ಈ ವರದಿಯು ಪರಿಸರ ವರದಿಯ ವಿಭಾಗದಲ್ಲಿ 2019ರ ವರ್ಷದ ರಾಮನಾಥ್ಗೋ ಯೆಂಕಾ ಪ್ರಶಸ್ತಿಯನ್ನು ಗೆದ್ದ ಪರಿಯ ಹವಾಮಾನ ಬದಲಾವಣೆ ಕುರಿತ ಸರಣಿಯ ಭಾಗವಾಗಿದೆ.
ಈಗ ಮುಂಜಾನೆ 11.40 ರ ಸಮಯ. ಬೀಸುತ್ತಿರುವ ಗಾಳಿಯ ವೇಗದ ಬಗ್ಗೆ ಸುದ್ದಿಯನ್ನು ಬಿತ್ತರಿಸಲಾಗುತ್ತದೆ ಎಂಬುದಾಗಿ ಕಡಲ್ ಒಸಯ್ ರೇಡಿಯೋ ಕೇಂದ್ರದ ಯಶವಂತ್ ತಿಳಿಸುತ್ತಿದ್ದಾರೆ. "ಕಳೆದ ಒಂದು ವಾರ ಅಥವ ತಿಂಗಳಿನಿಂದ ಕಛಾನ್ ಕಾಥು (ದಕ್ಷಿಣ ಮಾರುತ) ಬಹಳ ತೀವ್ರವಾಗಿತ್ತು. ಇದರ ವೇಗವು ಗಂಟೆಗೆ 40 ರಿಂದ 60 ಕಿ.ಮೀ. ನಷ್ಟಿದ್ದಿತು. ಇಂದು ಮೀನುಗಾರರಿಗೆ ಸಹಕರಿಸಲೋ ಎಂಬಂತೆ ಅದರ ವೇಗವು ಗಂಟೆಗೆ 15 ಕಿ.ಮೀ. ನಷ್ಟಿದೆ."
ತಮಿಳು ನಾಡಿನ ರಾಮನಾಥಪುರಂ ಜಿಲ್ಲೆಯ ಮೀನುಗಾರರಿಗೆ ಇದು ಮಹತ್ವದ ಸಮಾಚಾರವೇ ಹೌದು. "ಅಂದರೆ, ಅವರು ಯಾವುದೇ ಭಯವಿಲ್ಲದಂತೆ ಸಮುದ್ರಕ್ಕಿಳಿಯಬಹುದು", ಎನ್ನುತ್ತಾರೆ ಸ್ವತಃ ಮೀನುಗಾರರೂ ಆದ ಯಶವಂತ್. ಈ ಪ್ರದೇಶದ ನೆರೆಯಲ್ಲಿರುವ ಸಾಮುದಾಯಿಕ ರೇಡಿಯೋ ಕೇಂದ್ರವಾದ ಕಡಲ್ ಒಸಯ್ನಲ್ಲಿ (ಕಡಲ ದನಿ) ಇವರು ರೇಡಿಯೋ ಜಾಕಿಯಾಗಿದ್ದಾರೆ.
ರಕ್ತದಾನವನ್ನು ಕುರಿತ ವಿಶೇಷ ಪ್ರಕಟಣೆಗಾಗಿ ಯಶವಂತ್, "ತಾಪಮಾನವು 32 ಡಿಗ್ರಿ ಸೆಲ್ಸಿಯಸ್ನಲ್ಲಿದ್ದು, ಸಾಕಷ್ಟು ನೀರನ್ನು ಸೇವಿಸಿ. ಬಿಸಿಲಿಗೆ ತೆರಳಬೇಡಿ", ಎನ್ನುತ್ತಾ ಹವಾಮಾನ ವರದಿಯನ್ನು ಸಮಾಪ್ತಿಗೊಳಿಸುತ್ತಾರೆ.
ಇದು ಅತ್ಯಗತ್ಯ ಮುನ್ನೆಚ್ಚರಿಕೆಯೂ ಹೌದು. ಏಕೆಂದರೆ ಪಂಬನ್ನಲ್ಲಿನ ಈಗಿನ ದಿನಗಳು, ಯಶವಂತ್ ಹುಟ್ಟಿದ 1996 ರಲ್ಲಿ ಇದ್ದುದಕ್ಕಿಂತಲೂ ಹೆಚ್ಚಿನ ತಾಪಮಾನದಿಂದ ಕೂಡಿವೆ. ಆಗ ವರ್ಷಂಪ್ರತಿ 162 ದಿನಗಳಲ್ಲಿನ ತಾಪಮಾನವು 32 ಡಿಗ್ರಿ ಸೆಲ್ಸಿಯಸ್ ತಲುಪುತ್ತಿತ್ತು ಅಥವ ಅದನ್ನು ಹಾದುಹೋಗುತ್ತಿತ್ತು. ಈಗಲೂ ಪೂರ್ಣಾವಧಿ ಮೀನುಗಾರಿಕೆಯಲ್ಲಿ ತೊಡಗಿರುವ ಆತನ ತಂದೆ ಅಂಥೋನಿ ಸಮಿ ವಸ್ ಹುಟ್ಟಿದ 1973 ರಲ್ಲಿ ಅದರ ಸಂಖ್ಯೆಯು, ವರ್ಷಂಪ್ರತಿ 125 ದಿನಗಳಿಗಿಂತಲೂ ಹೆಚ್ಚಿರುತ್ತಿರಲಿಲ್ಲ. ಈ ಜುಲೈನಲ್ಲಿ ಆನ್ಲೈನ್ನಲ್ಲಿ ಪ್ರಕಟಗೊಂಡ ನ್ಯೂಯಾರ್ಕ್ ಟೈಮ್ಸ್ ನ ಹವಾಮಾನ ಮತ್ತು ಜಾಗತಿಕ ತಾಪಮಾನವನ್ನು ಕುರಿತ ಸಂವಾದಾತ್ಮಕ ಸಾಧನದ ಲೆಕ್ಕಾಚಾರದ ಪ್ರಕಾರ; ಇಂದು ವರ್ಷಂಪ್ರತಿ ಬಿಸಿಲಿನಿಂದ ಕೂಡಿದ ದಿನಗಳ ಸಂಖ್ಯೆ ಕನಿಷ್ಟ 180.
ಹೀಗಾಗಿ, ಯಶವಂತ್ ಹಾಗೂ ಆತನ ಸಹೋದ್ಯೋಗಿಗಳು ಹವಾಮಾನವನ್ನಷ್ಟೇ ಅಲ್ಲದೆ, ಹವಾಗುಣದ ಪ್ರಮುಖ ಅಂಶಗಳನ್ನೂ ಸಹ ಹೆಚ್ಚು ಶ್ರಮವಹಿಸಿ ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆತನ ತಂದೆ ಮತ್ತು ದ್ವೀಪದ ಎರಡು ಪ್ರಮುಖ ಪಟ್ಟಣಗಳಾದ ಪಂಬನ್ ಮತ್ತು ರಾಮೇಶ್ವರಂನ ಸುಮಾರು 83 ಸಾವಿರದಷ್ಟಿರುವ ಮೀನುಗಾರ ಸಂಗಡಿಗರು ಹವಾಮಾನ ಬದಲಾವಣೆಯ ಸೂಕ್ತ ತಿಳುವಳಿಕೆಗಾಗಿ ಅವರತ್ತ ನೋಡುತ್ತಿದ್ದಾರೆ.









