಶದಲ್ಲಿ ಉತ್ಪಾದಿಸಲಾಗುತ್ತದೆ.
“ನನ್ನ ಹೊಲದ ವಿವಿಧ ಭಾಗಗಳಲ್ಲಿ ಎರಡು ವಾರಗಳ ಅಂತರದಲ್ಲಿ ಪಕ್ವ ಬೆಳೆಗಳನ್ನು ಬೆಳೆಯುವ ರೀತಿಯಲ್ಲಿ ನಾನು ನೆಟ್ಟಿದ್ದೇನೆ. ಅವು ಸಿದ್ಧವಾದ ಕೆಲವು ದಿನಗಳಲ್ಲಿ ನೀವು ಕೊಯ್ಲು ಮಾಡದಿದ್ದರೆ, ಹಣ್ಣು ಹಾಳಾಗುತ್ತದೆ,” ಎಂದು ಕುಮಾರ್ (ಮೇಲಿನ ಕವರ್ ಫೋಟೋದಲ್ಲಿ ಇರುವವರು ) ಹೇಳುತ್ತಾರೆ. "ನಮಗೆ ಲಾಕ್ಡೌನ್ ಬಗ್ಗೆ ಮಾಹಿತಿ ಇರಲಿಲ್ಲ, ಹಾಗಾಗಿ ನನ್ನ ಮೊದಲ ಫಸಲು ಸಿದ್ಧವಾದಾಗ [ಮಾರ್ಚ್ ಕೊನೆಯ ವಾರದಲ್ಲಿ], ಲೋಡ್ ಸಾಗಿಸಲು ಯಾವುದೇ ಖರೀದಿದಾರರು ಅಥವಾ ಟ್ರಕ್ ಚಾಲಕರು ತಯಾರಿರಲಿಲ್ಲ.” ಎಂದು ಹೇಳಿದರು.
ಕುಮಾರ್ ಅಂದಾಜಿನ ಪ್ರಕಾರ ಚಿತ್ತಮೂರ್ ಬ್ಲಾಕ್ನಲ್ಲಿ ಕನಿಷ್ಠ 50 ಕಲ್ಲಂಗಡಿ ಬೆಳೆಗಾರರು ಇದ್ದಾರೆ. ಅನೇಕರು ಈಗ ತಮ್ಮ ಹಣ್ಣುಗಳನ್ನು ಕೊಳೆಯಲು ಬಿಡುತ್ತಾರೆ ಅಥವಾ ಫಸಲನ್ನು ತೀರಾ ಕಡಿಮೆ ಬೆಲೆಗೆ ಮಾರುತ್ತಾರೆ.






