ಮನ್ಸೂರ್ ಆಲಮ್ ಶೇಖ್ ಅವರು ಬೆಳಗಿನ 5.30ಕ್ಕೆ ಎದ್ದು ದಕ್ಷಿಣ ಮುಂಬೈ ನಗರದ ಭೂಲೇಶ್ವರದ ಚಕ್ರವ್ಯೂಹದಂತಹ ಗಲ್ಲಿಯ ಮೂಲಕ ತಮ್ಮ ಕೆಲಸಕ್ಕೆ ಹೊರಡುತ್ತಾರೆ. ಚೌಕುಳಿ ಲುಂಗಿ ತೊಟ್ಟ ಅವರು ತಮ್ಮ 500 ಲೀಟರ್ ನೀರು ಹಿಡಿಸುವ ಲೋಹದ ತಳ್ಳುಗಾಡಿಯನ್ನು ಕೊವ್ಸಾಜಿ ಪಟೇಲ್ ಕೆರೆಯತ್ತ ತಳ್ಳಲು ಆರಂಭಿಸುತ್ತಾರೆ. ಈ ಪ್ರದೇಶವು ಅವರ ಮನೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದೆ. ಮಿರ್ಝಾ ಗಾಲಿಬ್ ಮಾರ್ಕೆಟಿನ ದೂಧ್ ಬಝಾರಿನ ಬಳಿಯಿರುವ ಸಾರ್ವಜನಿಕ ಶೌಚಾಲಯದ ಮೂಲೆಯಲ್ಲಿದೆ. ಕೆರೆಯಿಂದ ಮರಳಿ ಬರುವ ಅವರು ಶೌಚಾಲಯದ ಬಳಿ ತಮ್ಮ ಗಾಡಿ ನಿಲ್ಲಿಸಲಿಕ್ಕೆ ಜಾಗವನ್ನು ಹುಡುಕಿಕೊಂಡು ತನ್ನ ಗ್ರಾಹಕರಿಗೆ ನೀರು ಹಂಚಲು ಆರಂಭಿಸುತ್ತಾರೆ.
50 ವರ್ಷದವಾರದ ಮನ್ಸೂರ್, ಈ ಕೆಲಸ ಮಾಡುವ ಮೂಲಕ ತಮ್ಮ ಬದುಕು ದೂಡಲು ಗಳಿಸುವ ಕೆಲವೇ ಭಿಸ್ಟಿಗಳಲ್ಲಿ ಒಬ್ಬರು. ಇವರು ಕಳೆದ ನಾಲ್ಕು ದಶಕಗಳಿಂದ ಐತಿಹಾಸಿಕ ಮುಂಬೈಯ ಈ ಭಾಗದ ಜನರಿಗೆ ಕುಡಿಯಲು,ಸ್ವಚ್ಛತೆ, ಮತ್ತು ತೊಳೆಯುವ ಉದ್ದೇಶಗಳಿಗಾಗಿ ನೀರನ್ನು ಪೂರೈಸುತ್ತಿದ್ದಾರೆ. ಇತ್ತೀಚೆಗೆ ಕೊವಿಡ್ - 19 ಭಿಸ್ಟಿಗಳ ಕೆಲಸಕ್ಕೆ ಅಡ್ಡಿಪಡಿಸುವವರೆಗೂ, ಮನ್ಸೂರ್ ಭೂಲೇಶ್ವರದ ಮುಷಾಕ್ ವಾಲಾಗಳಲ್ಲಿ ಒಬ್ಬರಾಗಿದ್ದರು. ಮುಷಾಕ್ ಎನ್ನುವುದು (ಮುಷಾಖ್ ಎಂದು ಕೂಡಾ ಕರೆಯಲಾಗುತ್ತದೆ) 30 ಲೀಟರ್ ನೀರು ಹಿಡಿಸುವ ಚರ್ಮದ ಚೀಲ.
ಆದರೆ ಮುಷಾಕ್ ಮೂಲಕ ಮಾಡಲಾಗುತ್ತಿದ್ದ ನೀರು ಸರಬರಾಜು “ಈಗ ಕೇವಲ ನೆನಪು”, ಎನ್ನುತ್ತಾರೆ ಮನ್ಸೂರ್. ಅವರು 2021ರಿಂದ ಪ್ಲಾಸ್ಟಿಕ್ ಬಕೆಟ್ ಬಳಸಲು ಆರಂಭಿಸಿದ್ದಾರೆ. “ಹಿರಿಯ ಭಿಸ್ಟಿಗಳು ಈಗ ತಮ್ಮ ಊರುಗಳಿಗೆ ಮರಳಿದ್ದಾರೆ. ಕಿರಿಯರು ಬೇರೆ ಕೆಲಸಗಳನ್ನು ನೋಡಿಕೊಳ್ಳಬೇಕಿದೆ,” ಎನ್ನುತ್ತಾರವರು. ಈ ಭಿಸ್ಟಿ ಕೆಲಸವು ಉತ್ತರ ಭಾರತದ ಮುಸ್ಲಿಮ್ ಸಮುದಾಯದ ಸಾಂಪ್ರದಾಯಿಕ ವೃತ್ತಿಯ ಪಳೆಯುಳಿಕೆಯಾಗಿದೆ. ʼಭಿಸ್ಟಿʼ ಎನ್ನುವುದು ಪರ್ಷಿಯನ್ ಪದ ಮತ್ತು ಇದರ ಅರ್ಥ ನೀರು ಒಯ್ಯುವವನು ಎಂದು. ಈ ಸಮುದಾಯವನ್ನು ಸಖ್ಖಾ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ. ಅರಬಿಕ್ ಭಾಷೆಯಲ್ಲಿ ಇದಕ್ಕೆ ʼನೀರು ತರುವವʼ ʼಬಟ್ಟಲು ತರುವವʼ ಎನ್ನುವ ಅರ್ಥಗಳಿವೆ. ಭಿಸ್ಟಿ ಸಮುದಯಾವನ್ನು ರಾಜಸ್ಥಾನ, ಉತ್ತರಪ್ರದೇಶ, ಹರಿಯಾಣ,ದೆಹಲಿ, ಮಧ್ಯಪ್ರದೇಶ, ಮತ್ತು ಗುಜರಾತಿನಲ್ಲಿ(ಇಲ್ಲಿ ಈ ಸಮುದಾಯವನ್ನು ಪಖಾಲಿ ಎಂದು ಗುರುತಿಸಲಾಗುತ್ತದೆ.) ಇತರೆ ಹಿಂದುಳಿದ ವರ್ಗಗಳ ಅಡಿಯಲ್ಲಿ ಗುರುತಿಸಲಾಗಿದೆ (ಒಬಿಸಿ).

























