ಅವರ ಇಷ್ಟದ ವಿಷಯ ಯಾವುದೆಂದು ಕೇಳಿದ್ದಕ್ಕೆ “ಇಂಗ್ಲಿಷ್” ಒಕ್ಕೊರಲಿನಿಂದ ಮಕ್ಕಳು ಉತ್ತರಿಸಿದ್ದರು. ಭಾರತದ ಯಾವುದೇ ತರಗತಿಯಲ್ಲಿ ಕೇಳಬಹುದಾದ ಒಳ್ಳೆಯ ಪ್ರಶ್ನೆಯಲ್ಲ ಇದು. ಮೊದಲೆರಡು ಮಕ್ಕಳು “ಇಂಗ್ಲಿಷ್” ಅಂದರೆ ಉಳಿದ ಅಷ್ಟೂ ಮಕ್ಕಳು ಅದನ್ನೇ ಹೇಳುವುದು ಸಾಮಾನ್ಯ. ಮೊದಲ ಇಬ್ಬರು ಉತ್ತರ ಕೊಟ್ಟು ಅವರನ್ನು ಶಿಕ್ಷಿಸದಿದ್ದಲ್ಲಿ ಉಳಿದವರೆಲ್ಲ ಅದನ್ನೇ ಹೇಳುವುದು ಶತಸ್ಸಿದ್ಧ.
ಇದು ಯಾವುದೋ ಒಂದು ಸ್ಥಳವಲ್ಲ. ಏಕ-ಶಿಕ್ಷಕ ವ್ಯವಸ್ಥೆಯ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯಿಂದ ಅಸ್ತಿತ್ವಕ್ಕೆ ಬಂದ ಎಡಲಿಪ್ಪಾರದ ಈ ಶಾಲೆ ಕೇರಳದ ಕುಗ್ರಾಮ ಮತ್ತು ಏಕೈಕ ಬುಡಕಟ್ಟು ಪಂಚಾಯತ್ ಆಗಿರುವ ಎಡಮಲಕುಡಿ ವ್ಯಾಪ್ತಿಯಲ್ಲಿದೆ. ಶಾಲೆಯ ಹೊರಗೆಲ್ಲೂ ನಿಮಗೆ ಇಂಗ್ಲಿಷ್ ಮಾತಾಡುವುದು ಕೇಳಿಸುವುದಿಲ್ಲ. ಈ ಭಾಷೆಯಲ್ಲಿ ಒಂದೇ ಒಂದು ಬೋರ್ಡ್, ಪೋಸ್ಟರ್ ಅಥವಾ ಫಲಕ ಇಲ್ಲಿಲ್ಲ. ಆದರೂ ಮಕ್ಕಳು ಇಂಗ್ಲಿಷ್ ತಮ್ಮಿಷ್ಟದ ವಿಷಯ ಅಂತಾರೆ. ಬೇರೆ ಒಂದಷ್ಟು ಶಾಲೆಗಳ ಹಾಗೆಯೇ ಇಡುಕ್ಕಿ ಜಿಲ್ಲೆಯ ಈ ಶಾಲೆಯಲ್ಲೂ ಒಂದರಿಂದ ನಾಲ್ಕನೇ ತರಗತಿವರೆಗಿನ ಕ್ಲಾಸುಗಳನ್ನು ಒಂದು ಕೋಣೆಯಲ್ಲಿ ಒಟ್ಟಿಗೇ ನಡೆಸಲಾಗುತ್ತದೆ. ಉಸ್ತುವಾರಿ ಹೊಣೆ ಹೊತ್ತಿರುವಾಕೆ ಅಸಾಧ್ಯ ಪರಿಸ್ಥಿತಿಗಳ ಜತೆಗೆ ಏಗುತ್ತ, ಅತೀ ಕೆಲಸದೊತ್ತಡಗಳ ನಡುವೆ, ಕನಿಷ್ಟ ವೇತನ ಪಡೆಯುತ್ತಿದ್ದರೂ ತನ್ನ ಜನಗಳ ಒಳಿತೊಂದೇ ಧ್ಯೇಯವೆಂದು ನಂಬಿದ ಅದ್ಭುತ ಶಿಕ್ಷಕಿ.
ಅಲ್ಲೂ ಒಬ್ಬ ಭಿನ್ನಮತೀಯನಿದ್ದ!! “ಗಣಿತ” ಧೈರ್ಯವಾಗಿ ಎದ್ದು ನಿಂತು ಹೇಳಿದ. “ನಿನ್ನ ಗಣಿತ ಪ್ರದರ್ಶಿಸು” ಹುಡುಗನಿಗೆ ಸವಾಲೆಸೆಯುವಂತೆ ಕೇಳಿದ್ದೆವು. ತನ್ನ ಪುಟಾಣಿ ದೇಹವನ್ನ ಹುರಿಗೊಳಿಸುತ್ತ ಎದ್ದು ನಿಂತವನು ಒಂದರಿಂದ ಹನ್ನೆರಡರ ವರೆಗಿನ ಮಗ್ಗಿಯನ್ನು ಅಡೆತಡೆಯಿಲ್ಲದೇ ಒಂದೇ ಉಸಿರಿನಲ್ಲಿ ಹೇಳಿದ್ದ. ನಾವದನ್ನು ನಿಲ್ಲಿಸಲು ಹೇಳುವಷ್ಟರಲ್ಲಿ ಅವನಾಗಲೇ ಎರಡನೇ ಸುತ್ತು ತಲುಪಿದ್ದ.





