ಮುರಳೀಧರ ಜವಾಹಿರೆ ಕೆಲಸಕ್ಕೆ ಕುಳಿತರೆಂದರೆ ಮುಗಿಯಿತು, ಅಲ್ಲಿ ತಪ್ಪುಗಳಿಗೆ ಜಾಗವಿಲ್ಲ, ಏಕಾಗ್ರತೆಗೆ ಭಂಗವಿಲ್ಲ. ಸದ್ದು ಮಾಡದೆ ಲಗುಬಗೆಯಿಂದ ಓಡಾಡುವ ಅವರ ಕೈಗಳು ತೋರಣದ ತುದಿಗಳನ್ನು ಜೋಡಿಸಿ, ಅವುಗಳನ್ನು ಸೇರಿಸಿ ಶಿವದಾರದಿಂದ ಕಟ್ಟುತ್ತವೆ. ಪ್ರತಿದಿನವೂ ತಾನು ಮಾಡುವ ಬಿದಿರಿನ ಚೌಕಟ್ಟಿನ ತೋರಣಕ್ಕೆ 70ರ ಇಳಿವಯಸ್ಸಿನ ಈ ಬಡಕಲು ದೇಹವು ಇಷ್ಟು ಏಕಾಗ್ರತೆಯನ್ನು ತೋರಿಸುತ್ತದೆಂದರೆ ನೀವು ನಂಬುವುದಿಲ್ಲ.
ಮಹಾರಾಷ್ಟ್ರದ ಈಚಲಕಾರಂಜಿಯಲ್ಲಿ ಮಣ್ಣು ಮತ್ತು ಇಟ್ಟಿಗೆಯಿಂದ ಕಟ್ಟಿದ ಅವರ ನೀಲಿ ಬಣ್ಣದ ಮನೆಯ ಹೊರಗಿನ ತೋರಣ ಕಟ್ಟುವ ಜಾಗದಲ್ಲಿ ಕೆಲಸದ ಸಾಮಗ್ರಿಗಳು- ಬಿದಿರಿನ ಕಡ್ಡಿ, ಬಣ್ಣದ ಕಾಗದ, ಬ್ಯಾಗಡೆ ಕಾಗದ, ಹಳೆ ದಿನಪತ್ರಿಕೆ ಇತ್ಯಾದಿಗಳು ಹರಡಿಕೊಂಡಿರುತ್ತವೆ. ಇನ್ನು ಕೆಲವೇ ಸಮಯದಲ್ಲಿ ಇವೆಲ್ಲ ಮನೆಗೆಳ, ದೇವಸ್ಥಾನಗಳ ಬಾಗಿಲ ನೆಲುವನ್ನು ಸಿಂಗರಿಸುವ ಹಾರದಂತೆ ಸುಂದರ ತೋರಣಗಳಾಗಿ ಬದಲಾಗುತ್ತವೆ.
ಮುರಳೀಧರರ ಸುಕ್ಕುಗಟ್ಟಿದ ಕೈಗಳು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಬಿದಿರಿನ ಕಡ್ಡಿಯೊಂದನ್ನು 30 ಸಮಾನ ಅಳತೆಯ ತುಂಡುಗಳಾಗಿ ಸೀಳುತ್ತವೆ. ತನ್ನ ಸಹಜಸಿದ್ದ ಅಳತೆಯ ಅರಿಮೆಯಿಂದ ಅವುಗಳನ್ನು ಒಂಬತ್ತು ಸಮಕೋನೀಯ ತ್ರಿಭುಜಗಳಾಗಿಸುತ್ತಾರೆ. ಈ ತ್ರಿಭುಜಗಳನ್ನು 3 ಅಥವಾ 10 ಅಡಿ ಉದ್ದದ ಬಿದಿರಿನ ಕಡ್ಡಿಗೆ ಬಿಗಿಯುತ್ತಾರೆ.
ಮುರಳೀಧರರು ಆಗಾಗ್ಗೆ ತಮ್ಮ ಬೆರಳುಗಳನ್ನು ಅಲ್ಲಲ್ಲಿ ತಗ್ಗಿಹೋದ ಅಲ್ಯುಮಿನಂ ಬಟ್ಟಲಿನಲ್ಲಿದ್ದ, ಹುಣಸೆ ಬೀಜಗಳನ್ನು ಕುಟ್ಟಿ ಮಾಡಿದ ಒಂದು ರೀತಿಯ ಅಂಟು, ‘ಖಾಲ್’ನಲ್ಲಿ ಅದ್ದಿಕೊಳ್ಳುತ್ತಾರೆ. 60 ದಾಟಿರುವ ಅವರ ಹೆಂಡತಿ ಶೋಭಾ ಆ ದಿನ ಬೆಳಿಗ್ಗೆ ಅದನ್ನು ಮಾಡಿಟ್ಟಿದ್ದರು.
“ಕೆಲಸ ಮಾಡುವಾಗ ಅವರು ಒಂದೇ ಒಂದು ಮಾತು ಆಡುವುದಿಲ್ಲ, ಮತ್ತು ಅವರನ್ನು ಯಾರೂ ಅರ್ಧದಲ್ಲಿ ಮಾತನಾಡಿಸಲು ಆಗುವುದೂ ಇಲ್ಲ” ಎನ್ನುತ್ತಾರೆ ಅವರು.
ಮುರಳೀಧರರು ಅತ್ತ ಬಿದಿರಿನ ಚೌಕಟ್ಟುಗಳನ್ನು ಮಾಡಿಕೊಳ್ಳುತ್ತಿರುವಾಗ, ಇತ್ತ ಶೋಭಾ ತಾನು ಮುಂದಿನ ಅಲಂಕಾರಿಕ ಕೆಲಸಗಳಿಗೆ ಸಿದ್ದ ಮಾಡುತ್ತಾರೆ – ಅವರು ವೃತ್ತಾಕಾರದ ಬಣ್ಣದ ಬ್ಯಾಗಡೆ ಕಾಗದಗಳಿಂದ ಕುಚ್ಚುಗಳನ್ನು ಮಾಡಿಕೊಳ್ಳುತ್ತಾರೆ, “ಮನೆಯ ಸಣ್ಣಪುಟ್ಟ ಕೆಲಸಗಳು ಮುಗಿದ ಮೇಲೆ, ಈ ಕೆಲಸವನ್ನು ಮಾಡುತ್ತೇನೆ. ಆದರೆ ಈ ಕೆಲಸ ಮಾಡುವಾಗ ಕಣ್ಣಿಗೆ ಆಯಾಸವಾಗುತ್ತದೆ” ಎನ್ನುತ್ತಾರೆ.


















