"ಹದಿನಾಲ್ಕು, ಹದಿನಾರು, ಹದಿನೆಂಟು ..." ಹದಿನೆಂಟು ಇಟ್ಟಿಗೆಗಳು ಮುಗಿದ ನಂತರ, ಖಂಡೂ ಮಾನೆ ಅಠ್ಠಯ್ಯನ ಬೆನ್ನ ಮೇಲೆ ಪೇರಿಸುತ್ತಿದ್ದ ಇಟ್ಟಿಗೆ ಎಣಿಸುವುದನ್ನು ನಿಲ್ಲಿಸುತ್ತಾರೆ. ನಂತರ ಕತ್ತೆಯ ಬಳಿ ಹೊರಡುವಂತೆ ಹೇಳುತ್ತಾ: “ಚಲಾ,… ಫರ್ರ್… ಫರ್ರ್…” ಎನ್ನುತ್ತಾರೆ. ಅಠ್ಠಯ್ಯ ಮತ್ತು ಇನ್ನೆರಡು ಕತ್ತೆಗಳು ಅಲ್ಲಿಂದ 50 ಮೀಟರ್ ದೂರದಲ್ಲಿರುವ ಇಟ್ಟಿಗೆ ಭಟ್ಟಿ ಕಡೆಗೆ ನಡೆಯತೊಡಗುತ್ತವೆ. ಅಲ್ಲಿ ಇಟ್ಟಿಗೆಗಳನ್ನು ಸುಡುವ ಸಲುವಾಗಿ ಇಳಿಸಿಕೊಳ್ಳಲಾಗುತ್ತದೆ,
"ಇನ್ನೊಂದು ಗಂಟೆ ಕೆಲಸವಿದೆ, ನಂತರ ನಾವು ವಿಶ್ರಾಂತಿ ಪಡೆಯುತ್ತೇವೆ" ಎಂದು ಖಂಡೂ ಹೇಳಿದರು. ಆದರೆ ಆಗ ಬೆಳಗಿನ ಕೇವಲ ಒಂಬತ್ತು ಗಂಟೆ! ನಮ್ಮ ಗಲಿಬಿಲಿಗೊಂಡ ಮುಖಗಳನ್ನು ನೋಡುತ್ತ ಅವನು ವಿವರಿಸಿದರು: "ನಾವು ಒಂದು ಗಂಟೆಗೆ, ರಾತ್ರಿಯ ಕತ್ತಲಿನಲ್ಲಿ ಕೆಲಸ ಆರಂಭಿಸಿದ್ದೆವು. ನಮ್ಮ ಶಿಫ್ಟ್ ಬೆಳಿಗ್ಗೆ 10 ಗಂಟೆಗೆ ಕೊನೆಗೊಳ್ಳುತ್ತದೆ. ರಾತ್ಭರ್ ಹೇ ಅಸಚ್ ಚಾಲೂ ಆಹೆ [ನಾವು ಇಡೀ ರಾತ್ರಿ ಕೆಲಸ ಮಾಡಿದ್ದೇವೆ].
ಖಂಡೂ ಅವರ ನಾಲ್ಕು ಕತ್ತೆಗಳು ಇಟ್ಟಿಗೆ ಇಳಿಸಿ ತಮ್ಮ ಚೀಲಗಳೊಡನೆ ಅವರ ಬಳಿ ಮರಳಿದವು. ಅವರು ಮತ್ತೆ ಆರಂಭಿಸಿದರು: “ಹದಿನಾಲ್ಕು, ಹದಿನಾರು, ಹದಿನೆಂಟು…”
ನಂತರ, ಇದ್ದಕ್ಕಿದ್ದಂತೆ, "ರುಕೊ ..." ಅವರು ತನ್ನ ಕತ್ತೆಗಳಲ್ಲಿ ಒಂದನ್ನು ಹಿಂದಿಯಲ್ಲಿ ಕರೆದರು. "ನಮ್ಮ ಸ್ಥಳೀಯ ಕತ್ತೆಗಳು ಮರಾಠಿಯನ್ನು ಅನುಸರಿಸುತ್ತವೆ, ಆದರೆ ಇದಕ್ಕೆ ಮರಾಠಿ ಅರ್ಥವಾಗುವುದಿಲ್ಲ. ಅದು ರಾಜಸ್ಥಾನದ ಕತ್ತೆ. ನಾವು ಅದಕ್ಕೆ ಹಿಂದಿಯಲ್ಲಿ ಸೂಚನೆ ನೀಡಬೇಕು" ಎಂದು ಅವರು ಹೃತ್ಪೂರ್ವಕ ನಗುವಿನೊಂದಿಗೆ ಹೇಳಿದರು. ಮತ್ತು ನಮಗಾಗಿ ಒಂದು ಡೆಮೋ ನೀಡಿದರು : ರುಕೊ. ಕತ್ತೆ ನಿಂತಿತು. ಚಲೋ. ಕತ್ತೆ ಚಲಿಸತೊಡಗಿತು.
ತನ್ನ ನಾಲ್ಕು ಕಾಲಿನ ಸ್ನೇಹಿತರ ಬಗ್ಗೆ ಖಂಡೂ ಅವರ ಮುಖದಲ್ಲಿ ಹೆಮ್ಮೆ ಎದ್ದು ಕಾಣುತ್ತದೆ. "ಲಿಂಬೂ ಮತ್ತು ಪಂಢರಿಯಾ ಮೇಯಲು ಹೊರಟಿದ್ದಾರೆ, ಮತ್ತು ನನ್ನ ನೆಚ್ಚಿನ ಬುಲೆಟ್ ಕೂಡ. ಅವಳು ಎತ್ತರ ಮತ್ತು ಸೊಗಸಾದ ಮತ್ತು ಸೂಪರ್ ಫಾಸ್ಟ್ ಕತ್ತೆ!"
















