ಮಂಗಳವಾರದ ಮಳೆಯಿಂದಾಗಿ ಮುಂಬೈನ ಶಿವಾಜಿ ಉದ್ಯಾನವನವು ಕೆಸರಿನಿಂದ ಆವೃತವಾಗಿತ್ತು, ಕಾಲಿಟ್ಟಲ್ಲೆಲ್ಲ ಜಾರುತ್ತಿತ್ತು, ಒಂದು ಹೆಜ್ಜೆ ಕೂಡ ಇಡುವಂತಿರಲಿಲ್ಲ. ಸಖುಬಾಯಿ ಜಾರಿ ಬಿದ್ದು ಅವರ ಕಾಲಿಗೆ ಗಾಯವಾಯಿತು. ಆದರೂ, ಸಖುಬಾಯಿ ನಗುತ್ತಲೇ, "ಇಲ್ಲಿಗೆ ನಾನು ನನ್ನ ದೇವರ ಪಾದಗಳನ್ನು ಮುಟ್ಟಲು ಬಂದಿದ್ದೇನೆ. ನನ್ನ ಕೈ ಮತ್ತು ಕಾಲುಗಳು ಕೆಲಸ ಮಾಡುವವರೆಗೂ, ನನ್ನ ಕಣ್ಣುಗಳಲ್ಲಿ ಬೆಳಕಿರುವವರೆಗೂ ನಾನು ಇಲ್ಲಿಗೆ ಬರುತ್ತೇನೆ, ನಾನು ಬರುತ್ತಲೇ ಇರುತ್ತೇನೆ. "
ಅವರು, ಮತ್ತು ಇಲ್ಲಿ ಸೇರಿರುವ ಬಹುತೇಕ ಎಲ್ಲರಿಗೂ ದೇವರೆಂದರೆ ಬಾಬಾ ಸಾಹೇಬ್ ಅಂಬೇಡ್ಕರ್. ಸಖುಬಾಯಿ ನವ ಬೌದ್ಧ ಸಮುದಾಯದ ದಲಿತ ಮಹಿಳೆ, ಅವರಿಗೀಗ ಸುಮಾರು 70 ವರ್ಷ. ಡಿಸೆಂಬರ್ 6ರ ಬುಧವಾರ ಇಲ್ಲಿ ಮಹಾಪರಿನಿರ್ವಾಣ ದಿನದಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು ಜಲ್ಗಾಂವ್ ಜಿಲ್ಲೆಯ ಭೂಸಾವಲ್ನಿಂದ ಇಲ್ಲಿಗೆ ಬಂದಿದ್ದಾರೆ.
ಪ್ರತಿವರ್ಷ ದಲಿತ ಸಮುದಾಯದ ಸಾವಿರಾರು, ಲಕ್ಷಾಂತರ ಜನರು ಶಿವಾಜಿ ಪಾರ್ಕ್ ಮತ್ತು ದಾದರ್ನಲ್ಲಿರುವ ಚೈತ್ಯಭೂಮಿಗಳಲ್ಲಿ ಸೇರುವ ದಿನವಿದು. ಭಾರತೀಯ ಸಂವಿಧಾನದ ಮುಖ್ಯ ಲೇಖಕ ಡಾ.ಅಂಬೇಡ್ಕರ್ ಅವರನ್ನು 1956ರಲ್ಲಿ ಅಂತ್ಯಸಂಸ್ಕಾರ ಮಾಡಿದ ಸ್ಥಳವೇ ಚೈತ್ಯಭೂಮಿ. ದೀನ ದಲಿತರ ಹಕ್ಕುಗಳಿಗಾಗಿ ಹೋರಾಡಿದ 20ನೇ ಶತಮಾನದ ಶ್ರೇಷ್ಠ ನಾಯಕ ಮತ್ತು ಸಮಾಜ ಸುಧಾರಕ ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು ಈ ಜನರು ಇಲ್ಲಿಗೆ ಬರುತ್ತಾರೆ. ಈ ಜನರು ಈ ದಿನ ಬಸ್ಸುಗಳು, ರೈಲು ಮತ್ತು ಕೆಲವೊಮ್ಮೆ ದೂರದದಿಂದ ನಡೆದು ಕೂಡ ಇಲ್ಲಿಗೆ ತಲುಪುತ್ತಾರೆ. ಅವರು ಬಹಳ ಗೌರವ, ಕೃತಜ್ಞತೆ ಮತ್ತು ಪ್ರೀತಿಯ ಭಾವನೆಯೊಂದಿಗೆ ಮುಂಬೈ, ಮಹಾರಾಷ್ಟ್ರ ಮತ್ತು ಇತರ ಹಲವು ರಾಜ್ಯಗಳ ವಿವಿಧ ಹಳ್ಳಿಗಳು ಮತ್ತು ನಗರಗಳಿಂದ ಇಲ್ಲಿಗೆ ಬರುತ್ತಾರೆ. ಅನೇಕರು ಇಲ್ಲಿಗೆ ತಲುಪುವ ಮೊದಲು ಹಲವು ದಿನಗಳ ಕಾಲ ಪ್ರಯಾಣಿಸಬೇಕಾಗುತ್ತದೆ.











