“ಇರಾನಿನ ಭಾರತೀಯ ರಾಯಭಾರ ಕಛೇರಿಯು ನಮ್ಮ ಕೋವಿಡ್-19 ತಪಾಸಣೆಯ ವರದಿಯ ಸಂದೇಶಗಳನ್ನು ವಾಟ್ಸ್ಆಪ್ ಮೂಲಕ ರವಾನಿಸಿತು. ಇದರಲ್ಲಿ ಕೇವಲ ಪಾಸ್ಪೋರ್ಟ್ ಸಂಖ್ಯೆ ಮತ್ತು ನಮ್ಮ ತಪಾಸಣೆಯು ಪಾಸಿಟಿವ್ ಅಥವಾ ನೆಗೆಟಿವ್ ಆಗಿದೆಯೇ ಎಂಬುದನ್ನಷ್ಟೇ ತಿಳಿಸಲಾಗಿತ್ತು. ಇದು, ನಾವು ತೇರ್ಗಡೆಯಾಗಿದ್ದೇವೆಯೇ ಇಲ್ಲವೇ ಎಂದು ತಿಳಿಯಲು, ಪರೀಕ್ಷಾ ಫಲಿತಾಂಶದ ಹಾಳೆಯಲ್ಲಿ ನಮ್ಮ ಕ್ರಮಸಂಖ್ಯೆಯನ್ನು ಹುಡುಕಿದಂತಿತ್ತು. ಇಲ್ಲಿಯವರೆಗೂ ನಮಗೆ ಯಾವುದೇ ನಿರ್ದಿಷ್ಟ ವರದಿಯನ್ನು ನೀಡಿರುವುದಿಲ್ಲ” ಎಂದರು, ಶಬ್ಬೀರ್ ಹುಸೇನ್ ಹಕಿಮಿ. ಕೇವಲ ಪಾಸಿಟಿವ್ ಅಥವಾ ನೆಗೆಟಿವ್ ಎಂಬುದನ್ನಷ್ಟೇ ಹೇಳಲಾಗಿದೆ. ಕಾರ್ಗಿಲ್, ಲಡಾಖ್ನ ನಿವಾಸಿಯಾದ 29ರ ವಯಸ್ಸಿನ ಈತ, ಇರಾನಿನ ಗೊಮ್ ನಗರದಿಂದ ನಮ್ಮೊಂದಿಗೆ ಮಾತನಾಡುತ್ತಿದ್ದರು. ಶಿಯಾ ಮುಸ್ಲಿಮರ ಪವಿತ್ರ ಪುಣ್ಯಕ್ಷೇತ್ರಗಳಿಗೆ ತಮ್ಮ ಹೆತ್ತವರೊಂದಿಗೆ ಈ ವರ್ಷದ ಜನವರಿಯಲ್ಲಿ ಇವರು ಯಾತ್ರೆ ಹೊರಟಿದ್ದರು.
ಇಮಾಮ್ ಅಲಿ, ಹುಸೇನ್ ಮತ್ತು ಪ್ರವಾದಿ ಮೊಹಮ್ಮದ್ ಅವರ ಕುಟುಂಬದ ಇತರರ ತೀರ್ಥಕ್ಷೇತ್ರಗಳಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲು ಭಾರತದಿಂದ ಸಾವಿರಾರು ಶಿಯಾ ಮುಸ್ಲಿಮರು ಪ್ರತಿ ವರ್ಷವೂ ಇರಾನಿಗೆ ತೆರಳುತ್ತಾರೆ. ಮುಖ್ಯವಾಗಿ, ಜಮ್ಮು, ಕಾಶ್ಮೀರ, ಲಡಾಖ್ ಮತ್ತು ಮಹಾರಾಷ್ಟ್ರದ ಸುಮಾರು 1,100 ಜನರು, ಈ ವರ್ಷ ಇರಾನಿನ ಗೊಮ್ ನಗರದಲ್ಲಿ ಸಿಲುಕಿದ್ದಾರೆ. ಇರಾನಿನಲ್ಲಿ ಕೊರೊನಾ ವೈರಸ್ ಕಂಡುಬಂದ ನಂತರ ಸೋಂಕು ಹರಡುವ ಭಯವು ಹೆಚ್ಚಾದ ಕಾರಣ, ಭಾರತಕ್ಕೆ ಮರುಪ್ರಯಾಣವನ್ನು ಕೈಗೊಳ್ಳುವ ವಿಮಾನಗಳನ್ನು ರದ್ದುಪಡಿಸಲಾಗಿದೆ.
“ಈ ವರ್ಷದ ಮಾರ್ಚ್ 2ರಂದು ನಮ್ಮ ಮೂಗಿನ ಲೋಳೆಯ ಮಾದರಿಯ ಸಂಗ್ರಹಣೆಯು ಆರಂಭಗೊಂಡು, ಮಾರ್ಚ್ 10ರವರೆಗೂ ಮುಂದುವರಿಯಿತು. ಈ ಮಾದರಿಗಳನ್ನು ತಪಾಸಣೆಗಾಗಿ ಮೊದಲು ಪುಣೆಗೆ ಕಳುಹಿಸಿ, ನಂತರ ಇಲ್ಲಿ ಸಿಲುಕಿರುವ ಪ್ರತಿಯೊಬ್ಬರನ್ನೂ ವಿಮಾನದಲ್ಲಿ ಭಾರತಕ್ಕೆ ವಾಪಸ್ಸು ಕರೆದೊಯ್ಯಲಾಗುತ್ತದೆಯೆಂದು ನಮಗೆ ಆಶ್ವಾಸನೆ ನೀಡಲಾಗಿತ್ತು” ಎಂಬುದಾಗಿ ಶಬ್ಬೀರ್ ತಿಳಿಸಿದರು. 78 ಯಾತ್ರಾರ್ಥಿಗಳ ಮೊದಲ ತಪಾಸಣಾ ಫಲಿತಾಂಶವನ್ನು ನೆಗೆಟಿವ್ ಎಂದು ತಿಳಿಸಿ, ಮಾರ್ಚ್ 10ರಂದು IAF C-17 ವಿಮಾನದಲ್ಲಿ ಭಾರತಕ್ಕೆ ಕರೆದೊಯ್ಯಲು ಅವರೆಲ್ಲರನ್ನೂ ಟೆಹರಾನ್ಗೆ ಕರೆಯಲಾಯಿತು.
“ಅನಿರೀಕ್ಷಿತವಾಗಿ, ಯಾವುದೇ ಕಾರಣಗಳನ್ನು ನೀಡದೆ, ಅವರಲ್ಲಿನ 19 ಜನರುನ್ನು ಗೊಮ್ಗೆ ವಾಪಸ್ಸು ಕಳುಹಿಸಲ್ಪಟ್ಟರು. ಇದರ ನಂತರ, ಲಡಾಖ್ನ 254 ಯಾತ್ರಿಗಳ ತಪಾಸಣೆಯು ಪಾಸಿಟಿವ್ ಎಂಬುದಾಗಿ ತಿಳಿಸಲಾಯಿತು. ಭಾರತೀಯ ರಾಯಭಾರ ಕಛೇರಿಯು ಪಾಸಿಟಿವ್ ಎಂದು ತಿಳಿಸಿದ ಜನರಿಗೆ ಮಾಮೂಲಿ ಮಾಸ್ಕ್ಅನ್ನು ಸಹ ಒದಗಿಸಲಿಲ್ಲ. ಇನ್ನು ಪ್ರತ್ಯೇಕವಾಸವಂತೂ ದೂರವೇ ಉಳಿಯಿತು. ಇದರ ಬದಲಾಗಿ, ನಮ್ಮಲ್ಲಿನ ಕೆಲವರು ಸ್ವಯಂಸೇವಕರಾಗಿ ಮುಂದೆ ಬಂದು, ಅವರನ್ನು ತಂಡಗಳಲ್ಲಿ ತಪಾಸಣೆಗಾಗಿ ವಾಪಸ್ಸು ಆಸ್ಪತ್ರೆಗೆ ಕರೆದೊಯ್ದರು. ಅವರಲ್ಲಿನ ಕೆಲವರನ್ನಾದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳುತ್ತಾರೆಂಬುದು ಅವರ ನಿರೀಕ್ಷೆಯಾಗಿತ್ತು.
ಈ ವರದಿಗಾರನು, ಮೂರು ದಿನಗಳ ಹಿಂದೆ, ಟೆಹರಾನಿನ ಭಾರತೀಯ ರಾಯಭಾರ ಕಛೇರಿಗೆ ಕಳುಹಿಸಿದ ಪ್ರಶ್ನಾವಳಿಗೆ ಉತ್ತರವನ್ನು ಇದುವರೆಗೂ ರವಾನಿಸಿರುವುದಿಲ್ಲ.








